ಮೈತ್ರಿ ಅಭ್ಯರ್ಥಿ ಸುಭಾಷ್ ರಾಥೋಡ್ ನೀತಿಗೆಟ್ಟವನು: ಉಮೇಶ್ ಜಾಧವ್

Update: 2019-05-09 14:39 GMT

ಚಿಂಚೋಳಿ, ಮೇ 9: ಕಾಂಗ್ರೆಸ್ ನಾಯಕರ ಆರೋಪಗಳಿಗೆ ತಿರುಗೇಟು ನೀಡುವುದನ್ನು ಮುಂದುವರೆಸಿರುವ ಮಾಜಿ ಶಾಸಕ ಹಾಗೂ ಕಲಬುರಗಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಉಮೇಶ್ ಜಾಧವ್, ಇದೀಗ ಕಾಂಗ್ರೆಸ್ ಅಭ್ಯರ್ಥಿ ಸುಭಾಷ್ ರಾಥೋಡ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. 

ಗುರುವಾರ ಚಿಂಚೋಳಿಯಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಲ್ಕಾರು ಪಕ್ಷಗಳನ್ನು ತಿರುಗಿ ಬಂದ ಸುಭಾಷ್ ರಾಥೋಡ್ ನೀತಿಗೆಟ್ಟವನು. ನನ್ನ ಬಗ್ಗೆ ಹಾಗೂ ನನ್ನ ಮಗನ ಬಗ್ಗೆ ಮಾತನಾಡಲು ಅವನಿಗೆ ಅಧಿಕಾರವಿಲ್ಲ ಎಂದು ಏಕವಚನದಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

ಸುಭಾಷ್ ರಾಥೋಡ್ ತನ್ನ ಜೀವನ ಪೂರ್ತಿ ಹೋರಾಟವನು ಮಲ್ಲಿಕಾರ್ಜುನ ಖರ್ಗೆ ವಿರುದ್ಧ ನಡೆಸಿಕೊಂಡು ಬಂದಿದ್ದಾನೆ. ಈಗ ಟಿಕೆಟ್‌ಗೋಸ್ಕರ ಅವರ ಕಾಲಿಗೆ ಬಿದ್ದು, ತನ್ನತನವನ್ನು ತೋರಿಸಿಕೊಟ್ಟಿದ್ದಾನೆ. ನಾನು ಸ್ವಾಭಿಮಾನಕ್ಕೆ ಧಕ್ಕೆ ಆಗಿದ್ದರಿಂದ ಪಕ್ಷವನ್ನು ತೊರೆದಿದ್ದೇನೆ ಎಂದು ಅವರು ಹೇಳಿದರು.

ನನ್ನ ತಂದೆ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡವರು. ಅವರು ನನಗೆ ಊಟ ಮಾಡಿದ ತಟ್ಟೆಯನ್ನು ಕಾಲಿನಿಂದ ತಳ್ಳುವುದನ್ನು ಹೇಳಿ ಕೊಟ್ಟಿಲ್ಲ. ಸುಭಾಷ್ ರಾಥೋಡ್ ಈಗಾಗಲೇ ನಾಲ್ಕು ಪಕ್ಷಗಳ ತಟ್ಟೆಯನ್ನು ಕಾಲಿನಿಂದ ತಳ್ಳಿದ್ದಾನೆ ಎಂದು ಉಮೇಶ್ ಜಾಧವ್ ಆಕ್ರೋಶ ವ್ಯಕ್ತಪಡಿಸಿದರು.

ಕ್ಷೇತ್ರದ ಹೊರಗಿನವನಾದ ರಾಥೋಡ್ ಅನ್ನು ಚಿಂಚೋಳಿ ಕ್ಷೇತ್ರದ ಮತದಾರರು ತಿರಸ್ಕರಿಸಲಿದ್ದಾರೆ. ಈ ಬಾರಿ ಉಪಚುಣಾವಣೆಯಲ್ಲಿ ಸೋತ ನಂತರ ಕಾಂಗ್ರೆಸ್ ಅಭ್ಯರ್ಥಿ ಸುಭಾಷ್ ರಾಥೋಡ್ ಮತ್ತೊಮ್ಮೆ ಪಕ್ಷವನ್ನು ಬದಲಾಯಿಸಲಿದ್ದಾರೆ ಎಂದು ಅವರು ಹೇಳಿದರು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಚಿಂಚೋಳಿ ಕ್ಷೇತ್ರದಲ್ಲಿ ಪ್ರಚಾರ ನಡೆಸುವ ಬಗ್ಗೆ ಪ್ರತಿಕ್ರಿಯಿಸಿದ ಉಮೇಶ್ ಜಾಧವ್, ಅವರ ಕೆಲಸ ಅವರು ಮಾಡುತ್ತಾರೆ, ನನ್ನ ಕೆಲಸ ನಾನು ಮಾಡಲಿದ್ದೇನೆ. ಅವರ ಮಾತುಗಳಿಗೆ ಪ್ರತಿಕ್ರಿಯೆ ನೀಡಲಿದ್ದೇನೆಯೇ ಹೊರತು ಯಾವುದೇ ಆರೋಪ ಮಾಡುವುದಿಲ್ಲ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News