ಕರ್ಣಾಟಕ ಬ್ಯಾಂಕ್‌ನ ಇಬ್ಬರು ಮಹಾ ಪ್ರಬಂಧಕರಿಗೆ ಪದೋನ್ನತಿ
Update: 2019-05-09 23:56 IST
ಮಂಗಳೂರು: ಕರ್ಣಾಟಕ ಬ್ಯಾಂಕ್ ತನ್ನ ಮಹಾ ಪ್ರಬಂಧಕರಾದ ಬಾಲಚಂದ್ರ ವೈ.ವಿ.ಮತ್ತು ಗೋಕುಲದಾಸ ಪೈ ಅವರನ್ನು ಅನುಕ್ರಮವಾಗಿ ಚೀಫ್ ಆಪರೇಟಿಂಗ್ ಆಫೀಸರ್ ಮತ್ತು ಚೀಫ್ ಬಿಜಿನೆಸ್ ಆಫೀಸರ್ ಎಂದು ಪದೋನ್ನತಿಗೊಳಿಸಿದೆ.
ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಎನ್.ಆರ.ಪುರ ತಾಲೂಕಿನವರಾದ ಬಾಲಚಂದ್ರ ಅವರು 1995ರಲ್ಲಿ ಕರ್ಣಾಟಕ ಬ್ಯಾಂಕಿನಲ್ಲಿ ಮ್ಯಾನೇಜರ್ ಆಗಿ ನೇಮಕಗೊಂಡು ಸೇವೆಯನ್ನು ಆರಂಭಿಸಿದ್ದು,1997ರಲ್ಲಿ ಕಂಪನಿ ಕಾರ್ಯದರ್ಶಿ ಹುದ್ದೆಗೆ ನಿಯೋಜಿತರಾಗಿದ್ದರು. ಹಂತಹಂತವಾಗಿ ಮೇಲೇರುತ್ತ 2017ರಲ್ಲಿ ಮಹಾ ಪ್ರಬಂಧಕರ ಕೇಡರ್‌ಗೆ ಬಡ್ತಿ ಪಡೆದಿದ್ದರು.
ಉಡುಪಿ ತಾಲೂಕಿನ ಬೈದಬೆಟ್ಟು ಮೂಲದ ಗೋಕುಲದಾಸ ಪೈ ಅವರು 1990ರಲ್ಲಿ ಕೃಷಿ ಕ್ಷೇತ್ರಾಧಿಕಾರಿಯಾಗಿ ಬ್ಯಾಂಕ್‌ನ್ನು ಸೇರಿದ್ದು,ಕಳೆದ 29 ವರ್ಷಗಳಲ್ಲಿ ವಿವಿಧ ಕೇಡರ್‌ಗಳಲ್ಲಿ ಸೇವೆ ಸಲ್ಲಿಸಿದ್ದಾರೆ. 2017ರಲ್ಲಿ ಅವರು ಮಹಾ ಪ್ರಬಂಧಕ ಕೇಡರ್‌ಗೆ ಪದೋನ್ನತಿಗೊಂಡಿದ್ದರು.