ಸಚಿವ ಶಿವಳ್ಳಿ ಸಾವಿಗೆ ಮೈತ್ರಿ ಸರಕಾರ ಕಾರಣ ಎಂದ ಶ್ರೀರಾಮುಲು: ದೂರು ನೀಡಲು ಕಾಂಗ್ರೆಸ್ ಸಿದ್ಧತೆ

Update: 2019-05-09 14:49 GMT
ಶ್ರೀರಾಮುಲು

ಹುಬ್ಬಳ್ಳಿ, ಮೇ 9: ಮುಖ್ಯಮಂತ್ರಿ ಕುಮಾರಸ್ವಾಮಿ ನೇತೃತ್ವದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರದ ಕಿರುಕುಳದಿಂದ ಸಚಿವ ಸಿ.ಎಸ್.ಶಿವಳ್ಳಿ ಸಾವನ್ನಪ್ಪಿದರು ಎಂದು ಆರೋಪಿಸಿರುವ ಬಿಜೆಪಿ ನಾಯಕ ಬಿ.ಶ್ರೀರಾಮುಲು ವಿರುದ್ಧ ದೂರು ನೀಡಲು ಕಾಂಗ್ರೆಸ್ ಸಿದ್ಧತೆ ಮಾಡಿಕೊಂಡಿದೆ.

ಗುರುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್, ಶ್ರೀರಾಮುಲು ಮಾಡಿರುವ ಆರೋಪವು ಆಘಾತಕಾರಿಯಾದದ್ದು. ಇದೊಂದು ಗಂಭೀರವಾದ ವಿಷಯವಾಗಿದ್ದು, ಶಿವಳ್ಳಿ ಸಾವಿನ ಕುರಿತು ಮಾಹಿತಿ ಇದ್ದಿದ್ದರೆ ಅವರು ಸರಕಾರ, ಸ್ಪೀಕರ್ ಹಾಗೂ ಪೊಲೀಸರಿಗೆ ಮಾಹಿತಿ ನೀಡಬೇಕಿತ್ತು ಎಂದರು.

ಒಬ್ಬ ಸಚಿವನ ಸಾವಿಗೆ ಸರಕಾರವೇ ಕಾರಣ ಎಂಬ ಆರೋಪವನ್ನು ಸುಮ್ಮನೆ ಕಡೆಗಣಿಸಲು ಸಾಧ್ಯವಿಲ್ಲ. ಆದುದರಿಂದ, ಈ ಸಂಬಂಧ ಸಮಗ್ರ ತನಿಖೆಗೆ ಆದೇಶಿಸುವಂತೆ ನಾನು ಮುಖ್ಯಮಂತ್ರಿಗೆ ಮನವಿ ಮಾಡುತ್ತೇನೆ. ಈ ಹಿಂದೆ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರಕಾರದಲ್ಲಿ ಸಚಿವರಾಗಿದ್ದ ಶ್ರೀರಾಮುಲು ತಮ್ಮ ಜೀವಕ್ಕೆ ಅಪಾಯವಿದೆ ಎಂದು ಆರೋಪಿಸಿದ್ದರು ಎಂದು ಅವರು ಹೇಳಿದರು.

ಸಂಸದ ವಿ.ಎಸ್.ಉಗ್ರಪ್ಪ ಹಾಗೂ ನಮ್ಮ ಕಾನೂನು ವಿಭಾಗದ ತಂಡ ಈ ಬಗ್ಗೆ ಚರ್ಚೆ ನಡೆಸುತ್ತಿದ್ದು, ಅಧಿಕೃತ ದೂರು ದಾಖಲಿಸಲಿದ್ದಾರೆ. ಶ್ರೀರಾಮುಲು ಆರೋಪದಿಂದ ಕುಂದಗೋಳ ಕ್ಷೇತ್ರದ ಜನ ಆಘಾತಕ್ಕೆ ಒಳಗಾಗಿದ್ದಾರೆ. ಸತ್ಯ ಏನು ಎಂಬುದು ಹೊರಗೆ ಬರಬೇಕು, ಶಿವಳ್ಳಿ ಸಾವಿಗೆ ಯಾರು ಕಾರಣ ಎಂಬುದು ಗೊತ್ತಾಗಬೇಕು ಎಂದು ಶಿವಕುಮಾರ್ ತಿಳಿಸಿದರು.

ಶಿವಳ್ಳಿಯವರು ತಮ್ಮ ಆರೋಗ್ಯದ ಬಗ್ಗೆ ಕಾಳಜಿ ಮಾಡದೆ, ಜನರಿಗಾಗಿ ದುಡಿದಿದ್ದಾರೆ. ಅವರ ಸಾವಿನ ಕುರಿತು ಶ್ರೀರಾಮುಲು ಅಣ್ಣಾ ಇಂತಹ ಮಾತುಗಳನ್ನು ಆಡಿ ಅವರ ರಾಜಕೀಯ ಗೌರವವನ್ನು ಹಾಳು ಮಾಡಿಕೊಳ್ಳಬಾರದು. ಅವರು ಸೇಡಿನ ರಾಜಕೀಯ ಮಾಡಲಿ, ನಾವು ಪ್ರೀತಿಯ ರಾಜಕಾರಣ ಮಾಡುತ್ತೇವೆ ಎಂದು ಅವರು ಹೇಳಿದರು.

