×
Ad

ಚಿಕ್ಕಮಗಳೂರು: ಹೈಟೆಕ್ ಬಸ್ ನಿಲ್ದಾಣಕ್ಕೆ 60-70 ಕೋಟಿ ರೂ. ಪ್ರಸ್ತಾವ; ಕೆಎಸ್ಸಾರ್ಟಿಸಿ ಡಿಸಿ ಅನಿಲ್‍ ಕುಮಾರ್

Update: 2019-05-09 23:43 IST

ಚಿಕ್ಕಮಗಳೂರು, ಮೇ 9: ನಗರದ ಜನರ ದಶಕಗಳ ಕನಸಾಗಿದ್ದ ಹೈಟೆಕ್ ಬಸ್ ನಿಲ್ದಾಣ ನಿರ್ಮಾಣಕ್ಕೆ ಸರಕಾರ ಹಸಿರು ನಿಶಾನೆ ತೋರಿದ್ದು, ಸುಮಾರು 60-70 ಕೋ. ರೂ. ವೆಚ್ಚದಲ್ಲಿ ಹೈಟೆಕ್ ಬಸ್ ನಿಲ್ದಾಣ ನಿರ್ಮಾಣವಾಗಲಿದೆ. ಸರಕಾರದ ಸೂಚನೆ ಮೇರೆಗೆ ಈಗಾಗಲೇ ಪ್ರಸ್ತಾವ ಸಲ್ಲಿಸಲಾಗಿದೆ ಎಂದು ಕೆಎಸ್ಸಾರ್ಟಿಸಿ ಜಿಲ್ಲಾ ವಿಭಾಗೀಯ ನಿಯಂತ್ರಣಾಧಿಕಾರಿ ಅನಿಲ್‍ ಕುಮಾರ್ ತಿಳಿಸಿದ್ದಾರೆ.

ಗುರುವಾರ ವಾರ್ತಾಭಾರತಿಯೊಂದಿಗೆ ಮಾತನಾಡಿದ ಅವರು, ಚಿಕ್ಕಮಗಳೂರು ನಗರದಲ್ಲಿ ಸದ್ಯ ಇರುವ ಬಸ್ ನಿಲ್ದಾಣ ನಗರದ ಹೃದಯಭಾಗದಲ್ಲಿದೆಯಾದರೂ ತುಂಬಾ ಇಕ್ಕಾಟ್ಟಾದ ಜಾಗದಲ್ಲಿದೆ. ಇದರಿಂದಾಗಿ ಪ್ರಯಾಣಿಕರಿಗೆ, ಸಾರಿಗೆ ಬಸ್‍ಗಳ ನಿಲುಗಡೆ, ಖಾಸಗಿ ವಾಹನಗಳ ನಿಲುಗಡೆ ಸ್ಥಳಾವಕಾಶದ ಕೊರತೆಯುಂಟಾಗಿ ತೊಂದರೆಯಾಗಿತ್ತು. ಈ ಕಾರಣಕ್ಕೆ ಹಾಲಿ ಇರುವ ನಿಲ್ದಾಣವನ್ನು ಮೇಲ್ದರ್ಜೆಗೇರಿಸಬೇಕೆಂದು ನಗರದ ಜನತೆ ಬೇಡಿಕೆ ಇಟ್ಟಿದ್ದರು. ಈ ಬೇಡಿಕೆಗೆ ಸರಕಾರ ಸ್ಪಂದಿಸಿದ್ದು, ಹೈಟೆಕ್ ಬಸ್ ನಿಲ್ದಾಣ ನಿರ್ಮಾಣಕ್ಕೆ ಹಸಿರು ನಿಶಾನೆ ತೋರಿರುವ ಹಿನ್ನೆಲೆಯಲ್ಲಿ ಹೈಟೆಕ್ ಬಸ್ ನಿಲ್ದಾಣಕ್ಕೆ ಅಗತ್ಯವಿರುವ ಜಾಗ, ಖರ್ಚು ವೆಚ್ಚ ಸಂಬಂಧದ ಪ್ರಸ್ತಾವವನ್ನು ಸರಕಾರಕ್ಕೆ ಸಲ್ಲಿಸಲಾಗಿದೆ. ಸದ್ಯ ಚುನಾವಣಾ ನೀತಿ ಸಂಹಿತೆ ಇದ್ದು, ನೀತಿ ಸಂಹಿತೆ ಅವಧಿ ಮುಗಿದ ಬಳಿಕ ಹೈಟೆಕ್ ಬಸ್ ನಿಲ್ದಾಣ ನಿರ್ಮಾಣ ಪ್ರಕ್ರಿಯೆಗೆ ಚಾಲನೆ ಸಿಗಲಿದೆ ಎಂದು ಅವರು ತಿಳಿಸಿದರು.

