×
Ad

ಕೊಡವ ಸಾಹಿತ್ಯ ಅಕಾಡೆಮಿ 'ಬೊಳ್ಳಿನಮ್ಮೆ' ಲೋಗೋ ಅನಾವರಣ

Update: 2019-05-10 17:12 IST

ಮಡಿಕೇರಿ, ಮೇ 10: ಕೊಡವ ಭಾಷೆ, ಸಾಹಿತ್ಯ, ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಗುರಿ ಸಾಧನೆಯ ಹಾದಿಯಲ್ಲಿರುವ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಬೆಳ್ಳಿ ಮಹೋತ್ಸವದ ಸಂಭ್ರಮದಲ್ಲಿದ್ದು, “ಬೊಳ್ಳಿನಮ್ಮೆ” ಕಾರ್ಯಕ್ರಮದ ಲೋಗೋವನ್ನು ಇಂದು ಅನಾವರಣಗೊಳಿಸಲಾಯಿತು.

ನಗರದಲ್ಲಿರುವ ಅಕಾಡೆಮಿಯ ಕಚೇರಿಯಲ್ಲಿ ಅಕಾಡೆಮಿ ಅಧ್ಯಕ್ಷ ಪೆಮ್ಮಂಡ ಕೆ.ಪೊನ್ನಪ್ಪ, ರಿಜಿಸ್ಟ್ರಾರ್ ಚಂದ್ರಹಾಸ ರೈ ಹಾಗೂ ಸರ್ವ ಸದಸ್ಯರು ಲೋಗೋವನ್ನು ಅನಾವರಣಗೊಳಿಸಿ ಜೂ.8 ಮತ್ತು 9 ರಂದು ಗೋಣಿಕೊಪ್ಪಲಿನ ಕಾವೇರಿ ಕಾಲೇಜಿನಲ್ಲಿ ನಡೆಯುವ ಕಾರ್ಯಕ್ರಮದ ಕುರಿತು ಮಾಹಿತಿ ನೀಡಿದರು.

“ಬೊಳ್ಳಿನಮ್ಮೆ” ಕಾರ್ಯಕ್ರಮದ ಸಂದರ್ಭ ಗೌರವ ಪ್ರಶಸ್ತಿ ಪ್ರದಾನ ಸಮಾರಂಭವೂ ನಡೆಯಲಿದ್ದು, ಸಾಹಿತ್ಯ, ಕಲೆ, ಜಾನಪದ ಕ್ಷೇತ್ರದಲ್ಲಿ ಜೀವಮಾನದ ಸಾಧನೆಗೈದ ಹಿರಿಯ ಮೂವರು ಸಾಧಕರನ್ನು ಪ್ರಶಸ್ತಿಗಾಗಿ ಆಯ್ಕೆ ಮಾಡಲಾಗುವುದು. ಆಯ್ಕೆಯಾದವರಿಗೆ ತಲಾ 50 ಸಾವಿರ ರೂ.ನಗದು ಹಾಗೂ ಪ್ರಶಸ್ತಿ ಪತ್ರ ನೀಡಲಾಗುವುದು. ಸರ್ಕಾರದ ಮಾರ್ಗಸೂಚಿಯಂತೆ ಗೌರವ ಪ್ರಶಸ್ತಿಯನ್ನು ನೀಡಲಾಗುತ್ತಿದ್ದು, ಅರ್ಹರನ್ನು ಸದ್ಯದಲ್ಲಿಯೇ ಆಯ್ಕೆ ಮಾಡಲಾಗುವುದು ಎಂದು ಪೆಮ್ಮಂಡ ಕೆ.ಪೊನ್ನಪ್ಪ ತಿಳಿಸಿದರು.

ಕಾರ್ಯಕ್ರಮವನ್ನು ಆಯೋಜಿಸಲು ಅನುದಾನಕ್ಕಾಗಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಹಣ ಬಿಡುಗಡೆಯಾಗದಿದ್ದರೂ ಅಕಾಡೆಮಿಯಲ್ಲಿ ಲಭ್ಯವಿರುವ ಹಣದಿಂದ “ಬೊಳ್ಳಿನಮ್ಮೆ” ಸಮಾರಂಭವನ್ನು ಆಯೋಜಿಸಲಾಗುವುದು. ಸುಮಾರು 8 ರಿಂದ 10 ಲಕ್ಷ ರೂ. ವೆಚ್ಚದಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ಮಾಹಿತಿ ನೀಡಿದರು. 

