ಮಹಿಳಾ ದೌರ್ಜನ್ಯ ತಡೆಗೆ 'ಪಿಂಕ್ ಬಾಕ್ಸ್'
ರಾಯಚೂರು, ಮೇ 9: ರಾಯಚೂರಿನ ನವೋದಯ ಕಾಲೇಜಿನ ವಿದ್ಯಾರ್ಥಿನಿ ಸಂಶಯಾಸ್ಪದ ಸಾವಿನ ಬಳಿಕ ಎಚ್ಚೆತ್ತುಕೊಂಡಿರುವ ಜಿಲ್ಲಾ ಪೊಲೀಸ್ ಇಲಾಖೆ ಎಲ್ಲ ಶಾಲಾ, ಕಾಲೇಜುಗಳಲ್ಲಿ ಪಿಂಕ್ ಬಾಕ್ಸ್‌ಗಳ ಅಳವಡಿಕೆಗೆ ಮುಂದಾಗಿದೆ. ಯಾವುದೇ ಕಿರುಕುಳ, ಲೈಂಗಿಕ ದೌರ್ಜನ್ಯದಂಥ ಪ್ರಕರಣಗಳಿದ್ದರೆ ಈ ಬಾಕ್ಸ್‌ನೊಳಗೆ ದೂರು ಸಲ್ಲಿಸಿದರೆ ಕ್ರಮ ಕೈಗೊಳ್ಳುವುದಾಗಿ ಪೊಲೀಸ್ ಇಲಾಖೆ ತಿಳಿಸಿದೆ.
ನಗರ ಸೇರಿ ಜಿಲ್ಲೆಯ ಎಲ್ಲ ಕಾಲೇಜುಗಳಲ್ಲಿ ಪಿಂಕ್ ಬಾಕ್ಸ್‌ಗಳನ್ನು ಅಳವಡಿಸಿದ್ದು, ವಿದ್ಯಾರ್ಥಿನಿಯರು ತಮಗೆ ಎದುರಾಗುವ ಸಮಸ್ಯೆ, ಕಿರುಕುಳ, ದಬ್ಬಾಳಿಕೆ ಮತ್ತು ದೌರ್ಜನ್ಯಗಳ ಮಾಹಿತಿ ಬರೆದು ಈ ಬಾಕ್ಸ್‌ನಲ್ಲಿ ಹಾಕಿದಲ್ಲಿ ಪೊಲೀಸ್ ಇಲಾಖೆಯಿಂದ ಸೂಕ್ತ ಕ್ರಮ ಜರುಗಿಸಲಿದೆ. ಎರಡು ದಿನಕ್ಕೊಮ್ಮೆ ಶಾಲಾಡಳಿತ ಮಂಡಳಿ ಈ ಬಾಕ್ಸ್‌ಗಳನ್ನು ಪರಿಶೀಲಿಸಲಿದ್ದು, ಪೊಲೀಸರಿಗೆ ಮಾಹಿತಿ ನೀಡಲಿದೆ.
ಈ ಕುರಿತು ಎಸ್ಪಿ ಡಿ.ಕಿಶೋರ್ ಬಾಬು ಈಚೆಗೆ ಎಲ್ಲ ಶಾಲಾ-ಕಾಲೇಜುಗಳ, ವಸತಿ ನಿಲಯಗಳ ಆಡಳಿತ ಮಂಡಳಿ ಮುಖ್ಯಸ್ಥರ ಸಭೆ ನಡೆಸಿದ್ದರು. ಕೆಲವು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಕುರಿತು ಸೂಚನೆ ನೀಡಿದ್ದರು. ಶಾಲೆ, ಕಾಲೇಜುಗಳಲ್ಲಿ ಕಡ್ಡಾಯವಾಗಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಬೇಕು ಎಂದು ಸೂಚಿಸಿದ್ದರು. ಅದಾದ ಬಳಿಕ ಪೊಲೀಸ್ ಇಲಾಖೆಯಿಂದ ವಿವಿಧ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಸ್ವಯಂ ರಕ್ಷಣೆಗಾಗಿ ಕರಾಟೆಯನ್ನೂ ಹೇಳಿ ಕೊಡಲಾಗಿತ್ತು. ಇದೀಗ ಪಿಂಕ್ ಬಾಕ್ಸ್‌ಗಳನ್ನು ಅಳವಡಿಸಿ ವಿದ್ಯಾರ್ಥಿಗಳ ರಕ್ಷಣೆಗೆ ವಿಶೇಷ ಕ್ರಮ ಜರುಗಿಸಿರುವುದು ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆಗೆ ಕಾರಣವಾಗಿದೆ. ಜೊತೆಗೆ ಪ್ರತ್ಯೇಕ ಪಿಂಕ್ ವಾಹನ ಬಿಟ್ಟಿದ್ದು, ಅದು ನಗರಾದ್ಯಂತ ಸಂಚರಿಸಲಿದೆ. ಮುಖ್ಯವಾಗಿ ನಿರ್ಜನ ಪ್ರದೇಶಗಳಲ್ಲಿ ಹೆಚ್ಚಾಗಿ ಓಡಾಡುವಂತೆ ಕ್ರಮ ಕೈಗೊಳ್ಳಲಾಗಿದೆ.