ಮೈಸೂರು: ಮಹಿಳೆ ಮೇಲೆ ನಾಲ್ವರಿಂದ ಸಾಮೂಹಿಕ ಅತ್ಯಾಚಾರ

Update: 2019-05-09 15:45 GMT

ಮೈಸೂರು,ಮೇ.9: ಮಹಿಳೆಯೋರ್ವಳು ತನ್ನ ಸ್ನೇಹಿತನೊಂದಿಗೆ ಬೈಕ್ ನಲ್ಲಿ ಹೋಗುತ್ತಿದ್ದ ವೇಳೆ ಅಪರಿಚಿತ ನಾಲ್ವರು ವ್ಯಕ್ತಿಗಳು ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ, ಆಕೆಯ ಜೊತೆ ಬಂದ ಆಕೆಯ ಸ್ನೇಹಿತನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಕಾಲು ಮುರಿದು ಪರಾರಿಯಾದ ಘಟನೆ ಮೈಸೂರು ನಗರದ ಹೊರವಲಯದ ಶ್ರೀರಾಂಪುರ ರಿಂಗ್ ರಸ್ತೆಯಲ್ಲಿ ಬುಧವಾರ ರಾತ್ರಿ ನಡೆದಿದೆ.

ಕೆ.ಜಿ.ಕೊಪ್ಪಲು ನಿವಾಸಿ ಮಹಿಳೆಯೋರ್ವಳು ಫೇಸ್ ಬುಕ್ ಮೂಲಕ ಪರಿಚಯವಾದ ಕೆ.ಜಿ.ಕೊಪ್ಪಲು ನಿವಾಸಿಯಾದ ತನ್ನ ಸ್ನೇಹಿತನೊಂದಿಗೆ ಬೈಕ್ ನಲ್ಲಿ ಜಯಪುರ ಠಾಣಾ ವ್ಯಾಪ್ತಿಯ ಶ್ರೀರಾಂಪುರ ರಿಂಗ್ ರಸ್ತೆಯಲ್ಲಿ ಸುತ್ತಾಡಲು ತೆರಳಿದ್ದಳು. ಬಳಿಕ ಬೈಕ್ ನ್ನು ಒಂದು ಕಡೆ ನಿಲ್ಲಿಸಿ ಇವರಿಬ್ಬರು ಮಾತನಾಡುತ್ತ ಕುಳಿತಿದ್ದರು ಎನ್ನಲಾಗಿದೆ. ಇದೇ ವೇಳೆ ಅಲ್ಲಿಯೇ ಕಾರಿನಲ್ಲಿ ಮದ್ಯಪಾನ ಮಾಡುತ್ತಿದ್ದ ಅಪರಿಚಿತ ನಾಲ್ವರು ವ್ಯಕ್ತಿಗಳು ಮಹಿಳೆಯ ಬಳಿ ಬಂದು ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎನ್ನಲಾಗಿದ್ದು, ಆಕೆಯ ಮೇಲೆ ಅತ್ಯಾಚಾರವೆಸಗಲು ಮುಂದಾಗುತ್ತಿದ್ದಂತೆ ಆಕೆಯ ಸ್ನೇಹಿತ ಕಾಮುಕರ ಕಪಿ ಮುಷ್ಟಿಯಿಂದ ಮಹಿಳೆಯನ್ನು ಬಿಡಿಸಲು ಯತ್ನಿಸಿದ್ದು, ಆತನ ಕಾಲನ್ನೇ ತುಂಡರಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಘಟನಾ ಸ್ಥಳಕ್ಕೆ ಗ್ರಾಮಾಂತರ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಜಯಪ್ರಕಾಶ್ ಮತ್ತು ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಹಿಳೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ಆರೋಪಿಗಳ ಪತ್ತೆಗೆ ನಾಲ್ಕು ತಂಡ ರಚಿಸಲಾಗಿದ್ದು, ಮಹಿಳೆಯ ಸ್ನೇಹಿತನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News