ಕೆ.ಎನ್.ರಾಜಣ್ಣ ವಿರುದ್ಧ ರಾಜಕೀಯ ತನಿಖೆ: ಚಲುವರಾಯಸ್ವಾಮಿ ಆರೋಪ

Update: 2019-05-09 17:04 GMT

ಮಂಡ್ಯ, ಮೇ 9: ತುಮಕೂರು ಲೋಕಸಭಾ ಚುನಾವಣೆಯಲ್ಲಿ ದೇವೇಗೌಡರ ವಿರುದ್ಧ ಕೆಲಸ ಮಾಡಿದ್ದಾರೆಂದು ಮಾಜಿ ಶಾಸಕ ಕೆ.ಎನ್.ರಾಜಣ್ಣ ಅಧ್ಯಕ್ಷತೆಯ ಅಪೆಕ್ಸ್ ಬ್ಯಾಂಕ್‍ನ ಆಡಳಿತ ಮಂಡಳಿ ವಿರುದ್ಧ ಸರಕಾರ ರಾಜಕೀಯ ತನಿಖೆಗೆ ಮುಂದಾಗಿದೆ ಎಂದು ಮಾಜಿ ಸಚಿವ ಎನ್.ಚಲುವರಾಯಸ್ವಾಮಿ ಆರೋಪಿಸಿದ್ದಾರೆ.

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಪೆಕ್ಸ್ ಬ್ಯಾಂಕ್‍ನಲ್ಲಿ ಯಾವುದೇ ಅವ್ಯವಹಾರ ಇಲ್ಲದಂತೆ ಅಧ್ಯಕ್ಷ ಕೆ.ಎನ್.ರಾಜಣ್ಣ ಆಡಳಿತ ನಡೆಸುತ್ತಿದ್ದಾರೆ. ಆದರೆ, ರಾಜಕೀಯ ದ್ವೇಷಕ್ಕಾಗಿ ತನಿಖೆಗೆ ಸರಕಾರ ಮುಂದಾಗಿದೆ ಎಂದರು.

ಪಾರದರ್ಶಕವಾಗಿ ತನಿಖೆ ನಡೆಸಿದರೆ ಬ್ಯಾಂಕ್‍ನ ಮಾಜಿ ಅಧ್ಯಕ್ಷರಾಗಿದ್ದ ಹಾಗೂ ಹಾಲಿ ಶಿವಮೊಗ್ಗ ಜಿಲ್ಲೆ ಜೆಡಿಎಸ್ ಅಧ್ಯಕ್ಷರಾಗಿರುವ ಮಂಜುನಾಥ್‍ಗೌಡ ಅವರ ಅವ್ಯವಹಾರ ಹೊರಗಡೆ ಬರಲಿದೆ ಎಂದು ಅವರು ತಿರುಗೇಟು ನೀಡಿದರು.

ಸಹಕಾರಿ ಇಲಾಖೆ ಅಧಿಕಾರಿಗಳು ಹೆಣ್ಣನ್ನು ಗಂಡು ಮಾಡುತ್ತಾರೆ, ಅವ್ವನ್ನ ಅಪ್ಪ ಮಾಡಿಬಿಡುತ್ತಾರೆ. ಹಾಗಾಗಿ ತಪ್ಪು ಮಾಡಿದವರನ್ನು ರಕ್ಷಿಸಿ ಕೆ.ಎನ್.ರಾಜಣ್ಣ ಅವರ ಮೇಲೆ ತಪ್ಪು ಹೊರಿಸಬಹುದು. ಇದು ಒಳ್ಳೆಯ ಬೆಳವಣಿಗೆಯಲ್ಲ ಎಂದು ಅವರು ಬೇಸರಿಸಿದರು.

ಮನ್‍ಮುಲ್ ಚುನಾವಣೆ ಏಕಿಲ್ಲ?

ರಾಜ್ಯದ ಇತರ ಹಾಲು ಒಕ್ಕೂಟಗಳ ಚುನಾವಣೆ ನಡೆಸುತ್ತಿದ್ದು, ಮಂಡ್ಯ ಹಾಲು ಒಕ್ಕೂಟದ (ಮನ್‍ಮುಲ್) ಚುನಾವಣೆ ನಡೆಸದಿರುವುದು ಏಕೆ ಎಂದು ಪ್ರಶ್ನಿಸಿದ ಚಲುವರಾಯಸ್ವಾಮಿ, ದುರುದ್ದೇಶದಿಂದ ಸರಕಾರ ಈ ಚುನಾವಣೆ ನಡೆಸದಂತೆ ಅಧಿಕಾರಿಗಳಿಗೆ ಸೂಚನೆ ನೀಡಿದೆ ಎಂದು ಆಪಾದಿಸಿದರು.

ಸಾರ್ವಜನಿಕ ಹಿತಾಸಕ್ತಿ ಬಗ್ಗೆ ಕಾಳಜಿವಹಿಸಿ ಕೆಲಸ ಮಾಡಬೇಕಾದ ಅಧಿಕಾರಿಗಳು ಸರಕಾರದ ಮೂಗಿನ ನೇರಕ್ಕೆ ಕೆಲಸ ಮಾಡುತ್ತಿದ್ದಾರೆ. ಮಾನಮರ್ಯಾದೆ ಇದ್ದರೆ ಮನ್‍ಮುಲ್ ಚುನಾವಣೆ ನಡೆಸಲಿ. ಆಡಳಿತಾಧಿಕಾರಿ ನೇಮಿಸಿದರೆ ಜಿಲ್ಲೆಯ ಜನ ಸುಮ್ಮನಿರುವುದಿಲ್ಲ ಎಂದು ಅವರು ಎಚ್ಚರಿಸಿದರು.

ಮನ್‍ಮುಲ್‍ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್ ನಿರ್ದೇಶಕರಿರುವುದರಿಂದ ಚುನಾವಣೆ ನಡೆಸದಂತೆ ಮುಖ್ಯಮಂತ್ರಿ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ಇದು ಬಹಳ ದಿನ ನಡೆಯುವುದಿಲ್ಲ. ಚುನಾವಣೆ ಎದುರಿಸಲು ನಾವು ಸಿದ್ದರಿದ್ದೇವೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News