ಪ್ರತಿವರ್ಷ ಅಕಾಡೆಮಿಯ ಕಾರ್ಯಕ್ರಮಗಳಿಗಾಗಿ 70 ಲಕ್ಷ ರೂ. ಅನುದಾನ ಸರ್ಕಾರದಿಂದ ಬಿಡುಗಡೆಯಾಗುತ್ತಿದ್ದು, ಈ ಬಾರಿ 80 ಲಕ್ಷ ರೂ.ಗಳನ್ನು ನಿರೀಕ್ಷಿಸಲಾಗುತ್ತಿದೆ ಎಂದರು. ಕಳೆದ 25 ವರ್ಷಗಳಲ್ಲಿ ಕೊಡವ ಸಾಹಿತ್ಯ ಅಕಾಡೆಮಿ ನಡೆದು ಬಂದ ಹಾದಿ ಮತ್ತು ಸಾಧನೆಯ ಅವಲೋಕನ ಬೊಳ್ಳಿನಮ್ಮೆ ಕಾರ್ಯಕ್ರಮದಲ್ಲಿ ನಡೆಯಲಿದೆ. ಕೊಡವ ಭಾಷೆ ಸಾಹಿತ್ಯ ಸಂಸ್ಕೃತಿ ಹಾಗೂ ಆಚಾರ ವಿಚಾರಗಳನ್ನೊಳಗೊಂಡಂತೆ ಅತ್ಯುತ್ತಮವಾದ ಕಾರ್ಯಕ್ರಮವನ್ನು ಸರ್ಕಾರದಿಂದ ನೀಡಲ್ಪಟ್ಟ ಅನುದಾನದಿಂದ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದೆ. 

ಕಳೆದ 25 ವರ್ಷಗಳಲ್ಲಿ ಹಲವಾರು ಕಲಾವಿದರನ್ನು ಒಳಗೊಂಡ ಅಧ್ಯಕ್ಷರು ಹಾಗೂ ಸದಸ್ಯರುಗಳು ಕೊಡವ ಸಂಸ್ಕೃತಿಗಾಗಿ ವಿಶೇಷವಾದ ಸೇವೆಯನ್ನು ಸಲ್ಲಿಸಿದ್ದಾರೆ. ಅದೇಷ್ಟೊ ಸಾಹಿತಿಗಳು ಹಾಗೂ ಕಲಾವಿದರು ತಮ್ಮ ವಿಶೇಷ ಪ್ರತಿಭೆಯನ್ನು ಹೊರತರುವಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದು, ಮುಂದಿನ ತಲೆಮಾರಿಗೆ ವಿವಿಧ ರೀತಿಯ ಪುಸ್ತಕಗಳು ಮತ್ತು ಸಿ.ಡಿ.ಗಳನ್ನು ಹೊರತರುವಲ್ಲಿ ಯಶಸ್ವಿಯಾಗಿದೆ. ಅಲ್ಲದೆ ಕೊಡವ ಸಂಸ್ಕೃತಿಯಲ್ಲಿ ವ್ಯಕ್ತಿ ಹುಟ್ಟಿನಿಂದ ಹಿಡಿದು ಸಾಯುವವರೆಗಿನ ದಾಖಲೀಕರಣ ವ್ಯವಸ್ಥೆಯು ನಡೆದಿದೆ. ಕೊಡವ ಜಾನಪದ, ಆಚಾರ-ವಿಚಾರ, ಸಾಹಿತ್ಯ, ಕೊಡವ ರಂಗಭೂಮಿ ಚಟುವಟಿಕೆ ಹೀಗೆ ಹತ್ತು ಹಲವು ಕಾರ್ಯಕ್ರಮಗಳನ್ನು ಜಿಲ್ಲೆಯೂ ಸೇರಿದಂತೆ ಜಿಲ್ಲೆಯ ಹೊರಭಾಗದಲ್ಲೂ ನಡೆಸಿಕೊಂಡು ಬರುತ್ತಿದೆ.

