ಮುಖ್ಯಮಂತ್ರಿ ಕುಮಾರಸ್ವಾಮಿ ಅವಧಿ ಪೂರ್ಣಗೊಳಿಸಲಿದ್ದಾರೆ: ಸಚಿವ ಎಚ್.ಡಿ.ರೇವಣ್ಣ
ಬೆಂಗಳೂರು, ಮೇ 9: ರಾಜ್ಯದಲ್ಲಿನ ಮೈತ್ರಿ ಸರಕಾರಕ್ಕೆ ಯಾವ ತೊಂದರೆಯೂ ಆಗುವುದಿಲ್ಲ. ಮುಖ್ಯಮಂತ್ರಿ ಕುಮಾರಸ್ವಾಮಿ ಐದು ವರ್ಷ ತನ್ನ ಆಡಳಿತಾವಧಿಯನ್ನು ಪೂರ್ಣಗೊಳಿಸಲಿದ್ದಾರೆ ಎಂದು ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಹೇಳಿದ್ದಾರೆ.
ಗುರುವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಮಾಜಿ ಸಿಎಂ ಸಿದ್ದರಾಮಯ್ಯ ಅವರು ಮತ್ತೆ ಮುಖ್ಯಮಂತ್ರಿಯಾಗಬೇಕೆಂಬ ಕಾಂಗ್ರೆಸ್ ಶಾಸಕರ ಹೇಳಿಕೆಗೆ ನಾನು ಪ್ರತಿಕ್ರಿಯಿಸುವುದಿಲ್ಲ. ಈ ಬಗ್ಗೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು, ರಾಜ್ಯಾಧ್ಯಕ್ಷರು, ಸಿಎಂ ಗಮನಹರಿಸಲಿದ್ದಾರೆ ಎಂದರು. ಯಾವುದೇ ಗೊಂದಲವಿದ್ದರೆ ಮೈತ್ರಿಕೂಟದ ಸಮನ್ವಯ ಸಮಿತಿ ಸಭೆಯಲ್ಲಿ ಚರ್ಚಿಸಿ ಬಗೆಹರಿಸಿಕೊಳ್ಳಲಾಗುವುದು ಎಂದ ಅವರು, ರಾಷ್ಟ್ರೀಯಾಧ್ಯಕ್ಷ ದೇವೇಗೌಡ ಮತ್ತು ಸಿಎಂ ಕುಮಾರಸ್ವಾಮಿ ಕೊಟ್ಟ ಕೆಲಸವನ್ನು ಮಾಡುವುದಷ್ಟೇ ನನ್ನ ಕೆಲಸ ಎಂದು ಹೇಳಿದರು.
ವೈಯಕ್ತಿಕ ಹಿತವಿಲ್ಲ: ಹಾಸನ ಜಿಲ್ಲಾಧಿಕಾರಿ ಹಾಗೂ ತಮ್ಮ ವಿರುದ್ಧ ಯಾವುದೇ ವೈಯಕ್ತಿಕ ಹಿತಾಸಕ್ತಿ ಇಲ್ಲ. ಬಡವರ, ಜನರ ಕೆಲಸವಾಗಬೇಕೆಂಬುದಷ್ಟೇ ತಮ್ಮ ಕಾಳಜಿ. ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ಪರಿಹಾರ ಕಾಮಗಾರಿ, ಕುಡಿಯುವ ನೀರಿನ ವಿಚಾರದಲ್ಲಿ ಚರ್ಚೆ ಮಾಡಲಾಗಿದೆ ಎಂದರು.
ಮೇ 15ರಿಂದ ಆಲೂಗಡ್ಡೆ ಬಿತ್ತನೆ ಆರಂಭವಾಗುತ್ತದೆ. ಆಲೂಗಡ್ಡೆ ಬಿತ್ತನೆ ಬೀಜ, ಔಷಧಿ, ರಸಗೊಬ್ಬರ ಪೂರೈಕೆಯಲ್ಲಿ ತೊಂದರೆಯಾಗದಂತೆ ಜಿಲ್ಲಾಧಿಕಾರಿಗಳು ಕ್ರಮ ವಹಿಸಬೇಕು ಎಂದ ಅವರು, ಪಿಡಿ ಖಾತೆಯಲ್ಲಿ 10ಕೋಟಿ ರೂ.ಹಣವಿದೆ. ಕುಡಿಯುವ ನೀರಿಗೆ 5 ಕೋಟಿ ಹಣ ಒದಗಿಸಲಾಗಿದೆ. ಆದರೂ ಹಣ ಬಿಡುಗಡೆ ಮಾಡಿಲ್ಲ ಎಂದು ಪ್ರಶ್ನಿಸಲಾಗಿದೆ ಎಂದು ಸ್ಪಷ್ಟನೆ ನೀಡಿದರು.
ನನ್ನ ಇಲಾಖೆಯಲ್ಲಿ ನಾನು ಯಾವುದೇ ತುಂಡು ಗುತ್ತಿಗೆ ಕಾಮಗಾರಿ ನೀಡಿಲ್ಲ. ಸಿಂಗಲ್ ಟೆಂಡರ್ ಇರುವುದರಿಂದ ಮರು ಟೆಂಡರ್ ಕರೆಯಲು ಸೂಚಿಸಲಾಗಿದೆ. ಗುಣಮಟ್ಟದಲ್ಲಿ ಲೋಪವಾದರೆ ಅಧಿಕಾರಿಗಳೇ ಹೊಣೆ ಎಂಬ ಎಚ್ಚರಿಕೆಯನ್ನೂ ನೀಡಲಾಗಿದೆ ಎಂದು ರೇವಣ್ಣ ವಿವರಿಸಿದರು.
ಮುಂದಿನ ದಿನಗಳಲ್ಲಿ ನೀವು ಉಪಮುಖ್ಯಮಂತ್ರಿ ಆಗುವ ಯೋಗವಿದೆಯೇ ಎಂಬ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವ ರೇವಣ್ಣ, ‘ಉಪವೂ ಇಲ್ಲ. ಮುಖ್ಯವೂ ಇಲ್ಲ’. ಯೋಗ ಬಂದಾಗ ಆಗುವುದನ್ನು ಯಾರೂ ತಡೆಯಲೂ ಆಗುವುದಿಲ್ಲ ಎಂದರು.