×
Ad

ಕಣ್ಣೀರು ಹಾಕಿ ಮತ ಕೇಳುವ ಅಗತ್ಯ ನನಗಿಲ್ಲ: ಡಿ.ಕೆ.ಶಿವಕುಮಾರ್

Update: 2019-05-10 19:41 IST

ಹುಬ್ಬಳ್ಳಿ, ಮೇ 10: ಐಟಿ ದಾಳಿ ನಡೆದಾಗಲೇ ಹೆದರಲಿಲ್ಲ. ಇನ್ನು ಕಣ್ಣೀರು ಹಾಕಿ ಮತ ಕೇಳುತ್ತೇನಾ? ಅದರ ಅಗತ್ಯ ನನಗಿಲ್ಲ. ಪೌರಾಡಳಿತ ಸಚಿವರಾಗಿದ್ದ ಸಿ.ಎಸ್.ಶಿವಳ್ಳಿ ನನ್ನ ಆಪ್ತ ಸ್ನೇಹಿತ. ಆತ ನಮ್ಮನ್ನು ಅಗಲಿರುವುದನ್ನು ನೆನೆದು ನಾನು ಭಾವುಕನಾದೆ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

ಶುಕ್ರವಾರ ಹುಬ್ಬಳ್ಳಿಯ ಕಾಟನ್ ಕೌಂಟಿ ಕ್ಲಬ್ ನಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕರು, ಪದಾಧಿಕಾರಿಗಳು ಉತ್ಸಾಹದಿಂದ ಚುನಾವಣೆ ನಡೆಸಲು ಬಂದಿದ್ದಾರೆ. ಇದರಿಂದ ತುಂಬಾ ಸಂತೋಷವಾಗಿದೆ. ಕ್ಷೇತ್ರದಲ್ಲಿ ನಮ್ಮ ಗ್ರೌಂಡ್ ರಿಪೋರ್ಟ್ ಚೆನ್ನಾಗಿದೆ ಎಂದರು.

ಚುನಾವಣೆಯಲ್ಲಿ ಜೆಡಿಎಸ್ ಮುಖಂಡರು ಸಕ್ರಿಯವಾಗಿ ನಮ್ಮ ಪರ ಕೆಲಸ ಮಾಡುತ್ತಿದ್ದಾರೆ. ಶಿವಳ್ಳಿಯವರು ಕ್ಷೇತ್ರದಲ್ಲಿ ಇಷ್ಟು ದಿನಗಳ ಕಾಲ ಮಾಡಿದ ಅಭಿವೃದ್ಧಿ ಕೆಲಸಗಳನ್ನು ನಾವು ಮುಂದುವರಿಸುತ್ತೇವೆ. ಈ ಚುನಾವಣೆ ಸಂದರ್ಭದಲ್ಲಿ ನಾವು ಯಾರನ್ನೂ ಟೀಕೆ ಮಾಡುವುದು ಸರಿಯಲ್ಲ. ಟೀಕೆ ಮಾಡಲು ಇದು ಸಮಯ ಕೂಡ ಅಲ್ಲ ಎಂದು ಅವರು ಹೇಳಿದರು.

ನಾನು ಈ ಹಿಂದೆಯೂ ಶಿವಳ್ಳಿ ಪರ ಕೆಲಸ ಮಾಡಿದ್ದೆ. ಈಗ ಅವರ ಕುಟುಂಬದವರ ಪರ ಕೆಲಸ ಮಾಡುತ್ತಿದ್ದೇನೆ. ಈ ಚುನಾವಣೆಯಲ್ಲಿ ಎಲ್ಲ ಪಕ್ಷದ ಮತದಾರರು ಶಿವಳ್ಳಿ ಅವರ ಕುಟುಂಬ ಹಾಗೂ ಕಾಂಗ್ರೆಸ್‌ಗೆ ಮತ ಹಾಕುತ್ತಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಇಡೀ ಸರಕಾರ ಕುಂದಗೋಳ ಕ್ಷೇತ್ರದ ಅಭಿವೃದ್ಧಿಗೆ ಬದ್ಧವಾಗಿದೆ. ಕ್ಷೇತ್ರದ ಯಾವುದೇ ಪ್ರದೇಶದಲ್ಲೂ ಹಣದ ಆಮಿಷ ಹಾಗೂ ಅಧಿಕಾರದ ಆಮಿಷ ಒಡ್ಡುತ್ತಿಲ್ಲ. ಬಿಜೆಪಿಯವರ ಬಳಿ ಸಾಕ್ಷಿ ಇದ್ರೆ, ಬಹಿರಂಗ ಪಡಿಸಲಿ ಎಂದು ಶಿವಕುಮಾರ್ ಸವಾಲು ಹಾಕಿದರು.