ಹಾಲಿ ಬಸ್ ನಿಲ್ದಾಣದಲ್ಲಿ ಸ್ಥಳಾವಕಾಶದ ಕೊರತೆ ಇದೆ. ಇದಕ್ಕಾಗಿ ನಿಲ್ದಾಣದ ಪಕ್ಕದಲ್ಲಿನ ಶಿಥಿಲಾವಸ್ಥೆಯಲ್ಲಿರುವ ಹಳೆಯ ಜೈಲು ಕಟ್ಟಡದ ಜಾಗಕ್ಕೆ ಬಸ್ ನಿಲ್ದಾಣವನ್ನು ವಿಸ್ತರಿಸಲಾಗುವುದು. ಹಳೇ ಜೈಲು ಕಟ್ಟಡದ ಜಾಗ ಹಸ್ತಾಂತರ ಪ್ರಕ್ರಿಯೆ ಪೂರ್ಣಗೊಂಡಿದ್ದು, ನೀತಿ ಸಂಹಿತೆ ಬಳಿಕ ಹಳೇ ಜೈಲು ಕಟ್ಟಡವನ್ನು ಕೆಡವಿ ಬಸ್ ನಿಲ್ದಾಣ ವಿಸ್ತರಣೆ ಕಾಮಗಾರಿಗೆ ಚಾಲನೆ ನೀಡಲಾಗುವುದು. ಈಗಾಗಲೇ ಹಳೇ ಜೈಲು ಕಟ್ಟಡ ಇರುವ ಜಾಗದಲ್ಲಿ ರಾತ್ರಿ ವೇಳೆ ಕೆಎಸ್ಸಾರ್ಟಿಸಿ ಸಂಸ್ಥೆಯ ಕೆಲ ಬಸ್‍ಗಳ ನಿಲುಗಡೆಗೆ ಸ್ಥಳಾವಕಾಶ ಮಾಡಿಕೊಡಲಾಗಿದೆ ಎಂದರು.