ಪ್ರಸ್ತುತ ಬೊಳ್ಳಿನಮ್ಮೆ ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ಮೆರವಣಿಗೆ, ಕವಿಗೋಷ್ಠಿ, ವಿಚಾರಗೋಷ್ಠಿ, ಸಾಂಸ್ಕೃತಿಕ ಕಾರ್ಯಕ್ರಮಗಳು, ಕೊಡವ ಸಂಸ್ಕೃತಿಯ ಛಾಯಚಿತ್ರ ಮತ್ತು ಸಾಕ್ಷ್ಯಚಿತ್ರ ಪ್ರದರ್ಶನ, ಪ್ರಾಚೀನ ವಸ್ತು ಪ್ರದರ್ಶನ, ಕೊಡವ ಸಾಂಪ್ರಾದಾಯಿಕ ತಿನಿಸುಗಳು ಹಾಗೂ ಪುಸ್ತಕಗಳ ಪ್ರದರ್ಶನ ಮತ್ತು ಮಾರಾಟವನ್ನು ಆಯೋಜಿಸಲಾಗುತ್ತಿದೆ. 1994ರಿಂದ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯಲ್ಲಿ ಅಧ್ಯಕ್ಷರಾಗಿ ಸೇವೆಸಲ್ಲಿಸಿರುವ ಡಾ.ಉಳ್ಳಿಯಡ ಪೂವಯ್ಯ (1994ರಿಂದ 1998ರವರೆಗೆ), ಬಾಚರಣಿಯಂಡ ಪಿ. ಅಪ್ಪಣ್ಣ (2001ರಿಂದ 2002), ಚೆರಿಯಪಂಡ ಎಂ. ರಾಜಾನಂಜಪ್ಪ (2002 ರಿಂದ 2005), ಉಳ್ಳಿಯಡ ಡಾಟಿ ಪೂವಯ್ಯ (2005ರಿಂದ 2008), ಐಮುಡಿಯಂಡ ರಾಣಿ ಮಾಚಯ್ಯ (2009ರಿಂದ 2012), ಅಡ್ಡಂಡ ಸಿ. ಕಾರ್ಯಪ್ಪ (2012ರಿಂದ 2014) ಬಿದ್ದಾಟಂಡ ಎಸ್. ತಮ್ಮಯ್ಯ (2015-2017) ಇವುರುಗಳಿಗೆ ಗೌರವ ಸನ್ಮಾನ ಮಾಡಲಾಗುವುದು. ದಿ. ಮೇಕೇರಿರ ಕಾರ್ಯಪ್ಪ (1998ರಿಂದ 2001) ಇವರು ಅಕಾಡೆಮಿಯ ಅಧ್ಯಕ್ಷರಾಗಿ ಸೇವೆಸಲ್ಲಿಸಿರುವುದನ್ನು ಸ್ಮರಿಸಿಕೊಳ್ಳಲಾಗುತ್ತದೆ. 

ಜೂ.8 ರಂದು ಬೆಳಗ್ಗೆ 9 ಗಂಟೆಗೆ ಮೆರವಣಿಗೆ, 10:30 ಗಂಟೆಗೆ ಸಭಾ ಕಾರ್ಯಕ್ರಮ, ಮಳಿಗೆಗಳ ಉದ್ಘಾಟನೆ ನಡೆಯಲಿದೆ. ಮಧ್ಯಾಹ್ನ 2 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳ ಪ್ರದರ್ಶನ ನಡೆಯಲ್ಲಿದ್ದು, ಇದರಲ್ಲಿ ಉಮ್ಮತ್ತಾಟ್, ಕೋಲಾಟ್, ಬೊಳಕಾಟ್, ಕತ್ತಿಯಾಟ್, ಪರೆಯಕಳಿ, ದುಡಿಕೊಟ್ಟ್, ಉರ್‍ಟಿಕೊಟ್ಟ್, ತಾಲಿಪಾಟ್, ಕಾಪಳಕಳಿ ಕಲಾತಂಡಗಳು ಭಾಗವಹಿಸಲಿವೆ ಹಾಗೂ ಸಂಜೆ 5 ಗಂಟೆಗೆ ಕೊಡಗಿನ ಕಲಾವಿದರಿಂದ ಕೊಡವ ನಾಟಕ ಪ್ರದರ್ಶನಗೊಳ್ಳಲಿದೆ.