ಶ್ರೀರಾಮುಲು ವಿರುದ್ಧ ಚು.ಆಯೋಗಕ್ಕೆ ದೂರು: ಶಿವಳ್ಳಿ ಸಾವಿಗೆ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಸರಕಾರ ಕಾರಣ ಎಂದು ಆರೋಪಿಸಿರುವ ಬಿಜೆಪಿ ಶಾಸಕ ಬಿ.ಶ್ರೀರಾಮುಲು ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದ್ದೇವೆ ಎಂದು ಶಿವಕುಮಾರ್ ಹೇಳಿದರು.

ಶ್ರೀರಾಮುಲು ಕಾಂಗ್ರೆಸ್ ಪಕ್ಷದ ಮೇಲೆ ಕೊಲೆ ಆರೋಪ ಮಾಡಿದ್ದು ಅಕ್ಷಮ್ಯ. ಚುನಾವಣೆ ಸಂದರ್ಭದಲ್ಲಿ ಅಸಂಬದ್ಧ ಹೇಳಿಕೆ ನೀಡುವುದು ಸರಿಯಲ್ಲ. ಈ ಕುರಿತು ನಾವು ಈಗಾಗಲೇ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದು, ಆಯೋಗವು ಮುಂದಿನ ತೀರ್ಮಾನ ತೆಗೆದುಕೊಳ್ಳಲಿದೆ ಎಂದು ಅವರು ತಿಳಿಸಿದರು.

ಭ್ರಷ್ಟಾಚಾರದ ಹಣದಿಂದ ಚುನಾವಣೆ ಮಾಡುತ್ತಿದ್ದಾರೆ ಎಂಬ ಯಡಿಯೂರಪ್ಪ ಆರೋಪಕ್ಕೆ ತಿರುಗೇಟು ನೀಡಿದ ಶಿವಕುಮಾರ್, ಯಾರು ಭ್ರಷ್ಟಾಚಾರ ಮಾಡಿದ್ದಾರೆ ಎಂಬ ಬಗ್ಗೆ ದಾಖಲೆ ಇದ್ದರೆ ಬಿಡುಗಡೆ ಮಾಡಲಿ, ಪ್ರತಿಪಕ್ಷದಲ್ಲಿ ಇದ್ದವರಿಗೆ ಆರೋಪ ಮಾಡುವುದೇ ಆಗಿದೆ ಎಂದರು.

ಕುಂದಗೋಳ ಚುನಾವಣೆ ಬಡವರು ಹಾಗೂ ಶ್ರೀಮಂತರ ನಡುವಿನ ಯುದ್ಧವಾಗಿದೆ. ಬಿಜೆಪಿ ಅಭ್ಯರ್ಥಿ ಚಿಕ್ಕನಗೌಡರ ಕಳೆದ ಚುನಾವಣೆಯಲ್ಲಿ ಕಡಿಮೆ ಮತದಾನವಾದ ಪ್ರದೇಶಗಳಿಗೆ ನೀರು ಬಿಡದೆ ದಬ್ಬಾಳಿಕೆ ನಡೆಸುತ್ತಿದ್ದಾರೆ. ಒತ್ತಾಯ ಪೂರ್ವಕವಾಗಿ ಹೆದರಿಸಿ, ಬೆದರಿಸಿ ಮತ ಕೇಳುತ್ತಿದ್ದಾರೆ ಎಂದು ಶಿವಕುಮಾರ್ ಆರೋಪಿಸಿದರು.

ನಾವು ನೀತಿ ಸಂಹಿತೆ ಉಲ್ಲಂಘಿಸದೆ ಮತ ಯಾಚನೆ ಮಾಡುತ್ತಿದ್ದೇವೆ. ಎಲ್ಲರ ಬಳಿ ಕೈ ಮುಗಿದು ಮತ ಕೇಳುತ್ತಿದ್ದೇವೆ. ಯಡಿಯೂರಪ್ಪನವರ ಮತ ಇದೇ ಕ್ಷೇತ್ರದಲ್ಲಿ ಇದ್ದರೆ ಅವರ ಬಳಿಯೂ ಹೋಗಿ ಮತ ಯಾಚಿಸುತ್ತೇವೆ ಎಂದು ಶಿವಕುಮಾರ್ ತಿಳಿಸಿದರು.

ಬಿಎಸ್‌ವೈಗೆ ತಿರುಗೇಟು

ಯಡಿಯೂರಪ್ಪನವರ ಜತೆ ರಾಜ್ಯದ 222 ಶಾಸಕರು ಇದ್ದಾರೆ. ಅದೇ 222 ಜನ ಶಾಸಕರು ನಮ್ಮ ಸಂಪರ್ಕದಲ್ಲಿಯೂ ಇದ್ದಾರೆ. ನಮ್ಮ ಸರಕಾರ ಬೀಳಿಸಿ ಮುಖ್ಯಮಂತ್ರಿ ಆಗುತ್ತೇನೆ ಎಂದು ಕನಸು ಕಾಣುತ್ತಿರುವ ಅವರು ಮೂಹೂರ್ತ ನಿಗದಿ ಮಾಡಿಕೊಳ್ಳಲಿ.

-ಡಿ.ಕೆ.ಶಿವಕುಮಾರ್, ಜಲಸಂಪನ್ಮೂಲ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News