ಸರಕಾರದ ಉಳಿಯುವಿಕೆ ಕುಮಾರಸ್ವಾಮಿಯ ನಡತೆಯನ್ನು ಅವಲಂಬಿಸಿದೆ: ಎನ್.ಚಲುವರಾಯಸ್ವಾಮಿ

Update: 2019-05-09 17:00 GMT

ಮಂಡ್ಯ, ಮೇ 9: ಅಧಿಕಾರದಲ್ಲಿ ಮುಂದುವರಿಯುವುದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ನಡತೆಯನ್ನು ಅವಲಂಬಿಸಿದೆ ಎಂದು ಮಾಜಿ ಸಚಿವ ಎನ್.ಚಲುವರಾಯಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ.

ಗುರುವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಮಧ್ಯಂತರ ಚುನಾವಣೆ ಬಗ್ಗೆ ಕಾಂಗ್ರೆಸ್ ಪ್ಲಾನ್ ಮಾಡಿಕೊಂಡಿದೆ ಎಂಬ ವದಂತಿಯಲ್ಲಿ ಹುರುಳಿಲ್ಲ. ಸರಕಾರವನ್ನು ಉಳಿಸಿಕೊಳ್ಳುವುದು, ಕಳೆದುಕೊಳ್ಳುವುದು, ಚುನಾವಣೆ ಘೋಷಣೆ ಮಾಡುವುದು ಕುಮಾರಸ್ವಾಮಿ ಅವರಿಗೆ ಬಿಟ್ಟ ವಿಚಾರ ಎಂದರು.

ನೀವು ಹೀಗೆ ನಡೆದುಕೊಳ್ಳಬೇಕು, ಹಾಗೇ ನಡೆದುಕೊಳ್ಳಬೇಕೆಂದು 37 ಸ್ಥಾನ ಗೆದ್ದು ಸಿಎಂ ಆಗಿರುವ ಕುಮಾರಸ್ವಾಮಿ ಅವರು 80 ಸ್ಥಾನ ಗೆದ್ದಿರುವ ರಾಷ್ಟ್ರೀಯ ಪಕ್ಷದವರಿಗೆ ಸೂಚನೆ ಕೊಡುತ್ತಾರೆ. ಇದು ಅವರ ಧೋರಣೆಯಲ್ಲಿ ಬದಲಾವಣೆ ಆಗದಿರುವುದನ್ನು ತೋರಿಸುತ್ತದೆ. ಯಾವುದೇ ಮೈತ್ರಿ ಸರಕಾರದಲ್ಲಿ ಈ ರೀತಿಯ ನಡವಳಿಕೆ ನಾವು ನೋಡಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ಸಿದ್ದರಾಮಯ್ಯನವರು ಸಿಎಂ ಆಗಬೇಕು ಎಂದು ಜಾತ್ಯತೀತವಾಗಿ, ಪಕ್ಷಾತೀತವಾಗಿ ಶಾಸಕರು, ಮುಖಂಡರು ಬಯಸಿದ್ದಾರೆ. ಅದು ತಪ್ಪು ಅಂತ ಹೇಳಿದರೆ ಏನು ಹೇಳಬೇಕೆಂದು ಗೊತ್ತಾಗಲ್ಲ. ನಾಳೆ ಬೆಳಗ್ಗೆಯೇ ಕುಮಾರಸ್ವಾಮಿಯನ್ನು ಬದಲಾವಣೆ ಮಾಡಿ ಸಿದ್ದರಾಮಯ್ಯರನ್ನು ಸಿಎಂ ಮಾಡಿ ಎಂದು ಯಾರೂ ಹೇಳಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ನಾಲ್ಕು ವರ್ಷಕ್ಕೆ ಚುನಾವಣೆಯಾಗಲಿ, ಒಂದು ವರ್ಷಕ್ಕೆ ಆಗಲಿ, ಮುಂದೆ ಸಿದ್ದರಾಮಯ್ಯ ಅವರು ಸಿಎಂ ಆಗಲಿ ಎಂದು ಬಯಸುವುದು ತಪ್ಪೇನು ಎಂದು ಪ್ರಶ್ನಿಸಿದ ಚಲುವರಾಯಸ್ವಾಮಿ, ಸಿದ್ದರಾಮಯ್ಯನವರನ್ನು ಎಲ್ಲಾ ಶೋಷಿತ ವರ್ಗವೂ ಇಷ್ಟ ಪಡುತ್ತೆ ಎಂದು ಸಮರ್ಥಿಸಿಕೊಂಡರು.

