ವೈದ್ಯರ ನಿರ್ಲಕ್ಷ್ಯದಿಂದ ವೃದ್ಧ ಸಾವು ಆರೋಪ: ದಾವಣಗೆರೆ ಜಿಲ್ಲಾಸ್ಪತ್ರೆ ಎದುರು ಕುಟುಂಬಸ್ಥರಿಂದ ಪ್ರತಿಭಟನೆ

Update: 2019-05-10 12:28 GMT

ದಾವಣಗೆರೆ, ಮೇ 10: ಗಾಯಕ್ಕೆ ಚಿಕಿತ್ಸೆ ಪಡೆಯಲು ಬಂದಿದ್ದ ವೃದ್ಧರೊಬ್ಬರು ವೈದ್ಯರ ನಿರ್ಲಕ್ಷ್ಯದಿಂದಾಗಿ ಸಾವನ್ನಪ್ಪಿದ್ದಾರೆಂದು ಆರೋಪಿಸಿ ಮೃತರ ಕುಟುಂಬಸ್ಥರು ಜಿಲ್ಲಾಸ್ಪತ್ರೆ ಆವರಣದ ಶವಾಗಾರದ ಬಳಿ ಶುಕ್ರವಾರ ಪ್ರತಿಭಟನೆ ನಡೆಸಿದ ಘಟನೆ ಜರುಗಿತು. 

ಬಳ್ಳಾರಿ ಜಿಲ್ಲೆ ಹರಪನಹಳ್ಳಿ ತಾಲೂಕಿನ ಹಗರಿ ಗಜಾಪುರ ಗ್ರಾಮದ ರೈತ ರುದ್ರಪ್ಪ(63) ಮೃತಪಟ್ಟ ವೃದ್ಧ. ತಮ್ಮ ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ ಕಾಲಿಗೆ ಗಾಯ ಮಾಡಿಕೊಂಡಿದ್ದ ರುದ್ರಪ್ಪ ತಮ್ಮ ಕಾಲಿನ ಗಾಯಕ್ಕೆ ಚಿಕಿತ್ಸೆಗೆಂದು ದಾವಣಗೆರೆಯಲ್ಲಿ ತಮ್ಮ ಮಗಳು ಸರಳಾ ಮನೆಗೆ ಬಂದಿದ್ದರು. ಸರಳಾ ತನ್ನ ತಂದೆಗೆ ಗಾಯ ಆಗಿದ್ದರಿಂದ ರಶ್ಮಿ ಕ್ಲಿನಿಕ್‍ಗೆ ಚಿಕಿತ್ಸೆಗೆಂದು ಕರೆದೊಯ್ದಿದ್ದರು. ಗಾಯಾಳು ರುದ್ರಪ್ಪನಿಗೆ ಕ್ಲಿನಿಕ್‍ನಲ್ಲಿ ವೈದ್ಯ ಡಾ.ವಿಶ್ವನಾಥ್ ಚುಚ್ಚುಮದ್ದು ನೀಡಿದ್ದಾರೆ. ಚುಚ್ಚುಮದ್ದು ನೀಡುತ್ತಲೇ ರೈತ ರುದ್ರಪ್ಪನ ಬಾಯಿಯಿಂದ ನೊರೆ ಬಂದು ರುದ್ರಪ್ಪ ತೀವ್ರ ಅಸ್ವಸ್ಥಗೊಂಡಿದ್ದಾರೆ. ತಕ್ಷಣವೇ ಸರಳಾ ತನ್ನ ತಂದೆಯನ್ನು ಜಿಲ್ಲಾಸ್ಪತ್ರೆಗೆ ಕರೆದೊಯ್ದಿದ್ದು, ಆದರೆ ಮಾರ್ಗ ಮಧ್ಯೆ ರುದ್ರಪ್ಪ ಸಾವನ್ನಪ್ಪಿದ್ದಾರೆ.

