ಮೈತ್ರಿ ಸರಕಾರದ 20ಕ್ಕೂ ಹೆಚ್ಚು 'ಕೈ' ಶಾಸಕರಿಗೆ ಅತೃಪ್ತಿ: ಬಿ.ಎಸ್.ಯಡಿಯೂರಪ್ಪ

Update: 2019-05-10 14:48 GMT

ಹುಬ್ಬಳ್ಳಿ, ಮೇ 10: ‘ಮೈತ್ರಿ ಸರಕಾರದ ಬಗ್ಗೆ ಕಾಂಗ್ರೆಸ್ ಪಕ್ಷದ 20ಕ್ಕೂ ಅಧಿಕ ಮಂದಿ ಶಾಸಕರಿಗೆ ಅತೃಪ್ತಿ ಇದ್ದು, ಮೇ 23ರ ಬಳಿಕ ಅವರು ಯಾವುದೇ ನಿರ್ಧಾರವನ್ನಾದರೂ ಕೈಗೊಳ್ಳಬಹುದೆಂದು ಕಾದು ನೋಡಬೇಕು’ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೊಸ ಬಾಂಬ್ ಸಿಡಿಸಿದ್ದಾರೆ.

ಶುಕ್ರವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಬಿಜೆಪಿಯ 104 ಮಂದಿ ಶಾಸಕರಿದ್ದು, ಕುಂದಗೋಳ ಮತ್ತು ಚಿಂಚೋಳಿ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಲಿದ್ದು, ನಮ್ಮ ಸಂಖ್ಯೆ 106ಕ್ಕೆ ಏರಿಕೆಯಾಗಲಿದೆ. ಮೂವರು ಪಕ್ಷೇತರ ಶಾಸಕರು ಬಿಜೆಪಿ ಬೆಂಬಲಿಸಲಿದ್ದು ಬಿಜೆಪಿ ಸಂಖ್ಯೆ 109ಕ್ಕೆ ಏರಿಕೆಯಾಗಲಿದೆ ಎಂದು ಹೇಳಿದರು.

ಸಿಎಂ ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರಕಾರ ಯಾವುದೇ ಕಾರಣಕ್ಕೂ ಅವಧಿ ಪೂರ್ಣಗೊಳಿಸಲು ಸಾಧ್ಯವಿಲ್ಲ ಎಂದು ಭವಿಷ್ಯ ನುಡಿದ ಯಡಿಯೂರಪ್ಪ, ಮಂಡ್ಯ, ತುಮಕೂರು ಕ್ಷೇತ್ರಗಳಲ್ಲಿಯೂ ಸೋಲಿನ ಭಯದಿಂದಲೇ ಕುಮಾರಸ್ವಾಮಿ ಮತ್ತು ದೇವೇಗೌಡ ರೆಸಾರ್ಟ್‌ಗೆ ತೆರಳುತ್ತಿದ್ದಾರೆಂದು ಲೇವಡಿ ಮಾಡಿದರು.

ಮೈತ್ರಿ ಸ್ಫೋಟ: ಜೆಡಿಎಸ್‌ಗೆ ಬೆಂಬಲ ನೀಡಿರುವುದು ಕಾಂಗ್ರೆಸ್ ಶಾಸಕರಿಗೆ ಇಷ್ಟವಿಲ್ಲ. ಬಿಎಸ್‌ವೈ ಹೇಳಿದಂತೆ ಇಪ್ಪತ್ತು ಶಾಸಕರಲ್ಲ ಇನ್ನೂ ಹೆಚ್ಚಿನ ಶಾಸಕರಿಗೆ ಅಸಮಾಧಾನವಿದೆ. ಈ ಬೆಂಕಿ ಲಾವಾರಸವಾಗಿದ್ದು ಮೇ 23ರ ಬಳಿಕ ಸ್ಫೋಟ ಆಗುವುದು ನಿಶ್ಚಿತ ಎಂದು ಮಾಜಿ ಡಿಸಿಎಂ ಆರ್.ಅಶೋಕ್ ಭವಿಷ್ಯ ನುಡಿದರು.

ಮೇ 23ರ ಲೋಕಸಭೆ ಚುನಾವಣಾ ಫಲಿತಾಂಶದ ಬಳಿಕ ಏನು ಬೇಕಾದರೂ ಆಗಬಹುದು. ಮೈತ್ರಿ ಸರಕಾರ ಬಿದ್ದರೆ ನಾವೇನು ಸನ್ಯಾಸಿಗಳಲ್ಲ. ರಾಜಕೀಯ ಮಾಡಲು ನಾವು ಇರುವುದು. ದೇವರ ಮೊರೆ ಹೊಕ್ಕರೆ ಬಂಡಾಯ ತಡೆಗಟ್ಟಲು ಸಾಧ್ಯವಿಲ್ಲ ಎಂದು ಅಶೋಕ್ ಟೀಕಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News