ಕಸದ ತೊಟ್ಟಿಯಾಗುತ್ತಿರುವ ಶಿವಮೊಗ್ಗ ನಗರ

Update: 2019-05-10 18:03 GMT

ಶಿವಮೊಗ್ಗ, ಮೇ 10: 'ಎಲ್ಲೆಂದರಲ್ಲಿ ಬಿದ್ದಿರುವ ಕಸದ ರಾಶಿ... ಮೂಗು ಮುಚ್ಚಿಕೊಂಡು ಓಡಾಡುವ ದುಃಸ್ಥಿತಿ... ಹೆಚ್ಚುತ್ತಿರುವ ಕ್ರಿಮಿಕೀಟಗಳ ಹಾವಳಿ... ಎದುರಾಗಿದೆ ಸಾಂಕ್ರಾಮಿಕ ರೋಗ ಹರಡುವ ಭೀತಿ...! ಇದು, ಶಿವಮೊಗ್ಗ ನಗರದಲ್ಲಿ ಇತ್ತೀಚೆಗೆ ಕಂಡುಬರುತ್ತಿರುವ ದುಃಸ್ಥಿತಿ. ಹೌದು. ನಗರದಲ್ಲಿ ಘನತ್ಯಾಜ್ಯ ವಿಲೇವಾರಿ ಸಮರ್ಪಕವಾಗಿ ನಡೆಯುತ್ತಿಲ್ಲ. ಪ್ರಮುಖ ರಸ್ತೆಗಳ ಬದಿಯೇ ಕಸದ ರಾಶಿ ಬಿದ್ದಿರುವುದು ಕಂಡುಬರುತ್ತಿದೆ. 

ಘನತ್ಯಾಜ್ಯ ವಿಲೇವಾರಿಗೆ ಮಹಾನಗರ ಪಾಲಿಕೆ ಆಡಳಿತ ಪ್ರತಿವರ್ಷ ಕೋಟ್ಯಾಂತರ ರೂ. ವ್ಯಯಿಸುತ್ತಿದೆ. ಆದಾಗ್ಯೂ ಇತ್ತೀಚೆಗೆ ನಗರ ವ್ಯಾಪ್ತಿಯಲ್ಲಿ ಘನತ್ಯಾಜ್ಯ ವಿಲೇವಾರಿ ಸಮರ್ಪಕವಾಗಿ ನಡೆಯದಿರುವುದು ನಾಗರೀಕ ವಲಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. 

ಡಿ.ಸಿ.ಗೆ ಮನವಿ: ನಗರದ ಕೆಎಸ್‍ಆರ್‍ಟಿಸಿ ಡಿಪೋದ 80 ಅಡಿ ರಸ್ತೆಯ ಇಕ್ಕೆಲಗಳಲ್ಲಿ ಬಿದ್ದಿರುವ ಘನತ್ಯಾಜ್ಯದ ರಾಶಿಯೇ ಬಿದ್ದಿದೆ. ಹಲವು ಬಾರಿ ಮಾಹಿತಿ ನೀಡಿದ ಹೊರತಾಗಿಯೂ, ಮಹಾನಗರ ಪಾಲಿಕೆ ಆಡಳಿತವು ಸಮರ್ಪಕವಾಗಿ ಕಸ ವಿಲೇವಾರಿ ಮಾಡದಿರುವುದರಿಂದ ಬೇಸತ್ತ ಪತ್ರಕರ್ತ ಶಿ.ಜು.ಪಾಶ ಎಂಬುವರು, ಕಸದ ರಾಶಿಯ ದೃಶ್ಯಾವಳಿಗಳನ್ನು ತಮ್ಮ ಫೇಸ್‍ಬುಕ್ ಖಾತೆಯಲ್ಲಿ ಹಾಕಿದ್ದಾರೆ. ಜಿಲ್ಲಾಧಿಕಾರಿಗಳ ಗಮನ ಸೆಳೆಯುವ ಕಾರ್ಯ ನಡೆಸಿದ್ದಾರೆ. 

'ಮಾನ್ಯ ಕ್ರಿಯಾಶೀಲ ಜಿಲ್ಲಾಧಿಕಾರಿಗಳೇ, ಶಿವಮೊಗ್ಗದ ಕೆಎಸ್‍ಆರ್‍ಟಿಸಿ ಡಿಪೋ ದಾಟಿದರೆ 80 ಅಡಿ ರಸ್ತೆಯ ಉದ್ದಕ್ಕೂ ಸಿಗುವ ಭೀಕರ ಗಲೀಜು ದೃಶ್ಯವಿದು. ಈ ಬಗ್ಗೆ ದೂರು ನೀಡಿದರೂ ಪ್ರಯೋಜವಾಗಿಲ್ಲ. ನೀವು ಮನಸ್ಸು ಮಾಡುತ್ತೀರೆಂಬ ನಂಬಿಕೆಯಿದೆ' ಎಂದು ಬರೆದಿದ್ದಾರೆ. 

