×
Ad

ಕೋಮುಲ್ ಚುನಾವಣೆ: ಮತದಾನಕ್ಕೆ ಅವಕಾಶ ಕಲ್ಪಿಸಿದ ಹೈಕೋರ್ಟ್

Update: 2019-05-09 23:01 IST

ಬೆಂಗಳೂರು, ಮೇ 9: ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಒಕ್ಕೂಟಕ್ಕೆ(ಕೋಮುಲ್) ಮೇ 13ರಂದು ನಡೆಯಲಿರುವ ಚುನಾವಣೆಯಲ್ಲಿ ನಿಯಮಗಳ ಪ್ರಕಾರ ಕನಿಷ್ಠ 3 ವಾರ್ಷಿಕ ಸಾಮಾನ್ಯ ಸಭೆಗಳಲ್ಲಿ ಪಾಲ್ಗೊಳ್ಳದ ಸದಸ್ಯರಿಗೂ ಮತ ಚಲಾಯಿಸಲು ಹೈಕೋರ್ಟ್ ಅವಕಾಶ ಕಲ್ಪಿಸಿದೆ.

ಲೋಚರುವಪಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘ ಸೇರಿ ಕೋಮುಲ್ ಅಧೀನದ ಹತ್ತಕ್ಕೂ ಅಧಿಕ ಹಾಲು ಉತ್ಪಾದಕರ ಸಹಕಾರ ಸಂಘಗಳು ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ.ವೀರಪ್ಪ ಅವರಿದ್ದ ರಜಾಕಾಲದ ನ್ಯಾಯಪೀಠ ಈ ಮಧ್ಯಂತರ ಆದೇಶ ನೀಡಿತು. ಸಹಕಾರ ಇಲಾಖೆ ಸೇರಿ ಎಲ್ಲ ಪ್ರತಿವಾದಿಗಳಿಗೂ ನೋಟಿಸ್ ಜಾರಿಗೊಳಿಸಿ ಅರ್ಜಿ ವಿಚಾರಣೆ ಮುಂದೂಡಿತು. ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಮುಗಿದಿರುವ ಸಂಘಗಳಿಗೆ ಮತದಾನಕ್ಕೆ ಮಾತ್ರ ಅವಕಾಶ ನೀಡಲಾಗುವುದು. ಆದರೆ, ಎಲ್ಲಿ ಇನ್ನೂ ನಾಮಪತ್ರ ಸಲ್ಲಿಕೆಗೆ ಅವಕಾಶ ಇದೆಯೋ ಅಂಥ ಕಡೆ ಮೂರು ವಾರ್ಷಿಕ ಸಭೆಗಳಲ್ಲಿ ಪಾಲ್ಗೊಳ್ಳದ ಸದಸ್ಯರಿಗೆ ಮತದಾನ ಹಾಗೂ ಚುನಾವಣೆಗೆ ಸ್ಪರ್ಧಿಸಲೂ ಅವಕಾಶ ನೀಡಬೇಕೆಂದು ಸಹಕಾರ ಇಲಾಖೆಗೆ ನಿರ್ದೇಶಿಸಿ ಹೈಕೋರ್ಟ್ ಮಧ್ಯಂತರ ಆದೇಶ ಹೊರಡಿಸಿದೆ.

ಕರ್ನಾಟಕ ಸಹಕಾರ ಸೊಸೈಟಿಗಳ ಕಾಯ್ದೆಗೆ ಹೊಸದಾಗಿ ತಂದಿರುವ ತಿದ್ದುಪಡಿ ಪ್ರಕಾರ ಸಹಕಾರ ಸಂಘಗಳ ಸದಸ್ಯರು ಹಿಂದಿನ 5 ಸಾಮಾನ್ಯ ಸಭೆಗಳ ಪೈಕಿ ಕನಿಷ್ಠ ಮೂರರಲ್ಲಿ ಭಾಗವಹಿಸಬೇಕು. ಇಲ್ಲವಾದರೆ ಅಂಥವರು ಸಹಜವಾಗಿಯೇ ಮತದಾನದ ಹಕ್ಕು ಕಳೆದುಕೊಳ್ಳುತ್ತಾರೆ. ಈ ತಿದ್ದುಪಡಿಯಿಂದ ಸಾವಿರಾರು ಸದಸ್ಯರು ಮತ ಚಲಾಯಿಸುವ ಹಕ್ಕು ಕಳೆದುಕೊಂಡಿದ್ದು, ಅವರ ಮೂಲ ಹಕ್ಕನ್ನೇ ಕಸಿದುಕೊಂಡಂತಾಗಿದೆ. ತಿದ್ದುಪಡಿ ನಿಯಮ ಪ್ರಜಾಪ್ರಭುತ್ವ ಪದ್ಧತಿಗೆ ವಿರುದ್ಧವಾಗಿದೆ ಎಂದು ಅರ್ಜಿದಾರರ ರ ವಕೀಲರು ವಾದ ಮಂಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News