ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುವ ವೇಳೆ ಕಣ್ಣೀರಿಟ್ಟ ಸಚಿವ ಡಿಕೆಶಿ
Update: 2019-05-09 18:30 IST
ಹುಬ್ಬಳ್ಳಿ, ಮೇ 9: ಕುಂದಗೋಳ ಉಪ ಚುನಾವಣಾ ಪ್ರಚಾರದ ವೇಳೆ ಸಚಿವ ಡಿ.ಕೆ ಶಿವಕುಮಾರ್ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುತ್ತಾ ಮಾಜಿ ಸಚಿವ ಸಿ.ಎಸ್.ಶಿವಳ್ಳಿ ಅವರನ್ನು ನೆನೆದು ವೇದಿಕೆಯಲ್ಲೇ ಕಣ್ಣೀರಿಟ್ಟಿದ್ದಾರೆ.
ಇಂಗಳಗಿ ಗ್ರಾಮದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಅವರು, ಶಿವಳ್ಳಿ ಅವರನ್ನು ಕಳೆದುಕೊಂಡಿರುವುದು ಮನಸ್ಸಿಗೆ ಬಹಳ ನೋವನ್ನು ತಂದಿದೆ. ಶಿವಳ್ಳಿ ಜಾತಿ ಧರ್ಮ ಭೇದ ಭಾವ ಮಾಡಲಿಲ್ಲ. ಯಾರಿಗೂ ಕಿರುಕುಳ ನೀಡಿದವರಲ್ಲ ಎಂದರು.
ಶಿವಳ್ಳಿ ಪತ್ನಿ ಕುಸುಮಾ ಅವರು ಇಂದು ಚುನಾವಣೆಗೆ ನಿಂತಿದ್ದಾರೆ. ಅವರನ್ನು ನಿಮ್ಮ ಮಡಿಲಿಗೆ ಹಾಕಿದ್ದೇನೆ. ಅವರನ್ನು ಗೆಲ್ಲಿಸಿ ಮೈತ್ರಿ ಸರಕಾರವನ್ನು ಬಲಗೊಳಿಸಿ. ಈಗ ಚುನಾವಣೆ ಬಂದಿದೆ ವೋಟ್ ಕೊಡಿ ಎಂದು ಕಣ್ಣೀರು ಹಾಕುತ್ತಿಲ್ಲ. ಬದಲಿಗೆ ನನಗೆ ತುಂಬಾ ಹತ್ತಿರವಾದ ಗೆಳೆಯ ಅವನು. ಶಿವಳ್ಳಿಯನ್ನು ಕಳೆದುಕೊಂಡ ನನಗೆ ನೋವಾಗಿದೆ. ಹೀಗಾಗಿ ನನಗೆ ಅಳು ಬಂದಿದೆ. ನಾನು ನಾಟಕ ಮಾಡುತ್ತಿಲ್ಲ ಎಂದು ಹೇಳಿ ಭಾವುಕರಾದರು.