ಎಚ್ಚೆತ್ತುಕೊಳ್ಳಲಿ: ಕೇಂದ್ರ ಸರ್ಕಾರದ ಪ್ರತಿಷ್ಠಿತ ಸ್ಮಾರ್ಟ್ ಸಿಟಿ ಯೋಜನೆಯಡಿ, ಶಿವಮೊಗ್ಗ ನಗರದಲ್ಲಿ ನೂರಾರು ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ದಿ ಕಾಮಗಾರಿಗಳು ನಡೆಯುತ್ತಿವೆ. ಆದರೆ ನಗರದ ವಿವಿಧೆಡೆ ಸಮರ್ಪಕವಾಗಿ ಘನತ್ಯಾಜ್ಯ ವಿಲೇವಾರಿ ನಡೆಯದಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ನಾಗರೀಕರು ಆಕ್ರೋಶ ವ್ಯಕ್ತಪಡಿಸುತ್ತಾರೆ. 

ಮಹಾನಗರ ಪಾಲಿಕೆ ಆಯುಕ್ತೆ ಚಾರುಲತಾ ಸೋಮಲ್‍ರವರು, ಘನತ್ಯಾಜ್ಯ ವಿಲೇವಾರಿಯಲ್ಲಾಗುತ್ತಿರುವ ವ್ಯತ್ಯಯದ ಕುರಿತಂತೆ ಇನ್ನಾದರೂ ಗಮನಹರಿಸಬೇಕಾಗಿದೆ. ನಾಗರೀಕರು ಬೀದಿಗಿಳಿದು ಪ್ರತಿಭಟನೆ ನಡೆಸುವ ಮುನ್ನವೇ ಎಚ್ಚೆತ್ತುಕೊಳ್ಳಬೇಕಾಗಿದೆ. ಸಂಬಂಧಿಸಿದ ಅಧಿಕಾರಿಗಳಿಗೆ ಚುರುಕು ಮುಟ್ಟಿಸುವ ಕಾರ್ಯ ನಡೆಸಬೇಕಾಗಿದೆ ಎಂದು ನಾಗರಿಕರು ಅಭಿಪ್ರಾಯಪಡುತ್ತಾರೆ. 

ಪಾಲಿಕೆ ಆಯುಕ್ತರಿಗೆ ಸೂಚಿಸಲಾಗಿದೆ : ಡಿ.ಸಿ ಕೆ.ಎ.ದಯಾನಂದ್
ಶಿವಮೊಗ್ಗ ನಗರದ ಕೆಲವೆಡೆ ಘನತ್ಯಾಜ್ಯ ವಿಲೇವಾರಿ ಸಮರ್ಪಕವಾಗಿ ನಡೆಯುತ್ತಿಲ್ಲವೆಂಬ ದೂರುಗಳು ಬಂದಿವೆ. ಈ ಕುರಿತಂತೆ ಪಾಲಿಕೆ ಆಯುಕ್ತರಿಗೆ ಸೂಚನೆ ನೀಡಲಾಗಿದೆ. ಘನತ್ಯಾಜ್ಯ ವಿಲೇವಾರಿಗೆ ಅಗತ್ಯ ಕ್ರಮಕೈಗೊಳ್ಳುವಂತೆ ತಿಳಿಸಲಾಗಿದೆ' ಎಂದು ಜಿಲ್ಲಾಧಿಕಾರಿ ಕೆ.ಎ.ದಯಾನಂದ್‍ರವರು ಶುಕ್ರವಾರ ತಮ್ಮನ್ನು ಸಂಪರ್ಕಿಸಿದ ಸುದ್ದಿಗಾರರಿಗೆ ಮಾಹಿತಿ ನೀಡಿದ್ದಾರೆ. 

ಮಿತಿಮೀರಿದ ಹಂದಿಗಳ ಉಪಟಳ
ಒಂದೆಡೆ ನಗರದಲ್ಲಿ ಘನತ್ಯಾಜ್ಯ ವಿಲೇವಾರಿ ಸಮರ್ಪಕವಾಗಿ ನಡೆಯದ ದೂರುಗಳ ನಡುವೆಯೇ, ಇನ್ನೊಂದೆಡೆ ಹಂದಿಗಳ ಹಾವಳಿಯು ವಿಪರೀತ ಮಟ್ಟಕ್ಕೆ ತಲುಪಿದೆ. ನಗರದ ಎಲ್ಲೆಂದರಲ್ಲಿ ಹಂದಿಗಳ ಹಿಂಡು ಕಂಡುಬರುತ್ತಿದೆ. ಕೆಲವೆಡೆ ರಸ್ತೆಗಳಲ್ಲಿ ಹಂದಿಗಳು ಅಡ್ಡ ಬಂದು, ದ್ವಿಚಕ್ರ ವಾಹನ ಸವಾರರು ಅಪಘಾತಕ್ಕೀಡಾಗುತ್ತಿದ್ದಾರೆ. ತಮ್ಮದಲ್ಲದ ತಪ್ಪಿಗೆ ಶಿಕ್ಷೆ ಅನುಭವಿಸುವಂತಾಗಿದೆ ಎಂದು ನಾಗರಿಕರು ದೂರುತ್ತಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News