ಹೈಟೆಕ್ ಬಸ್ ನಿಲ್ದಾಣ ನಿರ್ಮಾಣದ ವೇಳೆ ವೇಗದೂತ ಬಸ್‍ಗಳ ನಿಲುಗಡೆ ಹಾಗೂ ಸಬ್ ಅರ್ಬನ್ ಸಾರಿಗೆ ಬಸ್‍ಗಳ ನಿಲುಗಡೆಗೆ ಪ್ರತ್ಯೆಕ ನಿಲ್ದಾಣ ನಿರ್ಮಿಸುವ ಪ್ರಸ್ತಾವವನ್ನು ಸರಕಾರಕ್ಕೆ ಸಲ್ಲಿಸಲಾಗಿದೆ. ಹಳೇ ಜೈಲು ಕಟ್ಟಡವಿದ್ದ ಜಾಗದಲ್ಲಿ ಸಬ್ ಅರ್ಬನ್ ಸಾರಿಗೆ ಬಸ್‍ಗಳ ನಿಲುಗಡೆಗೆ ನಿಲ್ದಾಣ ನಿರ್ಮಿಸಲಾಗುವುದು. ಈ ಬಸ್ ನಿಲ್ದಾಣಗಳ ನಡುವೆ ಸಾರ್ವಜನಿಕ ರಸ್ತೆ ಇದ್ದು, ಈ ರಸ್ತೆಯನ್ನು ಮುಚ್ಚದೇ ವೇಗದೂತ-ಸಬ್ ಅರ್ಬನ್ ನಿಲ್ದಾಣಗಳ ನಡುವೆ ಸಾರ್ವಜನಿಕರು, ಪ್ರಯಾಣಿಕರ ಸಂಚಾರಕ್ಕಾಗಿ ಅಂಡರ್ ಪಾಸ್ ರಸ್ತೆ ಇಲ್ಲವೇ, ಮೇಲ್ಸೆತುವೆ ನಿರ್ಮಿಸಲಾಗುವುದು ಎಂದ ಅವರು, ಹಾಲಿ ಬಸ್ ನಿಲ್ದಾಣದ ಆವರಣದಲ್ಲಿ ಖಾಸಗಿ ವಾಹನಗಳ ನಿಲುಗಡೆಗೆ ಸ್ಥಳಾವಕಾಶದ ಕೊರತೆ ಇರುವುದರಿಂದ ಬಹುಮಹಡಿಗಳುಳ್ಳ ಹೈಟೆಕ್ ಬಸ್‍ನಿಲ್ದಾಣ ನಿರ್ಮಿಸಿ ಅದರೊಳಗೆ ಮಲ್ಟಿಲೇನ್ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗುವುದು. ಹೈಟೆಕ್ ಬಸ್ ನಿಲ್ದಾಣ ನಿರ್ಮಾಣಕ್ಕೆ ಸುಮಾರು 60 ರಿಂದ 70 ಕೋ. ರೂ. ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದ್ದು, ಈ ಸಂಬಂಧ ಸರಕಾರಕ್ಕೆ ಪ್ರಸ್ತಾವ ಸಲ್ಲಿಕೆಯಾಗಿದೆ. ಶೀಘ್ರ ಕಾಮಗಾರಿಗೆ ಚಾಲನೆ ದೊರೆಯಲಿದೆ ಎಂದರು.

ಶೃಂಗೇರಿಯಲ್ಲಿ ಹೊಸ ಡಿಪೋ, ಹೈಟೆಕ್ ಬಸ್ ನಿಲ್ದಾಣ ನಿರ್ಮಾಣ: ಮೂರು ತಾಲೂಕುಗಳನ್ನು ಹೊಂದಿರುವ ಶೃಂಗೇರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಹೊಡ ಡಿಪೋ ನಿರ್ಮಾಣಕ್ಕೆ ಕಳೆದೊಂದು ದಶಕದಿಂದ ಬೇಡಿಕೆ ಇತ್ತು. ಅಲ್ಲಿನ ನಾಗರಿಕರು ಇದಕ್ಕಾಗಿ ಸಾಕಷ್ಟು ಹೋರಾಟ ಮಾಡಿದ್ದಾರೆ. ನಾಗರಿಕರ ಹೋರಾಟಕ್ಕೆ ಸರಕಾರ ಸ್ಪಂದಿಸಿದ್ದು, 4 ಕೋ. ರೂ. ವೆಚ್ಚದಲ್ಲಿ ಸುಸಜ್ಜಿತ ಡಿಪೋ ಕಟ್ಟಡ ನಿರ್ಮಾಣಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಡಿಪೋ ನಿರ್ಮಾಣಕ್ಕೆ ಶೃಂಗೇರಿ ಪಟ್ಟಣ ಸಮೀಪದಲ್ಲಿ 5 ಎಕರೆ ಜಮೀನು ಮಂಜೂರಾಗಿದ್ದು, ಸದ್ಯ ಮಂಜೂರಾಗಿರುವ ಜಾಗದಲ್ಲಿನ ಮರಗಳ ತೆರವಿಗೆ ಅರಣ್ಯ ಇಲಾಖೆಗೆ ಪತ್ರ ಬರೆಯಲಾಗಿದೆ. ಈ ಜಾಗ ಎತ್ತರ ತಗ್ಗಿನಿಂದ ಕೂಡಿದ್ದು, ಜಾಗ ಸಮತಟ್ಟು ಮಾಡುವ ಅಗತ್ಯವಿದ್ದು, ಒಟ್ಟಾರೆ ಡಿಪೋ ಕಟ್ಟಡ ನಿರ್ಮಾಣಕ್ಕೆ ಅಂದಾಜು 10 ಕೋ. ರೂ. ಅನುದಾನ ಬೇಕಾಗುತ್ತದೆ. ಈ ಬಗ್ಗೆ ಸರಕಾರಕ್ಕೆ ಪ್ರಸ್ತಾವ ಸಲ್ಲಿಕೆಯಾಗದೆ ಎಂದು ಅನಿಲ್‍ಕುಮಾರ್ ತಿಳಿಸಿದರು.

