ಕನಕಪುರದ ಗೂಂಡಾಗಿರಿ ಇಲ್ಲಿ ನಡೆಯಲ್ಲ: ಸಚಿವ ಡಿಕೆಶಿ ವಿರುದ್ಧ ಜಗದೀಶ್ ಶೆಟ್ಟರ್ ವಾಗ್ದಾಳಿ

Update: 2019-05-09 12:55 GMT

ಹುಬ್ಬಳ್ಳಿ, ಮೇ 9: ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ತಮ್ಮ ಆಪ್ತರ ಮೂಲಕ ನಮ್ಮ ಕಾರ್ಯಕರ್ತರನ್ನು ಸಂಪರ್ಕಿಸಿ, ಅವರನ್ನು ಕಾಂಗ್ರೆಸ್‌ಗೆ ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ಕನಕಪುರದಲ್ಲಿ ಮಾಡುವ ಗೂಂಡಾಗಿರಿ ರಾಜಕೀಯ ಇಲ್ಲಿ ನಡೆಯಲ್ಲ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ವಾಗ್ದಾಳಿ ನಡೆಸಿದ್ದಾರೆ.

ಗುರುವಾರ ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್‌ನವರಿಗೆ ಕಾರ್ಯಕರ್ತರು ಇಲ್ಲದ ಕಾರಣ, ಬಿಜೆಪಿಯವರನ್ನು ಸೆಳೆಯುತ್ತಿದ್ದಾರೆ. ನಮ್ಮ ಕಾರ್ಯಕರ್ತರು ಮಾರಾಟದ ಸರಕಲ್ಲ ಎಂದರು.

ನಮ್ಮ ಕಾರ್ಯಕರ್ತರನ್ನು ಕೆಣಕುವ ಪ್ರಯತ್ನ ಮಾಡಿದರೆ ಪರಿಣಾಮ ನೆಟ್ಟಗೆ ಇರಲ್ಲ. ಇದು ರಾಮನಗರ, ಕನಕಪುರ ಅಲ್ಲ, ನಿಮ್ಮ ಗೂಂಡಾಗಿರಿ ಇಲ್ಲಿ ನಡೆಯುವುದಿಲ್ಲ. ಉತ್ತರ ಕರ್ನಾಟಕದ ಕಾಂಗ್ರೆಸ್ ನಾಯಕರಿಗೆ ಧಮ್ ಇಲ್ಲ. ಆದುದರಿಂದಲೇ, ಡಿಕೆಶಿ ಕುಂದಗೋಳಕ್ಕೆ ಬಂದಿದ್ದಾರೆ ಎಂದು ಅವರು ಟೀಕಿಸಿದರು.

ರಾಜ್ಯದಲ್ಲಿ ಭೀಕರ ಬರಗಾಲ ಎದುರಾಗಿದೆ. ಜನರ ಎದುರಿಸುತ್ತಿರುವ ಸಂಕಷ್ಟವನ್ನು ಪರಿಹಾರ ಮಾಡುವ ಬದಲು, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ‘ಟೆಂಪಲ್‌ ರನ್’(ದೇವಸ್ಥಾನಗಳಿಗೆ ಭೇಟಿ) ಮಾಡುತ್ತಿದ್ದಾರೆ. ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿರುವ ತಮ್ಮ ಮಗ ನಿಖಿಲ್ ಗೆಲುವಿಗಾಗಿ ದೇವಸ್ಥಾನಗಳಲ್ಲಿ ಹೋಮ, ಹವನಗಳನ್ನು ಆರಂಭಿಸಿದ್ದಾರೆ ಎಂದು ಅವರು ಟೀಕಿಸಿದರು.

ಕುಮಾರಸ್ವಾಮಿ ಹಾಗೂ ದೇವೇಗೌಡರಿಗೆ ಸೋಲಿನ ಭೀತಿ ಎದುರಾಗಿರುವುದರಿಂದ, ಈ ರೀತಿ ದೇವಸ್ಥಾನಗಳಿಗೆ ಭೇಟಿ ನೀಡುತ್ತಿದ್ದಾರೆ. ಹೋಮ, ಹವನ ಮಾಡುವುದರಿಂದ ಇವಿಎಂನಲ್ಲಿರುವ ಮತಗಳು ಬದಲಾವಣೆಯಾಗುವುದಾದರೆ, ಪವಾಡವಾಗಿ ದೇವೇಗೌಡ ಮತ್ತೆ ಪ್ರಧಾನಮಂತ್ರಿಯಾಗಬಹುದು ಎಂದು ಜಗದೀಶ್ ಶೆಟ್ಟರ್ ವ್ಯಂಗ್ಯವಾಡಿದರು.

ಬಾಲಾಕೋಟ್‌ನಲ್ಲಿ ಉಗ್ರರ ವಿರುದ್ಧ ನಡೆಸಿದ ಏರ್‌ಸ್ಟ್ರೈಕ್(ವೈಮಾನಿಕ ದಾಳಿ) ಬಗ್ಗೆ ಕಾಂಗ್ರೆಸ್‌ನವರು ಸಾಕ್ಷಿ ಕೇಳುತ್ತಿದ್ದಾರೆ. ಇದೀಗ ಇಟಲಿ ದೇಶದ ಮಾಧ್ಯಮಗಳೇ ತನಿಖಾ ವರದಿ ಪ್ರಕಟಿಸಿ, ಸುಮಾರು 120 ಉಗ್ರರು ಹತ್ಯೆಯಾಗಿದ್ದಾರೆ ಎಂದು ಸಾಕ್ಷಿ ಸಮೇತ ಖಚಿತ ಪಡಿಸಿದ್ದಾರೆ ಎಂದು ಜಗದೀಶ್ ಶೆಟ್ಟರ್ ಹೇಳಿದರು.

