ಮಂಡ್ಯ: ಕಬ್ಬು ಬಾಕಿ ಹಣಕ್ಕೆ ಒತ್ತಾಯಿಸಿ ತಹಶೀಲ್ದಾರ್ ಕಚೇರಿಯಲ್ಲಿ ಧರಣಿ

Update: 2019-05-09 11:29 GMT

ಮಂಡ್ಯ, ಮೇ 8: ಮದ್ದೂರು ತಾಲೂಕಿನ ಕೆ.ಎಂ.ದೊಡ್ಡಿಯ ಚಾಂಷುಗರ್ ಹಾಗೂ ಕೊಪ್ಪದ ಎನ್.ಎಸ್.ಎಲ್ ಸಕ್ಕರೆ ಕಾರ್ಖಾನೆಗಳಿಗೆ ಸರಬರಾಜು ಮಾಡಿರುವ ರೈತರ ಕಬ್ಬಿನ ಬಾಕಿ ಹಣ ಪಾವತಿಗೆ ಆಗ್ರಹಿಸಿ ರೈತರು ಪಟ್ಟಣದ ತಾಲೂಕು ಕಚೇರಿಯ ತಹಶೀಲ್ದಾರ್ ಚೇಂಬರ್ ನಲ್ಲಿ ಬುಧವಾರ ಪ್ರತಿಭಟನೆ ಮಾಡಿದರು.

ಬಾಕಿ ಹಣಕ್ಕಾಗಿ ಹಲವಾರು ಬಾರಿ ಪ್ರತಿಭಟನೆ ಮಾಡಿದರೂ ಪ್ರಯೋಜನ ಆಗದ ಕಾರಣ ಆಕ್ರೋಶಗೊಂಡ ರೈತರು, ತಹಸೀಲ್ದಾರ್ ಚೇಂಬರ್ ನಲ್ಲೇ ರೈತರ ಪ್ರತಿಭಟನೆ ಮಾಡಿ ಆಕ್ರೋಶ ವ್ಯಕ್ತಪಡಿಸಿದರು.

ರೈತ ಸಂಘದ ಮುಖಂಡ ವಿಶ್ವನಾಥ್ ಮಾತನಾಡಿ, ತಾಲೂಕಿನ ಕೆ.ಎಂ. ದೊಡ್ಡಿಯ ಚಾಂಷುಗರ್ ಕಾರ್ಖಾನೆ ಕಬ್ಬಿನ ಬಾಕಿ ನೀಡಿಲ್ಲವೆಂದು ಪ್ರತಿಭಟನೆ ಮಾಡಿದ್ದಾಗ ಸ್ಥಳಕ್ಕೆ ಆಗಮಿಸಿದ್ದ ತಹಸೀಲ್ದಾರ್ ಗೀತಾ ಅವರು ಬಿಲ್ ಪಾವತಿಸುತ್ತೇನೆ ಎಂದು ಮಾತು ಕೊಟ್ಟಿದ್ದರು. ಆದರೆ, ಬಿಲ್ ಪಾವತಿ ಆಗದ ಹಿನ್ನಲೆ ಕಚೇರಿಗೆ ತೆರಳಿ ಚೇಂಬರ್ ನಲ್ಲೇ ಧರಣಿ ನಡೆಸಲಾಗುತ್ತಿದೆ ಎಂದರು.

ಭರವಸೆಯಂತೆ ತಹಶೀಲ್ದಾರ್ ಅವರು ಕಬ್ಬಿನ ಬಾಕಿ ಹಣ ಕೊಡಿಸಬೇಕು. ಅಲ್ಲಿವರೆಗೂ ಕದಲುವುದಿಲ್ಲ ಎಂದು ಪ್ರತಿಭಟನಾಕಾರರು ತಹಸೀಲ್ದಾರ್ ಅವರ ಚೇಂಬರ್ ನಲ್ಲೆ ಧರಣಿ ಮುಂದುವರಿಸಿ ಧಿಕ್ಕಾರ ಕೂಗಿದರು. ಸ್ಥಳಕ್ಕೆ ಆಗಮಿಸಿದ ಉಪ ವಿಬಾಗಧಿಕಾರಿ ರಾಜೇಶ್ ಮಾತನಾಡಿ, ಜಿಲ್ಲಾಧಿಕಾರಿಗಳ ಜೊತೆಯಲ್ಲಿ ಚರ್ಚೆ ಮಾಡಿ ಶೀಘ್ರವಾಗಿ ಕಬ್ಬಿನ ಬಾಕಿ ಕೊಡಿಸುವುದಾಗಿ ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂಪಡೆಯಲಾಯಿತು.

ಬಸವರಾಜು, ಬೋರಣ್ಣ, ದರ್ಶನ್, ನಿಂಗೇಗೌಡ, ಶಿವಕುಮಾರ್ ನಾಗರಾಜು, ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News