ಜೂ.9 ರಂದು ಬೆಳಗ್ಗೆ 11 ಗಂಟೆಗೆ ಕವಿಗೊಷ್ಠಿ, 10:30 ಗಂಟೆಗೆ ಲಯನ್ಸ್ ಸ್ಕೂಲ್, ಗೋಣಿಕೊಪ್ಪ ಇವರಿಂದ ಸಾಮೂಹಿಕ ನೃತ್ಯ ಪ್ರದರ್ಶನ, 9 ಗಂಟೆಗೆ ವಿಚಾರಗೋಷ್ಠಿ ನಡೆಯಲಿದೆ. ಮಧ್ಯಾಹ್ನ 2 ಗಂಟೆಗೆ ಸಮಾರೋಪ ಸಮಾರಂಭವನ್ನು ಆಯೋಜಿಸಲಾಗಿದೆ. ಸಂಜೆ 5 ಗಂಟೆಯಿಂದ ಖ್ಯಾತ ಕಲಾವಿದರಿಂದ ಕೊಡವ ಸಾಂಸ್ಕೃತಿಕ ಗೀತಾ ಗಾಯನ ಕಾರ್ಯಕ್ರಮ ಆಕರ್ಷಿಸಲಿದೆ.

ಅಕಾಡೆಮಿಯ 'ಬೊಳ್ಳಿನಮ್ಮೆ' ಕಾರ್ಯಕ್ರಮವನ್ನು ಸೂಸುತ್ರವಾಗಿ ನಡೆಸುವ ದೃಷ್ಟಿಯಿಂದ ಈಗಾಗಲೇ ಕಾವೇರಿ ಕಾಲೇಜಿನ ಸಭಾಂಗಣದಲ್ಲಿ ಕಾವೇರಿ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರು ಹಾಗೂ ಸದಸ್ಯರು, ಪ್ರಾಂಶುಪಾಲರು, ಅಕಾಡೆಮಿಯ ಮಾಜಿ ಅಧ್ಯಕ್ಷರು ಮತ್ತು ವಿವಿಧ ಕೊಡವ ಭಾಷಿಕ ಸಮಾಜಗಳ ಮುಖಂಡರೊಂದಿಗೆ 3 ಪೂರ್ವಭಾವಿ ಸಭೆಯನ್ನು ನಡೆಸಿ ಅವರ ಅಭಿಪ್ರಾಯದೊಂದಿಗೆ ಕಾರ್ಯಕ್ರಮದ ರೂಪರೇಷೆಯನ್ನು ಸಿದ್ಧಪಡಿಸಲಾಗಿದೆ. ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಲು ಒಂಬತ್ತು ಸಮಿತಿಗಳನ್ನು ರಚಿಸಲಾಗಿದೆ. ಅಕಾಡೆಮಿಯ ಪ್ರತಿಯೊಬ್ಬ ಸದಸ್ಯರಿಗೂ ಜವಬ್ದಾರಿಯನ್ನು ಆಯಾ ಸಮಿತಿಗಳಿಗೆ ಸಂಚಾಲಕರಾಗಿ ಆಯ್ಕೆ ಮಾಡುವ ಮೂಲಕ ನೀಡಲಾಗಿದೆ. 

