ಉಮೇಶ್ ಜಾಧವ್ ಗೋಮುಖವ್ಯಾಘ್ರ: ಸಿದ್ದರಾಮಯ್ಯ

Update: 2019-05-10 12:42 GMT

ಕಲಬುರಗಿ, ಮೇ 10: ಉಮೇಶ್ ಜಾಧವ್ ಯಾವ ಕಾರಣಕ್ಕಾಗಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದರೊ ಗೊತ್ತಿಲ್ಲ. ಅವರು ಒಂದು ರೀತಿಯಲ್ಲಿ ಗೋಮುಖ ವ್ಯಾಘ್ರ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿಲ್ಲಿ ಜಾಧವ್ ವಿರುದ್ಧ ವಾಗ್ದಾಳಿ ನಡೆಸಿದರು.

ಶುಕ್ರವಾರ ಚಿಂಚೋಳಿ ಕ್ಷೇತ್ರದ ಕುಂಚಾವರಮ್ ಗ್ರಾಮದಲ್ಲಿ ಏರ್ಪಡಿಸಿದ್ದ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಜಾಧವ್ ನಮ್ಮ ಪಕ್ಷದಿಂದ ಆಯ್ಕೆಯಾಗಿದ್ದ. ಆದರೆ, ಇದೀಗ ರಾಜೀನಾಮೆ ನೀಡುವ ಮೂಲಕ ಕ್ಷೇತ್ರದ ಜನರಿಗೆ ದ್ರೋಹ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಜಾಧವ್‌ನನ್ನು ಖರ್ಗೆ ಮತ್ತು ಧರಂಸಿಂಗ್ ರಾಜಕೀಯಕ್ಕೆ ತಂದರು. ಆತನಿಗೆ ಉಪಕಾರ ಸ್ಮರಿಸುವ ಕೃತಜ್ಞತೆಯೇ ಇಲ್ಲ. ಇದೀಗ ಪುತ್ರನನ್ನು ಚುನಾವಣೆಗೆ ನಿಲ್ಲಿಸಿದ್ದು, ಪಕ್ಷಾಂತರಿಗಳಿಗೆ ಮತದಾರರ ಪಾಠ ಕಲಿಸಲಿದ್ದು, ಅಪ್ಪ-ಮಗ ಇಬ್ಬರು ಸೋಲಲಿದ್ದಾರೆ ಎಂದು ಸಿದ್ದರಾಮಯ್ಯ ಭವಿಷ್ಯ ನುಡಿದರು

ತನ್ನ ವೈಯಕ್ತಿಕ ಹಿತಕ್ಕಾಗಿ ಪಕ್ಷಕ್ಕೆ ಮತ್ತು ಕ್ಷೇತ್ರದ ಜನತೆಗೆ ದ್ರೋಹ ಮಾಡುವುದು ಹೆತ್ತ ತಾಯಿಗೆ ಅನ್ಯಾಯ ಮಾಡಿದಂತೆ. ಪರಿಶಿಷ್ಟ ಸಮುದಾಯಕ್ಕೆ ಸೇರಿದ ವ್ಯಕ್ತಿಯಾಗಿ ಸಂವಿಧಾನ ವಿರೋಧಿಗಳ ಪಕ್ಷಕ್ಕೆ ಸೇರಿದ್ದು, ಆತನಿಗೆ ಯಾವುದೇ ಕಾರಣಕ್ಕೂ ಮತ ಹಾಕಬೇಡಿ ಎಂದು ಮನವಿ ಮಾಡಿದರು.

ಅನ್ನಭಾಗ್ಯ ಯೋಜನೆ ಮೂಲಕ ಬಡವರಿಗೆ ಉಚಿತವಾಗಿ ಅಕ್ಕಿ ಕೊಟ್ಟಿದ್ದೇವೆ. ರೈತರ ಸಾಲಮನ್ನಾ ಮಾಡಲಾಗಿದೆ. ಆದರೆ, ಮೋದಿ, ಯಡಿಯೂರಪ್ಪ ಜನರಿಗೆ ಏನು ಕೊಟ್ಟಿದ್ದಾರೆಂದು ಪ್ರಶ್ನಿಸಿದ ಸಿದ್ದರಾಮಯ್ಯ, ಬಂಜಾರ ಅಭಿವೃದ್ಧಿ ನಿಗಮ, ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ ಮಾಡಿದ್ದು ಕಾಂಗ್ರೆಸ್ ಸರಕಾರ ಎಂದು ಹೇಳಿದರು.

ಕೋಲಿ ಸಮುದಾಯವನ್ನು ಎಸ್ಟಿ ಪಟ್ಟಿಗೆ ಸೇರಿಸುತ್ತೇವೆ ಎಂದು ಚಿಂಚನಸೂರು ಹೇಳುತ್ತಿದ್ದಾನೆ. ಆದರೆ, ಐದು ವರ್ಷ ಕೇಂದ್ರದಲ್ಲಿ ಬಿಜೆಪಿ ಸರಕಾರ ಆಡಳಿತದಲ್ಲಿತ್ತು. ಆಗ ಏಕೆ ಮಾಡಲಿಲ್ಲ ಎಂದು ಪ್ರಶ್ನಿಸಿದ ಅವರು, ಈ ಬಗ್ಗೆ ಬಿಜೆಪಿ ಮುಖಂಡರು ಬಹಿರಂಗ ಚರ್ಚೆಗೆ ಬರಲಿ ಎಂದು ಆಹ್ವಾನಿಸಿದರು.

ವಿದ್ಯಾವಂತ ಮತ್ತು ಸಂಭಾವಿತ ವ್ಯಕ್ತಿ ಸುಭಾಷ್ ರಾಠೋಡ್ ಅವರಿಗೆ ಚಿಂಚೋಳಿ ಮತದಾರರು ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸುವ ಮೂಲಕ ಪಕ್ಷಾಂತರಿ, ದ್ರೋಹಿ ಜಾಧವ್‌ಗೆ ಸೂಕ್ತ ಪಾಠ ಕಲಿಸಬೇಕು ಎಂದು ಸಿದ್ದರಾಮಯ್ಯ ಮನವಿ ಮಾಡಿದರು.

ಸಭೆಯಲ್ಲಿ ಕಾಂಗ್ರೆಸ್ ಲೋಕಸಭೆ ನಾಯಕ ಮಲ್ಲಿಕಾರ್ಜುನ ಖರ್ಗೆ, ಸಚಿವರಾದ ಎಂ.ಬಿ. ಪಾಟೀಲ್, ಪ್ರಿಯಾಂಕ್ ಖರ್ಗೆ, ಪಿ.ಟಿ.ಪರಮೇಶ್ವರ ನಾಯ್ಕಿ, ರಹೀಂ ಖಾನ್, ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ಕೆ.ಬಿ.ಶಾಣಪ್ಪ, ಶಾಸಕ ನಾರಾಯಣರಾವ್, ಕೆ.ಸಿ. ಕೊಂಡಯ್ಯ, ಅಲ್ಲಂ ವೀರಭದ್ರಪ್ಪ, ಜಲಜಾ ನಾಯ್ಕೆ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News