ಶೃಂಗೇರಿ ಪಟ್ಟಣದ ಹೊರಭಾಗದಲ್ಲಿ ಡಿಪೋ ಕಟ್ಟಡ ನಿರ್ಮಾಣವಾಗಲಿದ್ದು, ಪಟ್ಟಣದಲ್ಲಿ ಶಾರದಾಂಬ ದೇವಾಲಯದ ಸಮೀಪದಲ್ಲಿಯೇ ಇರುವ ಗಾಂಧಿ ಮೈದಾನದಲಿ 30 ಕೋ. ರೂ. ವೆಚ್ಚದ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣಕ್ಕೆ ಸರಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಗಾಂಧಿ ಮೈದಾನದಲ್ಲಿ 2 ಎಕರೆ ಜಾಗಕ್ಕಾಗಿ ಜಿಲ್ಲಾಧಿಕಾರಿಗೂ ಮನವಿ ಮಾಡಲಾಗಿದೆ ಎಂದ ಅವರು, ಜಾಗ ಮಂಜೂರಾದಲ್ಲಿ ಗಾಂಧಿ ಮೈದಾನದಲ್ಲಿ ಹೊಸ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣ ತಲೆ ಎತ್ತಲಿದೆ. ನಿಲ್ದಾಣದ ಆವರಣದಲ್ಲೇ ಖಾಸಗಿ ವಾಹನಗಳ ಪಾರ್ಕಿಂಗ್‍ಗೆ ಮಲ್ಟಿ ಲೇನ್ ಪಾರ್ಕಿಂಗ್ ವ್ಯವಸ್ಥೆ, ಶಾಪಿಂಗ್ ಕಾಂಪ್ಲೆಕ್ಸ್ ವುಳ್ಳ ಹೈಟೆಕ್ ಬಸ್ ನಿಲ್ದಾಣ ನಿರ್ಮಿಸಲಾಗುವುದು. ಮಳೆಗಾಲದಲ್ಲಿ ತುಂಗಾನದಿಯಲ್ಲಿ ಪ್ರವಾಹ ಉಂಟಾಗಿ ಗಾಂಧಿ ಮೈದಾನ ಮುಳುಗಡೆಯಾಗುವುದು ಸಾಮಾನ್ಯವಾಗಿದೆ. ಆದ್ದರಿಂದ ನದಿ ದಡದಲ್ಲಿ ತಡೆಗೋಡೆ ನಿರ್ಮಿಸಿ ನಿಲ್ದಾಣ ನಿರ್ಮಾಣ ಮಾಡಲಾಗುವುದು ಎಂದವರು ತಿಳಿಸಿದರು.