ನಮ್ಮ ಪಕ್ಷದ ಎಲ್ಲ ಕಾರ್ಯಕರ್ತರಿಗೆ ಜವಾಬ್ದಾರಿ ನೀಡಲಾಗಿದೆ. ಎಲ್ಲ ಸಚಿವರು ಮತ್ತು ಮುಖಂಡರು ಇವತ್ತು ಬರಬೇಕೆಂದು ಸೂಚನೆ ನೀಡಲಾಗಿತ್ತು. ಆದರೂ, ಕೆಲವರು ಬಂದಿಲ್ಲ. ಬಂದಿರುವ ಮುಖಂಡರನ್ನು ಪ್ರಚಾರಕ್ಕೆ ಕಳುಹಿಸಲಾಗಿದೆ ಎಂದು ಶಿವಕುಮಾರ್ ತಿಳಿಸಿದರು.

ನಮಗೆ ದೊಡ್ಡವರು ಬೇಡ, ಸಣ್ಣ ಸಣ್ಣ ಕಾರ್ಯಕರ್ತರು ಬೇಕು. ನಮ್ಮ ಶಾಸಕರು ಬರದೆ ಇದ್ದರೂ, ನಮ್ಮ ಕಾರ್ಯಕರ್ತರು ಇದ್ದಾರೆ ನಾವು ಚುನಾವಣೆ ಮಾಡುತ್ತೇವೆ. ಕುಂದಗೋಳದಲ್ಲಿ ಒಳ್ಳೆಯ ಜನ ಇದ್ದಾರೆ. ನಾವು ಪರಿಶ್ರಮ ಪಟ್ಟಾಗ ನಮಗೆ ಪ್ರತಿಫಲ ಸಿಗಲು ಸಾಧ್ಯ ಎಂದು ಅವರು ಹೇಳಿದರು.

ದಿಲ್ಲಿಗೆ ಬರುವಂತೆ ಹೈಕಮಾಂಡ್ ಕಡೆಯಿಂದ ದೂರವಾಣಿ ಕರೆ ಬಂದಿತ್ತು. ಆದರೆ, ನನ್ನ ಆರೋಗ್ಯದಲ್ಲಿ ಏರುಪೇರಾಗಿರುವುದರಿಂದ, ದಿಲ್ಲಿಗೆ ಬರಲು ಸಾಧ್ಯವಿಲ್ಲ ಎಂದು ತಿಳಿಸಿದ್ದೇನೆ. ಸಿದ್ದರಾಮಯ್ಯ ನಾಯಕತ್ವದಲ್ಲಿ ನಾವು ಚುನಾವಣೆ ಎದುರಿಸಿದ್ದೇವೆ. ಆದರೂ, ಮೈತ್ರಿ ಧರ್ಮಕ್ಕೆ ನಾವು ಬದ್ಧರಿದ್ದೇವೆ. ಮುಖ್ಯಮಂತ್ರಿ ಕುರ್ಚಿ ಖಾಲಿ ಇದ್ದಾಗ ಯಾರು ಆ ಹುದ್ದೆ ಅಲಂಕರಿಸುತ್ತಾರೆ ಎಂಬುದನ್ನು ನೋಡೋಣ ಎಂದು ಅವರು ಹೇಳಿದರು.

ಮಹಾರಾಷ್ಟ್ರ ಜತೆ ನೀರು ಹಂಚಿಕೆ: ಕಳೆದ ಒಂದುವರೆ ತಿಂಗಳಿನಿಂದ ರಾಜ್ಯದ ಜನ ಕುಡಿಯುವ ನೀರು ಸಿಗದೆ ತತ್ತರಿಸಿದ್ದಾರೆ. ಹೀಗಾಗಿ ತಜ್ಞರ ತಂಡ ಸಿಎಂ ಭೇಟಿ ಮಾಡಿತ್ತು. ಕೃಷ್ಣಾ ನದಿಗೆ ನೀರು ಹರಿಸಿ ಎಂದು ಮಹಾರಾಷ್ಟ್ರಕ್ಕೆ ಬೇಡಿಕೆ ಇಟ್ಟಾಗ ಅವರು ‘ನೀರಿಗೆ ನೀರು’ ಎಂಬ ಮನವಿ ಮಾಡಿದರು. ನೀರು ತರಲು ಸಮೀಕ್ಷೆ ನಡೆಸಿ ಎಲ್ಲಿಂದ ಬಿಡಬೇಕು ಹೇಗೆ ಬಿಡಬೇಕು ಅಂತಾ ಒಪ್ಪಂದ ಮಾಡಿದ್ದೇವೆ. ಈವರೆಗೂ ನೀರು ಬಿಟ್ಟಿಲ್ಲ ಎಂದು ಶಿವಕುಮಾರ್ ತಿಳಿಸಿದರು.

ಮಹಾರಾಷ್ಟ್ರ ಮುಖ್ಯಮಂತ್ರಿಗೆ ನಮ್ಮ ಮುಖ್ಯಮಂತ್ರಿ ಮೂಲಕ ಮನವಿ ಮಾಡಿಕೊಳ್ಳಲಾಗುವುದು. ದಯವಿಟ್ಟು ಕಟ್ಟುನಿಟ್ಟಿನ ಆದೇಶ ಮಾಡಿ ನೀರು ಬಿಡಬೇಕು ಎಂದು ಮನವಿ ಮಾಡುತ್ತೇವೆ. ನೆರೆಹೊರೆ ರಾಜ್ಯಗಳು ಸಹಬಾಳ್ವೆಯಿಂದ ಇರಬೇಕು. ಈ ದೃಷ್ಟಿಯಿಂದ ನೀರು ಬೀಡಬೇಕು. 4 ಟಿಎಂಸಿ ನೀರು ಬೇಡಿಕೆ ಇದೆ, ನೀರಿನಲ್ಲಿ ರಾಜಕಾರಣ ಮಾಡಬಾರದು. ಈ ಸಂದರ್ಭದಲ್ಲಿ ಹೃದಯದ ರಾಜಕಾರಣದ ಅಗತ್ಯವಿದೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News