ಕಾಂಗ್ರೆಸ್ ಅಧಿನಾಯಕಿ ಸೋನಿಯಾಗಾಂಧಿಯವರ ದೇಶದವರೇ ಈ ವಿಷಯವನ್ನು ಖಾತ್ರಿಪಡಿಸಿದ್ದಾರೆ. ಆದುದರಿಂದ, ಇನ್ನು ಮುಂದಾದರೂ ಕಾಂಗ್ರೆಸ್‌ನವರು ಸೈನಿಕರಿಗೆ ಅಪಮಾನ ಮಾಡುವ ಪ್ರವೃತ್ತಿಯನ್ನು ಕೈ ಬಿಡಲಿ ಎಂದು ಅವರು ಆಗ್ರಹಿಸಿದರು.

ರಫೇಲ್ ಯುದ್ಧ ವಿಮಾನ ಖರೀದಿ ಸಂಬಂಧ ಒಪ್ಪಂದದಲ್ಲಿ ಹಗರಣ ನಡೆದಿದೆ ಎಂದು ಕಾಂಗ್ರೆಸ್‌ನವರು ಸುಳ್ಳು ಹೇಳಿಕೊಂಡು, ಪ್ರಧಾನಿ ನರೇಂದ್ರಮೋದಿಯ ವ್ಯಕ್ತಿತ್ವಕ್ಕೆ ಮಸಿ ಬಳಿಯುವ ಪ್ರಯತ್ನ ಮಾಡಿದರು. ಆದರೆ, ಅವರ ಆರೋಪಗಳೆಲ್ಲ ಸುಳ್ಳೆಂದು ಸಾಬೀತಾಗಿದೆ ಎಂದು ಜಗದೀಶ್ ಶೆಟ್ಟರ್ ಹೇಳಿದರು.

ಲೋಕಸಭೆ ಚುನಾವಣೆಯ ಫಲಿತಾಂಶದ ಬಳಿಕ ರಾಜ್ಯ ಸರಕಾರ ಪತನವಾಗುತ್ತದೆ. ಕಾಂಗ್ರೆಸ್ ಪಕ್ಷದವರು ಜೆಡಿಎಸ್‌ಗೆ ಕೊಟ್ಟಿರುವ ಬೆಂಬಲ ಹಿಂಪಡೆಯುತ್ತಾರೆ. ಕಾಂಗ್ರೆಸ್ ಹಾಗೂ ಜೆಡಿಎಸ್‌ನಲ್ಲಿ ಒಳ ಜಗಳ ಆರಂಭವಾಗಿದೆ. ಮೇ 23ರ ನಂತರ ಬಿಜೆಪಿ ಅಧಿಕಾರಕ್ಕೆ ಬಂದು ಯಡಿಯೂರಪ್ಪ ಮುಖ್ಯಮಂತ್ರಿ ಆಗೋದು ನಿಶ್ಚಿತ ಎಂದು ಜಗದೀಶ್ ಶೆಟ್ಟರ್ ಹೇಳಿದರು.

ಸಿದ್ದರಾಮಯ್ಯ ಮುಂದಿನ ಮುಖ್ಯಮಂತ್ರಿ ಎಂದು ಅವರ ಬೆಂಬಲಿಗರು ಬಿಂಬಿಸುತ್ತಿದ್ದಾರೆ. ಅವರು ಮುಖ್ಯಮಂತ್ರಿ ಆಗಿದ್ದಾಗ ಒಬ್ಬ ಕುರುಬ ನಾಯಕನನ್ನು ಬೆಳೆಸಲಿಲ್ಲ. ಸಿ.ಎಸ್.ಶಿವಳ್ಳಿ ಮನಸ್ಸಿನಲ್ಲೂ ಈ ಕೊರಗಿತ್ತು. ವೀರಪ್ಪಮೊಯ್ಲಿಯನ್ನು ಮಹಾನ್ ಸುಳ್ಳುಗಾರ ಎಂದು ಹೇಳುತ್ತಿದ್ದರು. ಆದರೆ, ಸಿದ್ದರಾಮಯ್ಯ ಅದಕ್ಕಿಂತ ದೊಡ್ಡ ಸುಳ್ಳುಗಾರ ಎಂದು ಅವರು ಆರೋಪಿಸಿದರು.

ಮೈತ್ರಿ ಪಕ್ಷಗಳಲ್ಲಿ ಕುದಿಯುತ್ತಿರುವ ಒಳ ಬೇಗುದಿ ಲೋಕಸಭಾ ಚುನಾವಣೆಯ ಬಳಿಕ ಸ್ಫೋಟಗೊಳ್ಳಲಿದೆ. ಇದು ಬಿಜೆಪಿಗೆ ಅನುಕೂಲವಾಗಲಿದೆ. ಮತ್ತೊಮ್ಮೆ ಬಿಜೆಪಿ ಅಧಿಕಾರ ರಚಿಸಲು ಮುಂದಾಗಲಿದೆ. ಇದರಲ್ಲಿ ನಾವು ಜಯಗಳಿಸುತ್ತೇವೆ.

-ಕೆ.ಎಸ್.ಈಶ್ವರಪ್ಪ, ಬಿಜೆಪಿ ಮುಖಂಡ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News