ಕಳಸ ಪಟ್ಟಣದಲ್ಲೂ ಹೊಸ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣ: ಮೂಡಿಗೆರೆ ತಾಲೂಕಿನ ಕಳಸ ಪಟ್ಟಣವನ್ನು ಇತ್ತೀಚೆಗೆ ತಾಲೂಕು ಕೇಂದ್ರವಾಗಿ ಸರಕಾರ ಘೋಷಿಸಿದೆ. ಕಳಸ ಸಮೀಪದಲ್ಲಿ ಹೊರನಾಡು ಯಾತ್ರಾ ಸ್ಥಳ ಇರುವುದರಿಂದ ಇಲ್ಲಿಗೆ ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿದೆ. ಇತ್ತೀಚೆಗೆ ಕೆಎಸ್ಸಾರ್ಟಿಸಿ ಬಸ್‍ಗಳ ಓಡಾಟವೂ ಹೆಚ್ಚಿದೆ. ಈ ಕಾರಣಕ್ಕೆ ಪಟ್ಟಣದ ಸಂತೆ ಮಾರುಕಟ್ಟೆ ಪಕ್ಕದಲ್ಲಿ ವಿಶಾಲವಾದ ಜಾಗವಿದೆ. ಇಲ್ಲಿ 70-80 ಲಕ್ಷ ರೂ. ವೆಚ್ಚದಲ್ಲಿ ಹೊಸ ಕೆಎಸ್ಸಾರ್ಟಿಸಿ ಬಸ್‍ನಿಲ್ದಾಣ ನಿರ್ಮಾಣಕ್ಕೆ ಸರಕಾರಕ್ಕೆ ಪ್ರಸ್ತಾವ ಸಲ್ಲಿಸಿದ್ದು, ಜಾಗಕ್ಕಾಗಿ ಕಳಸ ಗ್ರಾಮಪಂಚಾಯತ್‍ಗೆ ಪತ್ರ ಬರೆಯಲಾಗಿದೆ ಎಂದ ಅವರು, ಮೂಡಿಗೆರೆ ಬಸ್ ನಿಲ್ದಾಣದಲ್ಲಿ ಕೆಲ ನವೀಕರಣ ಕಾಮಗಾರಿ ಬಾಕಿ ಇದ್ದು, 10 ಲಕ್ಷ ರೂ. ವೆಚ್ಚದ ಕಾಮಗಾರಿಗೆ ಸರಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ ಎಂದರು.

ಬೇಸಿಗೆ ರಜೆ ಸಂದರ್ಭದಲ್ಲಿ ಜಿಲ್ಲೆಗೆ ಪ್ರವಾಸಿಗರು, ಯಾತ್ರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಈ ಅವಧಿಯಲ್ಲಿ ಚಿಕ್ಕಮಗಳೂರು-ವೇಲನೂರು-ತಿರುಚಿ-ಸೇಲಂಗೆ ಮೂರು ಹೆಚ್ಚುವರಿ ಸಮ್ಮರ್ ಸ್ಪೆಷಲ್ ಬಸ್‍ಗಳ ಓಡಾಟ ಆರಂಭಿಸಲಾಗಿದೆ.
- ಅನಿಲ್‍ ಕುಮಾರ್, ವಿಭಾಗೀಯ ನಿಯಂತ್ರಣಾಧಿಕಾರಿ

ಚಿಕ್ಕಮಗಳೂರು ಜಿಲ್ಲಾದ್ಯಂತ ಕೆಎಸ್ಸಾರ್ಟಿಸಿ ಸಂಸ್ಥೆಗೆ ನಿರೀಕ್ಷಿಸಿದಷ್ಟು ಆದಾಯ ಬರುತ್ತಿಲ್ಲ. ಪ್ರತೀ ಕಿ.ಮೀ. ಸಂಸ್ಥೆ ವತಿಯಿಂದ 33-37 ರೂ. ಖರ್ಚಾಗುತ್ತಿದ್ದು, ಆದಾಯ ಮಾತ್ರ 20 ರೂ. ಬರುತ್ತಿದೆ. ಚಿಕ್ಕಮಗಳೂರು ಪ್ರವಾಸಿ ತಾಣವಾಗಿದ್ದರೂ ಇಲ್ಲಿಗೆ ಬರುವವರು ಹೆಚ್ಚು ಖಾಸಗಿ ವಾಹನಗಳ ಮೂಲಕ ಬರುತ್ತಿದ್ದಾರೆ. ಸರಕಾರಿ ಸಾರಿಗೆ ಬಸ್‍ಗಳಲ್ಲಿ ಓಡಾಡುವವರ ಸಂಖ್ಯೆ ಕಡಿಮೆ ಇದೆ.
- ಅನಿಲ್‍ ಕುಮಾರ್, ವಿಭಾಗೀಯ ನಿಯಂತ್ರಣಾಧಿಕಾರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News