ವಿಷಯ ತಿಳಿದ ರುದ್ರಪ್ಪ ಕುಟುಂಬಸ್ಥರು ಜಿಲ್ಲಾಸ್ಪತ್ರೆ ಬಳಿ ಧಾವಿಸಿದರು. ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲೇ ಸಾವನ್ನಪ್ಪಿದ್ದ ರುದ್ರಪ್ಪನ ಶವವನ್ನು ಜಿಲ್ಲಾಸ್ಪತ್ರೆ ಶವಾಗಾರಕ್ಕೆ ಸಾಗಿಸಲಾಯಿತು. ಶವಾಗಾರದ ಬಳಿಯೇ ರುದ್ರಪ್ಪನ ಪುತ್ರಿ ಸರಳಾ ಹಾಗೂ ಕುಟುಂಬ ವರ್ಗ ಪ್ರತಿಭಟಿಸಿ, ರುದ್ರಪ್ಪನ ಸಾವಿಗೆ ಕಾರಣನಾದ ವೈದ್ಯರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಿ, ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. 

ಸಣ್ಣ ಗಾಯಕ್ಕೆ ಚಿಕಿತ್ಸೆ ಪಡೆಯಲು ಹೋದ ತಮ್ಮ ತಂದೆಗೆ ರಶ್ಮಿ ಕ್ಲಿನಿಕ್‍ನ ವೈದ್ಯ ಡಾ.ವಿಶ್ವನಾಥ ಯಾವ ಚುಚ್ಚುಮದ್ದು ನೀಡಿದರೋ ಗೊತ್ತಿಲ್ಲ, ಬಾಯಿಯಿಂದ ನೊರೆ ಬಂದು, ತೀವ್ರ ಅಸ್ವಸ್ಥಗೊಂಡರು. ಕಷ್ಟಪಟ್ಟು ಜಿಲ್ಲಾಸ್ಪತ್ರೆಗೆ ಕರೆ ತರುವಷ್ಟರಲ್ಲೇ ತಮ್ಮ ತಂದೆ ಸಾವನ್ನಪ್ಪಿದ್ದರು. ಆರೋಗ್ಯವಂತರಾಗಿದ್ದ ತಮ್ಮ ತಂದೆಗೆ ವೈದ್ಯ ನೀಡಿದ ಚುಚ್ಚು ಮದ್ದು ಯಾವುದೋ ಗೊತ್ತಿಲ್ಲ. ಆದರೆ, ವೈದ್ಯನ ನಿರ್ಲಕ್ಷ್ಯದಿಂದಲೇ ರುದ್ರಪ್ಪ ಸಾವನ್ನಪ್ಪಿದ್ದಾರೆ ಎಂದು ಕುಟುಂಬ ವರ್ಗ ಆರೋಪಿಸಿತು. 

ಕಾರ್ಮಿಕ ಮುಖಂಡ ಆವರಗೆರೆ ಎಚ್.ಜಿ.ಉಮೇಶ್ ಇತರರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ, ಮೃತರ ಕುಟುಂಬಕ್ಕೆ 10 ಲಕ್ಷ ರೂ. ಪರಿಹಾರ ನೀಡಬೇಕು, ರೋಗಿಯ ಚಿಕಿತ್ಸೆಯಲ್ಲಿ ನಿರ್ಲಕ್ಷ್ಯ ತೋರಿದ ಡಾ.ವಿಶ್ವನಾಥ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಬೇಕು ಎಂದು ಒತ್ತಾಯಿಸಿದರು. ರಶ್ಮಿ ಕ್ಲಿನಿಕ್‍ಗೆ ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲಿಸಬೇಕು. ಮೃತರ ಕುಟುಂಬಕ್ಕೆ ನ್ಯಾಯ ಕೊಡಿಸಬೇಕು ಎಂದು ಅವರು ಆಗ್ರಹಿಸಿದರು.

ಘಟನೆ ಹಿನ್ನೆಲೆಯಲ್ಲಿ ಮೃತನ ಕುಟುಂಬಸ್ಥರು ಪ್ರತಿಭಟನೆ ನಡೆಸುತ್ತಿದ್ದಂತೆಯೇ ವೈದ್ಯ ಡಾ.ವಿಶ್ವನಾಥ ನಾಪತ್ತೆಯಾಗಿದ್ದು, ಆಸ್ಪತ್ರೆಗೆ ಪೊಲೀಸ್ ಬಿಗಿ ಭದ್ರತೆ ಕಲ್ಪಿಸಲಾಗಿದ್ದು, ಈ ಕುರಿತು ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News