ಕೊಡಗು ಜಿಲ್ಲೆಯಲ್ಲಿ ಭೂ ಪರಿವರ್ತನೆಗೆ ಅವಕಾಶ: ಸಚಿವ ದೇಶಪಾಂಡೆ

Update: 2019-05-09 16:49 GMT

ಬೆಂಗಳೂರು, ಮೇ 9: ಕೊಡಗು ಜಿಲ್ಲೆಯಲ್ಲಿ ಕೃಷಿ ಜಮೀನನ್ನು ಕೃಷಿಯೇತರ ಉದ್ದೇಶಕ್ಕೆ ಪರಿವರ್ತನೆ ಮಾಡುವ ಪ್ರಕ್ರಿಯೆಯನ್ನು ಕಳೆದ ವರ್ಷ ಜಿಲ್ಲೆಯಲ್ಲಿ ಸುರಿದ ಭಾರಿ ಮಳೆಯಿಂದ ಆದ ಪ್ರವಾಹ ಹಾಗೂ ಪ್ರಕೃತಿ ವಿಕೋಪದಿಂದ ಸ್ಥಗಿತಗೊಳಿಸಲಾಗಿತ್ತು ಎಂದು ಕಂದಾಯ ಸಚಿವ ಆರ್.ವಿ.ದೇಶಪಾಂಡೆ ತಿಳಿಸಿದ್ದಾರೆ.

ಜಿಲ್ಲೆಯ ಜನ ಸಾಮಾನ್ಯರು ತಮ್ಮ ವಾಸ್ತವ್ಯದ ಉದ್ದೇಶಕ್ಕಾಗಿ ಮನೆ ನಿರ್ಮಿಸಲು ಭೂ ಪರಿವರ್ತನಾ ಮನವಿಗಳನ್ನು ಸಲ್ಲಿಸುತ್ತಿರುವ ಕಾರಣ, ಈ ಮನವಿಗಳನ್ನು ಸರಕಾರ ಪುರಸ್ಕರಿಸಿದೆ ಎಂದು ಅವರು ಹೇಳಿದ್ದಾರೆ.

ವಾಸ್ತವ್ಯದ ಉದ್ದೇಶಕ್ಕೆ ಮನೆ ನಿರ್ಮಾಣ ಮಾಡುವವರಿಗೆ 15 ರಿಂದ 20 ಸೆಂಟ್ಸ್ ಪ್ರದೇಶಕ್ಕೆ ಸೀಮಿತಗೊಳಿಸಿ, ಸಂಬಂಧಪಟ್ಟ ತಹಶೀಲ್ದಾರ್ ಹಾಗೂ ಉಪ ವಿಭಾಗಾಧಿಕಾರಿಗಳಿಂದ ಸ್ಥಳ ಪರಿಶೀಲನೆ ವರದಿ ಪಡೆದು ಭೂ ಪರಿವರ್ತನೆಗೆ ಅನುಮತಿಸಲು ಸರಕಾರ ಆದೇಶ ಹೊರಡಿಸಿದೆ ಎಂದು ದೇಶಪಾಂಡೆ ತಿಳಿಸಿದ್ದಾರೆ. ಅಲ್ಲದೇ, ಈ ಆದೇಶ ನೀಡುವ ಸಂದರ್ಭದಲ್ಲಿ ಮಾನವ ನಿರ್ಮಿತ ಕಟ್ಟಡಗಳಿಗೆ ಮುಂದಾಗಬಹುದಾದ ಸಂಭಾವ್ಯ ಹಾನಿಯನ್ನು ತಡೆಗಟ್ಟುವ ಉದ್ದೇಶದಿಂದ ಕೆಲವೊಂದು ಷರತ್ತುಗಳನ್ನು ವಿಧಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಷರತ್ತುಗಳು: ಭಾರತೀಯ ಭೂ ವೈಜ್ಞಾನಿಕ ಸರ್ವೇಕ್ಷಣಾ ಇಲಾಖೆಯವರು ನೀಡಿರುವ ವರದಿಯಲ್ಲಿನ ಅಂಶದಂತೆ ಕಟ್ಟಡಗಳ ರಚನೆ ಸಂಬಂಧ ನಾನ್-ಸ್ಟೇಬಲ್ ಪ್ರದೇಶದಲ್ಲಿ ಭೂ ಪರಿವರ್ತನೆಗೆ ಅವಕಾಶ ನೀಡಬಾರದು. ನದಿ, ಹಳ್ಳಗಳಿಂದ ಕನಿಷ್ಠ 10 ಮೀಟರ್ ದೂರದಲ್ಲಿರಬೇಕು. ತೀವ್ರತರವಾದ ಇಳಿಜಾರು ಮತ್ತು ಕಣಿವೆಯಂತಹ ಪ್ರದೇಶಗಳಲ್ಲಿ ಮನೆ ನಿರ್ಮಾಣ ಮಾಡುವುದು, ಅಪಾಯಕಾರಿಯಾಗಿರುವ ಹಿನ್ನೆಲೆಯಲ್ಲಿ ಭೂ ಪರಿವರ್ತನೆಗೆ ಪರಿಗಣಿಸಬಾರದು. 2018ರ ಮಳೆಗಾಲದಲ್ಲಿ ಭೂ ಕುಸಿತ ಉಂಟಾದ ಜಮೀನಿನಲ್ಲಿ ಮನೆ ನಿರ್ಮಾಣ ಮಾಡುವುದು ಸೂಕ್ತವಲ್ಲದ ಕಾರಣ ಅಂತಹ ಜಮೀನುಗಳಲ್ಲಿ ಭೂ ಪರಿವರ್ತನೆಗೆ ಪರಿಗಣಿಸಬಾರದು ಎಂಬ ಷರತ್ತುಗಳನ್ನು ವಿಧಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಇದರಿಂದಾಗಿ, ಅನೇಕ ಜನ ಬಡವರು ಸ್ವಂತ ಮನೆ ಇಲ್ಲದವರು ತಮ್ಮ ಸ್ವಂತ ವಾಸ್ತವ್ಯಕ್ಕಾಗಿ ಮನೆ ನಿರ್ಮಿಸಿಕೊಳ್ಳಲು ಅನುಕೂಲವಾಗಲಿದೆ ಎಂದು ದೇಶಪಾಂಡೆ ಪ್ರಕಟಣೆಯಲ್ಲಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News