ಕಬ್ಬಿನ ಬಾಕಿ ಬಿಲ್ ಪಾವತಿಗೆ ಕ್ರಮ: ಬೆಳಗಾವಿ ಜಿಲ್ಲಾಧಿಕಾರಿ ಡಾ.ವಿಶಾಲ್ ಭರವಸೆ

Update: 2019-05-09 17:10 GMT

ಬೆಳಗಾವಿ, ಮೇ 9: ಬೆಳಗಾವಿ ಜಿಲ್ಲೆಯ ಸಕ್ಕರೆ ಕಾರ್ಖಾನೆಗಳು ಕಳೆದ ವರ್ಷದಲ್ಲಿ ಬಾಕಿ ಉಳಿಸಿಕೊಂಡಿರುವ 1185 ಕೋಟಿ ರೂ.ಹಾಗೂ 2017-18ನೇ ಸಾಲಿನ ಸುಮಾರು ಒಂದು ಸಾವಿರ ಕೋಟಿ ರೂ.ಕಬ್ಬಿನ ಬಿಲ್ ಪಾವತಿಗೆ ಸಂಬಂಧಿಸಿದಂತೆ ಕೂಡಲೇ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ವಿಶಾಲ್ ಆರ್. ಭರವಸೆ ನೀಡಿದ್ದಾರೆ.

ಕಬ್ಬಿನ ಬಿಲ್ ಬಾಕಿಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿಂದು ನಡೆದ ಕಬ್ಬು ಬೆಳೆಗಾರರು ಮತ್ತು ರೈತ ಮುಖಂಡರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕಾರ್ಖಾನೆಗಳು ಉಳಿಸಿಕೊಂಡಿರುವ ಬಾಕಿ ಹಣವನ್ನು ರೈತರಿಗೆ ಪಾವತಿಸಲು ಸೂಚನೆ ನೀಡಲಾಗುತ್ತದೆ. ಆದಾಗ್ಯೂ ಬಿಲ್ ಪಾವತಿಸದಿದ್ದರೆ ನಿಯಮಾವಳಿ ಪ್ರಕಾರ ಕ್ರಮ ವಹಿಸಲಾಗುವುದು. ಕಬ್ಬು ಬೆಳೆಗಾರರ ಸಮಸ್ಯೆ ಕೇವಲ ಆರ್ಥಿಕ ಸಮಸ್ಯೆಯಲ್ಲ, ಇದು ಸಾಮಾಜಿಕ ಸಮಸ್ಯೆ ಆಗಿರುವುದರಿಂದ ಎಲ್ಲ ದೃಷ್ಟಿಕೋನದಿಂದ ಸಮಸ್ಯೆ ಬಗೆಹರಿಸುವ ಅಗತ್ಯವಿದೆ ಎಂದು ಜಿಲ್ಲಾಧಿಕಾರಿ ಅಭಿಪ್ರಾಯಪಟ್ಟರು.

ಕಬ್ಬಿನ ಬಿಲ್ ಬಾಕಿ ಪಾವತಿಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳು ಕರೆಯುವ ಸಭೆಗಳಿಗೆ ಸಕ್ಕರೆ ಕಾರ್ಖಾನೆಗಳ ವ್ಯವಸ್ಥಾಪಕ ನಿರ್ದೇಶಕರು ಹಾಜರಾಗದೇ ಬೇರೊಬ್ಬ ಪ್ರತಿನಿಧಿಯನ್ನು ಕಳುಹಿಸುತ್ತಾರೆ. ಇದರಿಂದ ಸಮಸ್ಯೆ ಬಗೆಹರಿಯುತ್ತಿಲ್ಲ ಎಂದು ರೈತ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ಮುಂದಿನ ಸಭೆಗೆ ಅನಿವಾರ್ಯ ಕಾರಣಗಳನ್ನು ಹೊರತುಪಡಿಸಿ ಕಾರ್ಖಾನೆಗಳ ವ್ಯವಸ್ಥಾಪಕ ನಿರ್ದೇಶಕರೆ ಖುದ್ದಾಗಿ ಹಾಜರಾಗಬೇಕು. ಒಂದು ವೇಳೆ ಸಭೆಗೆ ಗೈರು ಹಾಜರಾದರೆ ಕ್ರಮ ತೆಗೆದುಕೊಳ್ಳುವುದಾಗಿ ಎಚ್ಚರಿಕೆ ನೀಡಿದರು.

ಮುಂಬರುವ ದಿನಗಳಲ್ಲಿ ತೂಕ ಮತ್ತು ಅಳತೆಯನ್ನು ಪರಿಶೀಲಿಸಲು ಸಕ್ಕರೆ ಕಾರ್ಖಾನೆಗೆ ತೆರಳುವಾಗ ಕಡ್ಡಾಯವಾಗಿ ರೈತರು ಮತ್ತು ಅಧಿಕಾರಿಗಳನ್ನು ಒಳಗೊಂಡಿರುವ ಸಮಿತಿಯ ಸದಸ್ಯರನ್ನು ಕರೆದುಕೊಂಡು ಹೋಗಿ ಅವರ ಸಮ್ಮುಖದಲ್ಲಿಯೆ ಪರಿಶೀಲನೆ ನಡೆಸಬೇಕು ಹಾಗೂ ಪರಿಶೀಲನಾ ಪ್ರಕ್ರಿಯೆಯನ್ನು ದಾಖಲು ಮಾಡಬೇಕು ಎಂದು ವಿಶಾಲ್ ಸೂಚನೆ ನೀಡಿದರು.