ಪ್ರಚಾರ ಸಮಿತಿ- ನಾಳಿಯಮ್ಮಂಡ ಕೆ. ಉಮೇಶ್, ಐತಿಚಂಡ ರಮೇಶ್ ಉತ್ತಪ್ಪ ಮತ್ತು ಬೀಕಚಂಡ ಬೆಳ್ಯಪ್ಪ, ವೇದಿಕೆ ಸಮಿತಿ - ಹಂಚೆಟ್ಟಿರ ಮನು ಮುದ್ದಪ್ಪ, ತೋರೇರ ಎಂ. ಮುದ್ದಯ್ಯ ಮತ್ತು ಮನ್ನಕ್ಕಮನೆ ಬಾಲಕೃಷ್ಣ, ವಸತಿ ಮತ್ತು ಸಾರಿಗೆ ಸಮಿತಿ – ಮನ್ನಕ್ಕಮನೆ ಬಾಲಕೃಷ್ಣ, ಮೆರವಣಿಗೆ ಸಮಿತಿ - ಬೊಳ್ಳಜಿರ ಬಿ. ಅಯ್ಯಪ್ಪ, ಸ್ವಾಗತ ಸಮಿತಿ- ಅಂಗೀರ ಕುಸುಮ್, ಅಮ್ಮಣಿಚಂಡ ಪ್ರವೀಣ್ ಚಂಗಪ್ಪ ಹಾಗೂ ಹಂಚೆಟ್ಟಿರ  ಫ್ಯಾನ್ಸಿ ಮುತ್ತಣ್ಣ, ಸಾಂಸ್ಕೃತಿಕ ಸಮಿತಿ – ಅಜ್ಜಮಾಡ ಪಿ. ಕುಶಾಲಪ್ಪ, ಸುಳ್ಳಿಮಾಡ ಭವಾನಿ ಕಾವೇರಿಯಪ್ಪ, ಚಂಗುಲಂಡ ಪಿ. ಸೂರಜ್ ಮತ್ತು ಕುಡಿಯರ ಶಾರದ, ಗೋಷ್ಠಿಗಳ ಸಮಿತಿ - ಹಂಚೆಟ್ಟಿರ ಫ್ಯಾನ್ಸಿ ಮುತ್ತಣ್ಣ (ಕವಿಗೋಷ್ಠಿ) ಮತ್ತು ಬೊಳ್ಳಜಿರ ಬಿ. ಅಯ್ಯಪ್ಪ (ವಿಚಾರಗೋಷ್ಠಿ), ವಸ್ತು ಪ್ರದರ್ಶನ ಮತ್ತು ಮಾರಾಟ ಸಮಿತಿ – ಅಜ್ಜಮಾಡ ಪಿ. ಕುಶಾಲಪ್ಪ, ಹೆಚ್.ಎ ಗಣಪತಿ, ಉಟೋಪಚಾರ ಸಮಿತಿ – ಆಪಟೀರ ಎಸ್. ಮೊಣ್ಣಪ್ಪ ಮತ್ತು ಚಂಗುಲಂಡ ಪಿ. ಸೂರಜ್ ಇವರುಗಳನ್ನು ಆಯ್ಕೆಮಾಡಲಾಗಿದೆ. ಈ ಸಮಿತಿಗಳೊಂದಿಗೆ ಕೊಡವ ಭಾಷಿಕ ಸಮಾಜಗಳ ಮುಖಂಡರುಗಳ ಸಹಕಾರವನ್ನು ಕೂಡ ಪಡೆದುಕೊಳ್ಳಲಾಗುತ್ತಿದೆ. 

1994ರಲ್ಲಿ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯನ್ನು ಸ್ಥಾಪಿಸಿದ ಕಾರಣಕ್ಕಾಗಿ ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪಮೊಯ್ಲಿ ಅವರನ್ನು ಸೇರಿದಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಡಿ.ಕೆ.ಶಿವಕುಮಾರ್, ಕೊಡಗಿನ ಉಸ್ತುವಾರಿ ಸಚಿವ ಸಾ.ರಾ.ಮಹೇಶ್ ಹಾಗೂ ಕೊಡಗಿನ ಎಲ್ಲಾ ಜನಪ್ರತಿನಿಧಿಗಳು, ಕೊಡವ ಭಾಷಿಕ ಮುಖಂಡರುಗಳು, ಭಾಷಿಕ ಜನಾಂಗದ ಬಂಧುಗಳನ್ನು ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಹ್ವಾನಿಸಲಾಗುವುದು ಎಂದು ಪಿ.ಕೆ.ಪೊನ್ನಪ್ಪ ಹಾಗೂ ಚಂದ್ರಹಾಸ ರೈ ಅವರುಗಳು ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಅಕಾಡೆಮಿ ಸದಸ್ಯರುಗಳಾದ ಆಪಟೀರ ಎಸ್. ಟಾಟು ಮೊಣ್ಣಪ್ಪ, ಬೀಕಚಂಡ ಬೆಳ್ಯಪ್ಪ, ಸುಳ್ಳಿಮಾಡ ಭವಾನಿ ಕಾವೇರಿಯಪ್ಪ,  ಅಜ್ಜಮಾಡ ಕುಶಾಲಪ್ಪ, ಅಮ್ಮಣಿಚಂಡ ಪ್ರವಿಣ್ ಚಂಗಪ್ಪ, ಹಂಚೆಟ್ಟಿರ ಫ್ಯಾನ್ಸಿ ಮುತ್ತಣ್ಣ, ಕುಡಿಯರ ಶಾರದ, ಮನ್ನಕ್ಕಮನೆ ಬಾಲಕೃಷ್ಣ, ಹಂಚೆಟ್ಟಿರ ಮನು ಮುದ್ದಪ್ಪ, ಗಣಪತಿ ಹೆಚ್.ಎ, ಬೊಳ್ಳಜಿರ ಬಿ.ಅಯ್ಯಪ್ಪ, ಆಂಗೀರ ಕುಸುಂ, ಹಾಗೂ ನಾಳಿಯಮ್ಮಂಡ ಕೆ. ಉಮೇಶ್ ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News