ಮಡಿಕೇರಿ: ತಲೆಮರೆಸಿಕೊಂಡಿದ್ದ ಕೊಲೆ ಆರೋಪಿ ಬಂಧನ
ಮಡಿಕೇರಿ, ಮೇ 10: ನರ್ಸರಿ ಮಾಡಲು ಜಾಗ ಭೋಗ್ಯಕ್ಕೆ ನೀಡಲಿಲ್ಲ ಎಂಬ ಕಾರಣಕ್ಕೆ ವ್ಯಕ್ತಿಯ ಹತ್ಯೆಗೈದ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿಯನ್ನು ರಂಗಸಮುದ್ರದ ವಿರೂಪಾಕ್ಷಪುರ ನಿವಾಸಿ ಪರ್ಲಕೋಟಿ ಹೇಮರಾಜ್ ಅಲಿಯಾಸ್ ಕಂದ (45) ಎಂದು ಗುರುತಿಸಲಾಗಿದೆ. ರಂಗಸಮುದ್ರ ಗ್ರಾಮದಲ್ಲಿರುವ ಚಿಕ್ಲಿಹೊಳೆ ಜಂಕ್ಷನ್‍ನಲ್ಲಿ ನರ್ಸರಿ ಮಾಡಲು ಕೆ.ಕೆ. ರಾಜು ಎಂಬವರ ಜಾಗವನ್ನು ಹೇಮರಾಜ್ ಭೋಗ್ಯಕ್ಕೆ ಕೇಳಿದ್ದರೆನ್ನಲಾಗಿದ್ದು, ಇದಕ್ಕೆ ಒಪ್ಪದ ರಾಜು ಅವರನ್ನು ಕಳೆದ ಜ.11ರಂದು ದೊಣ್ಣೆಯಿಂದ ಹೊಡೆದು, ನೆಲದಲ್ಲಿ ಎಳೆದಾಡಿ ಗಾಯಗೊಳಿಸಿದ್ದರೆನ್ನಲಾಗಿದೆ. ಆದರೆ ರಾಜು ಅವರನ್ನು ಚಿಕಿತ್ಸೆಗೆ ಒಳಪಡಿಸಿದ್ದರೂ, ಫಲಕಾರಿಯಾಗದೆ ಎ.14ರಂದು ಸಾವಿಗೀಡಾಗಿದ್ದು, ಈ ಸಂಬಂಧ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಆದರೆ ಆರೋಪಿ ತಲೆ ಮರೆಸಿಕೊಂಡಿದ್ದು, ಕಾಟಗೇರಿ ಗ್ರಾಮದಲ್ಲಿ ಆರೋಪಿ ಇರುವ ಬಗ್ಗೆ ಸುಳಿವು ದೊರೆತ ಪೊಲೀಸರು ಮೇ 9ರಂದು ದಾಳಿ ನಡೆಸಿ ಬಂಧಿಸಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ.ಪೆನ್ನೇಕರ್ ಅವರ ಮಾರ್ಗದರ್ಶನದಲ್ಲಿ ಸೋಮವಾರಪೇಟೆ ಡಿವೈಎಸ್‍ಪಿ ದಿನಕರ ಶೆಟ್ಟಿ ಮತ್ತು ತನಿಖಾಧಿಕಾರಿ ಬಿ.ಎಸ್.ದಿನೇಶ್ ಕುಮಾರ್ ಅವರ ನೇತೃತ್ವದಲ್ಲಿ ಪಿಎಸ್‍ಐ ನಂದೀಶ್ ಕುಮಾರ್, ವಿಶೇಷ ಅಪರಾಧ ಪತ್ತೆ ತಂಡದ ಹೆಚ್.ಎಸ್.ರವಿ, ಎ.ಮಂಜುನಾಥ್, ನಾಗರಾಜ್. ಎನ್.ಆರ್.ರಮೇಶ್, ಸಂಪತ್ ರೈ ಅವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ಪ್ರಕರಣದ ಆರೋಪಿಯನ್ನು ಪತ್ತೆ ಹಚ್ಚಿದ ಅಧಿಕಾರಿ ಹಾಗೂ ಸಿಬ್ಬಂದಿ ಕಾರ್ಯವನ್ನು ಪೊಲೀಸ್ ವರಿಷ್ಠಾಧಿಕಾರಿ ಶ್ಲಾಘಿಸಿದ್ದಾರೆ.