×
Ad

ಮಂಡ್ಯದ 3 ಪುರಸಭೆಗಳಿಗೆ ಚುನಾವಣೆ: ಮೇ 9 ರಿಂದ ನಾಮಪತ್ರ ಸಲ್ಲಿಕೆ

Update: 2019-05-08 22:50 IST

ಮಂಡ್ಯ, ಮೇ 8: ಮಳವಳ್ಳಿ, ಶ್ರೀರಂಗಪಟ್ಟಣ ಹಾಗೂ ಕೆ.ಆರ್.ಪೇಟೆ ಪುರಸಭೆಗಳಿಗೆ ಮೇ 29 ರಂದು ಚುನಾವಣೆ ನಡೆಯಲಿದ್ದು, ನಾಳೆ(ಮೇ 9) ಜಿಲ್ಲಾಧಿಕಾರಿ ಡಾ.ಪಿ.ಸಿ.ಜಾಫರ್ ಚುನಾವಣಾ ಅಧಿಸೂಚನೆ ಹೊರಡಿಸಲಿದ್ದಾರೆ.

ಮೇ 16 ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದ್ದು, 17 ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. 20 ಉಮೇದುವಾರಿಕೆ ಹಿಂಪಡೆಯಲು ಕೊನೆ ದಿನವಾಗಿದ್ದು, 29 ರಂದು ಬೆಳಗ್ಗೆ 7 ರಿಂದ ಸಂಜೆ 5ರವರೆಗೆ ಚುನಾವಣೆ ನಡೆಯಲಿದೆ. 31 ರಂದು ಮತ ಎಣಿಕೆ ಆಗಲಿದೆ.

ಮಳವಳ್ಳಿ ಪುರಸಭೆಯ 23 ವಾರ್ಡ್‍ಗಳಿಗೆ 29 ಮತಗಟ್ಟೆ ಸ್ಥಾಪಿಸಲಾಗಿದ್ದು, 30,883 ಮತದಾರರಿದ್ದಾರೆ. 23 ವಾರ್ಡ್ ಹೊಂದಿರುವ ಶ್ರೀರಂಗಪಟ್ಟಣ ಪುರಸಭೆಯಲ್ಲಿ 23 ಮತಗಟ್ಟೆ ಸ್ಥಾಪಿಸಿದ್ದು, 19,294 ಮತದಾರರು ಹಕ್ಕು ಚಲಾಯಿಸಲಿದ್ದಾರೆ. ಕೆ.ಆರ್.ಪೇಟೆಯಲ್ಲೂ 23 ವಾರ್ಡ್‍ಗಳಿದ್ದು, 23 ಮತಗಟ್ಟೆ ಸ್ಥಾಪಿಸಲಾಗಿದೆ. 19,601 ಮತದಾರರು ಇದ್ದಾರೆ.

ಮಳವಳ್ಳಿ ಪುರಸಭಾ ಕಾರ್ಯಾಲಯ, ಮಿನಿ ವಿಧಾನಸೌಧ, ಸರಕಾರಿ ಪದವಿ ಪೂರ್ವ ಕಾಲೇಜು, ಶ್ರೀರಂಗಪಟ್ಟಣದ ಸಹಾಯಕ ಕೃಷಿ ನಿರ್ದೇಶಕರ ಕಚೇರಿ, ಪುರಸಭಾ ಕಾರ್ಯಾಲಯ, ಸಹಾಯಕ ತೋಟಗಾರಿಕಾ ನಿರ್ದೇಶಕರ ಕಚೇರಿ, ಕೆ.ಆರ್.ಪೇಟೆಯ ಪುರಸಭಾ ಕಾರ್ಯಾಲಯ, ಪುರಸಭಾ ಎಚ್.ಜೆ.ಎಸ್.ಆರ್.ವೈ. ಭವನ, ತಾಲೂಕು ಪಂಚಾಯತ್ ಕಾರ್ಯಾಲಯದಲ್ಲಿ ನಾಮಪತ್ರ ಸ್ವೀಕರಿಸಲಾಗುವುದು.

ಉಮೇದುವಾರಿಕೆ ಅರ್ಜಿಯನ್ನು ಸಲ್ಲಿಸುತ್ತಿರುವ ವಾರ್ಡಿನ ಮತದಾರನಲ್ಲದೆ ಅದೇ ನಗರ ಸ್ಥಳೀಯ ಸಂಸ್ಥೆಯ ಬೇರೆ ವಾರ್ಡಿನ ಮತದಾರಾಗಿದ್ದಲ್ಲಿ ನಾಮಪತ್ರದ ಜೊತೆ ತಹಶೀಲ್ದಾರ್ ರಿಂದ ಪಡೆದಿರುವ ಆ ಭಾಗದ ಮತದಾರರ ಪಟ್ಟಿಯ ದೃಢೀಕೃತ ಪ್ರತಿಯನ್ನು ಲಗತ್ತಿಸಿರಬೇಕು.

ಚುನಾವಣೆಯನ್ನು ಮುಕ್ತವಾಗಿ ಹಾಗೂ ನಿಷ್ಪಕ್ಷಪಾತವಾಗಿ ನಡೆಸಲು ರಾಜಕೀಯ ಪಕ್ಷಗಳು. ಸಾರ್ವಜನಿಕರು, ಅಭ್ಯರ್ಥಿಗಳು ಸಹಕರಿಸುವಂತೆ  ಜಿಲ್ಲಾಧಿಕಾರಿ ಡಾ.ಪಿ.ಸಿ.ಜಾಫರ್ ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News