ಕಳೆದ ಚುನಾವಣೆಯಲ್ಲಿ  ಲಿಂಗಾಯತ, ಒಕ್ಕಲಿಗ ಸಮುದಾಯದಲ್ಲಿ ಒಂದಷ್ಟು ಅಸಮಾಧಾನ ಇತ್ತು. ಅದು ಅನಗತ್ಯ ಎಂಬುದು ಈಗ ಅವರಿಗೂ ಅರ್ಥವಾಗಿದೆ. ಸಿದ್ದರಾಮಯ್ಯ ಯಾವುದೇ ಜಾತಿ ವಿರೋಧಿಯಲ್ಲ. ಎಲ್ಲಾ ಜಾತಿಗಳ ಬಡವರ ಪರ ಇದ್ದಾರೆ. ಅವರ ಆಡಳಿತ ಅವಶ್ಯಕತೆ ಇದೆ. ಆದರೆ, ಈ ಕ್ಷಣಕ್ಕೆ ಅದು ಅಪ್ರಸ್ತುತ ಎಂದು ಅವರು ವಿಶ್ಲೇಷಿಸಿದರು.

ರಾಜ್ಯ ಸರಕಾರ ನಡೆಸುವುದಕ್ಕೆ ಮತ್ತು ಸಂಸತ್ ಚುನಾವಣೆಗೆ ಮಾತ್ರ ಮೈತ್ರಿ. ಸ್ಥಳೀಯ ಚುನಾವಣೆಯಲ್ಲಿ ಮೈತ್ರಿ ಇಲ್ಲ. ಆರು ತಿಂಗಳ ಹಿಂದೆಯೂ ಫ್ರೆಂಡ್ಲಿ ಫೈಟ್ ಆಗಿತ್ತು. ಅದೆ ರೀತಿ ಈ ಸ್ಥಳೀಯ ಚುನಾವಣೆ ನಡೆಯುತ್ತದೆ ಎಂದು ಅವರು ಸ್ಪಷ್ಟಪಡಿಸಿದರು.

ಫಲಿತಾಂಶ ಮತದಾರರಿಗೆ ಬಿಟ್ಟಿದ್ದು:

ಮಂಡ್ಯ ಲೋಕಸಭೆ ಚುನಾವಣೆಯಲ್ಲಿ ಮತದಾರರು ಉತ್ತಮ ಫಲಿತಾಂಶ ಕೊಡುತ್ತಾರೆ. ಸ್ವಾಭಿಮಾನ ಉಳಿಸಬೇಕು ಎಂದು ಹಗಲು ರಾತ್ರಿ ಕಷ್ಟಪಟ್ಟು ಹೋರಾಟ ನಡೆಸಿರುವವರು ಮತದಾರರು. ಅದರಲ್ಲಿ ಫಲಿತಾಂಶ ಯಾರ ಪರ ಇದೆ ಅಂತ ಹೇಗೆ ಹೇಳೋದು? ಎಲ್ಲಾ ಆ ಪುಣ್ಯಾತ್ಮರಿಗೇ ಸಲ್ಲಬೇಕು  ಎಂದು ಅವರು ಹೇಳಿದರು.

ಇದರಲ್ಲಿ ಚಲುವರಾಯಸ್ವಾಮಿ ಅಥವಾ ಇನ್ಯಾರದೋ ಪಾತ್ರ ಇದೆ ಎಂದರೆ ನಾವು ದಡ್ಡರು. ಸುಮಲತಾ ಹಿಂದೆ ಯಾರು ನಿಂತಿದ್ದರು ಅನ್ನೋದು ಬೇರೆ ವಿಚಾರ. ಚುನಾವಣೆಯ ಕೀರ್ತಿ ಮತದಾರರಿಗೆ ಸಲ್ಲುತ್ತದೆ. ಮುಂದೆ ಏನಾಗುತ್ತದೆ ಎಂಬುದು ಪಕ್ಷ ತೀರ್ಮಾನ ತೆಗೆದುಕೊಳ್ಳುತ್ತದೆ ಎಂದು ಅವರು ನುಡಿದರು. ಯಾರು ಯಾರನ್ನೂ ಟಾರ್ಗೆಟ್ ಮಾಡಲು ಸಾಧ್ಯವಿಲ್ಲ. ನಾವೂ ಇದೇ ಜಿಲ್ಲೆಯ ನೀರು ಕುಡಿದು ಬದುಕಿರುವವರು ಎಂದು ಅವರು ಜೆಡಿಎಸ್ ಮುಖಂಡರು ಮಂಡ್ಯ ಕಾಂಗ್ರೆಸ್ ಟಾರ್ಗೆಟ್ ಮಾಡಿದ್ದಾರೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News