ತೂಕ ಮತ್ತು ಅಳತೆಯನಲ್ಲಿ ಪಾರದರ್ಶಕತೆ ತರುವ ನಿಟ್ಟಿನಲ್ಲಿ ಆನ್‌ಲೈನ್ ವ್ಯವಸ್ಥೆ ಜಾರಿಗೊಳಿಸುವ ಕುರಿತು ಸಕ್ಕರೆ ಆಯುಕ್ತಾಲಯಕ್ಕೆ ವರದಿ ಕಳುಹಿಸಲಾಗುವುದು ಎಂದು ಅವರು ಹೇಳಿದರು. 2016-17 ನೇ ಸಾಲಿನ ಹಿಂಗಾರು ಹಂಗಾಮಿಗೆ ಸಂಬಂಧಿಸಿದಂತೆ ಬಾಕಿ ಉಳಿದಿರುವ 5.76 ಕೋಟಿ ರೂ.ಪರಿಹಾರವನ್ನು ತಕ್ಷಣವೇ ರೈತರ ಖಾತೆಗೆ ಜಮಾ ಮಾಡುವಂತೆ ವಿಮಾ ಕಂಪನಿಗೆ ಜಿಲ್ಲಾಧಿಕಾರಿ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಜಿಲ್ಲೆಯ 13,671 ರೈತರ ಖಾತೆಗೆ ಒಂದು ವಾರದೊಳಗೆ ವಿಮಾ ಪರಿಹಾರವನ್ನು ಜಮೆ ಮಾಡಲು ಕ್ರಮವಹಿಸುವಂತೆ ಜಿಲ್ಲಾ ಅಗ್ರಣಿ ಬ್ಯಾಂಕ್ ಹಾಗೂ ಸಹಕಾರ ಸಂಘಗಳ ಉಪ ನಿಬಂಧಕರಿಗೆ ಅವರು ನಿರ್ದೇಶನ ನೀಡಿದರು.

ಜಿಲ್ಲೆಯ ಅಥಣಿಯಲ್ಲಿ 21 ಹಾಗೂ ರಾಮದುರ್ಗದಲ್ಲಿ ಒಂದು ಸೇರಿದಂತೆ ಒಟ್ಟಾರೆ 22 ಮೇವು ಬ್ಯಾಂಕ್ ಸ್ಥಾಪಿಸಲಾಗಿದೆ. ಗೋಶಾಲೆಗಳ ಅಗತ್ಯತೆ ಆಧರಿಸಿ ಗೋಶಾಲೆಗಳನ್ನು ಆರಂಭಿಸಲು ತಹಶೀಲ್ದಾರರಿಗೆ ಈಗಾಗಲೇ ಸೂಚನೆ ನೀಡಲಾಗಿದೆ. ಅದೇ ರೀತಿ ಕುಡಿಯುವ ನೀರಿನ ಸಮಸ್ಯೆ ಕಂಡುಬಂದರೆ ತಕ್ಷಣವೇ ಟ್ಯಾಂಕರ್ ಮೂಲಕ ನೀರು ಪೂರೈಸುವಂತೆ ನಿರ್ದೇಶನ ನೀಡಲಾಗಿದೆ ಎಂದು ಅವರು ತಿಳಿಸಿದರು.

ಜಿಲ್ಲೆಯಲ್ಲಿ ಸುಮಾರು 140 ಖಾಸಗಿ ಕೊಳವೆಬಾವಿಗಳನ್ನೂ ಗುರುತಿಸಲಾಗಿದ್ದು, ಅಗತ್ಯಬಿದ್ದರೆ ಅವುಗಳನ್ನು ಬಳಸಿಕೊಳ್ಳಲಾಗುತ್ತದೆ. ಜಿಲ್ಲೆಯಲ್ಲಿ ಬರ ನಿರ್ವಹಣೆಗೆ 6.50 ಕೋಟಿ ರೂ.ಬಿಡುಗಡೆಗೆ ಜಿಲ್ಲಾಡಳಿತ ಅನುಮೋದನೆ ನೀಡಿದೆ ಎಂದು ಅವರು ಹೇಳಿದರು.

ಕಾರ್ಖಾನೆಗಳು ಕಳೆದ ವರ್ಷದಲ್ಲಿ ಒಟ್ಟಾರೆ 1185 ಕೋಟಿ ರೂ.ಬಾಕಿಯಿದೆ. ಐದಾರು ಸಭೆ ನಡೆಸಿ ಗಡುವು ನೀಡಿದರೂ ಪಾವತಿಸದಿರುವುದರಿಂದ ಶೇ.15 ಬಡ್ಡಿ ಸಮೇತ ಬಾಕಿ ಹಣ ಪಾವತಿಸಬೇಕು ಎಂದು ರೈತ ಮುಖಂಡ ಶಶಿಕಾಂತ ಜೋಶಿ ಆಗ್ರಹಿಸಿದರು.

ಸಭೆಯಲ್ಲಿ ಜಿ.ಪಂ.ಸಿಇಓ ಡಾ.ರಾಜೇಂದ್ರ, ಪ್ರೊಬೇಷನರಿ ಐಎಎಸ್ ಅಧಿಕಾರಿ ಭವರ್ ಸಿಂಗ್ ಮೀನಾ, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಜಿಲಾನಿ ಮೊಖಾಶಿ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪ ನಿರ್ದೇಶಕ ರಮೇಶ್ ಕೋಲಕಾರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News