ವಿವಿಪ್ಯಾಟ್ ಎಣಿಕೆ ಮತ್ತು ಸುಪ್ರೀಂ ಅವಿವೇಕ

Update: 2019-05-11 05:48 GMT

ಇವಿಎಂ ಮೆಷಿನ್‌ಗಳ ಬಗ್ಗೆ ಇರುವ ಅವಿಶ್ವಾಸವನ್ನು ಹೋಗಲಾಡಿಸುವ ಅಗತ್ಯವಿರುವುದರಿಂದಲೇ ವಿವಿಪ್ಯಾಟ್‌ಗಳ ಬಳಕೆ ಮಾಡಲಾಗುತ್ತಿದೆ. ವಿರೋಧ ಪಕ್ಷಗಳು ಸೋತಾಗ ಅಥವಾ ಸೋಲುವ ಭೀತಿ ಎದುರಾದಾಗ ಮಾತ್ರ ಇವಿಎಂ ಬಗೆಗಿನ ಅವಿಶ್ವಾಸವನ್ನು ಮುಂದು ಮಾಡುತ್ತಾರೆನ್ನುವುದು ಸಂಪೂರ್ಣ ಸುಳ್ಳಲ್ಲವಾದರೂ ಅವರು ಎತ್ತುತ್ತಿರುವ ಪ್ರಶ್ನೆಗಳು ಮತ್ತು ಅನುಮಾನಗಳು ಸುಳ್ಳಲ್ಲ. ಅವನ್ನು ಅನುಮಾನಕ್ಕೆ ಎಡೆಕೊದದಂತೆ ಬಗೆಹರಿಸಬೇಕಾದ ಕರ್ತವ್ಯ ಚುನಾವಣ ಆಯೋಗದ್ದು ಮತ್ತು ಹಾಗೆ ತಾಕೀತು ಮಾಡಬೇಕಾದ ಕರ್ತವ್ಯ ಸುಪ್ರೀಂ ಕೋರ್ಟಿನದ್ದು.


ಮೊದಲಿಗೆ ಒಂದನ್ನು ಸ್ಪಷ್ಟಪಡಿಸಿಕೊಳ್ಳೋಣ. ಸುಪ್ರೀಂ ಕೋರ್ಟು ಎಲ್ಲದರಲ್ಲೂ ಸುಪ್ರೀಂ ಏನಲ್ಲ. ಅದರ ಆದೇಶಗಳನ್ನು ಉಲ್ಲಂಘಿಸಬಾರದೇ ವಿನಃ ಅದರ ತೀರ್ಮಾನಗಳನ್ನು ವಿಮರ್ಶಿಸಬಾರದೆಂದಿಲ್ಲ. ಭಾರತದ ಸುಪ್ರೀಂ ಕೋರ್ಟಿಗೆ 50 ವರ್ಷ ತುಂಬಿದಾಗ ಹೊರತಂದ ಸ್ಮರಣ ಪುಸ್ತಕಕ್ಕೆ ಮುನ್ನುಡಿ ಬರೆದಿದ್ದ ಆಗಿನ ಮುಖ್ಯ ನ್ಯಾಯಮೂರ್ತಿ ಕಿರ್ಪಾಲ್ ಅವರು ''Supreme, But Not Infalliable''-‘‘ಸರ್ವೋಚ್ಚ, ಆದರೆ ದೋಷರಹಿತವೇನಲ್ಲ’’ ಎಂದೇ ಹೇಳಿದ್ದರು. ಹೀಗಾಗಿ ಸುಪ್ರೀಂ ಕೋರ್ಟು ಮತ್ತದರ ಆದೇಶಗಳು ಪ್ರಶ್ನಾತೀತವೂ ಅಲ್ಲ. ಪೀಠದಲ್ಲಿ ಕುಳಿತುಕೊಳ್ಳುವ ನ್ಯಾಯಾಧೀಶರು ತಪ್ಪುಗಳನ್ನೇ ಮಾಡದ ಮತ್ತು ಅತಿ ಮಾನವರೂ ಅಲ್ಲ. ಕೆಲವೊಮ್ಮೆ ಆ ಪೀಠದಲ್ಲಿ ಕುಳಿತವರು ತಮ್ಮ ಸ್ಥಾನವನ್ನು ದುರ್ಬಳಕೆ ಮಾಡಿಕೊಂಡು ಸಾಮಾನ್ಯ ಮನುಷ್ಯರೂ ಕೂಡಾ ಮಾಡಬಾರದ ತಪ್ಪುಗಳನ್ನು ಮಾಡಿರುವುದನ್ನು ಕೂಡಾ ನಾವು ನೋಡಿದ್ದೇವೆ ಮತ್ತು ನೋಡುತ್ತಿದ್ದೇವೆ. ಅಂತಹ ಪೀಠಸ್ಥ ತಪ್ಪಿತಸ್ಥರನ್ನು ಪ್ರಜಾತಾಂತ್ರಿಕ ಪ್ರಕ್ರಿಯೆಗಳ ಮೂಲಕ ಕೆಳಗಿಳಿಸಬಹುದಾದ ಅವಕಾಶವನ್ನೂ ಸಹ ನಮ್ಮ ಸಂವಿಧಾನ ನಮಗೆ ಒದಗಿಸಿದೆ.

ಆದ್ದರಿಂದ ಒಂದು ಪ್ರಜಾತಂತ್ರದಲ್ಲಿ ಪ್ರಜ್ಞಾವಂತ ಜನತೆ ಸುಪ್ರೀಂ ಕೋರ್ಟಿನ ತೀರ್ಮಾನಗಳು ಪ್ರಜಾತಂತ್ರದ ಆರೋಗ್ಯಕ್ಕೆ ಧಕ್ಕೆ ತರುವಂತಹ ಅತಾರ್ಕಿಕ ಮತ್ತು ಅವಿವೇಕದ ಆದೇಶಗಳನ್ನು ಕೊಟ್ಟಾಗ ಅದನ್ನು ಟೀಕಿಸುವುದು ಮತ್ತು ಮತ್ತೊಮ್ಮೆ ಹಾಗಾಗದಂತೆ ತಡೆಗಟ್ಟುವ ರೀತಿಯಲ್ಲಿ ಸಾರ್ವಜನಿಕ ಚರ್ಚೆ ಮಾಡುವುದು ಅತ್ಯಗತ್ಯ. ವಿಪರ್ಯಾಸವೆಂದರೆ ಶಬರಿಮಲೆಯಂತಹ ಪ್ರಕರಣಗಳಲ್ಲಿ ಸುಪ್ರೀಂ ಕೋರ್ಟಿನ ಆದೇಶಗಳು ತಮ್ಮ ಮೂಗಿನ ನೇರಕ್ಕೆ ಬರದಿದ್ದಾಗ ಅದನ್ನು ಬೇಕಾಬಿಟ್ಟಿಯಾಗಿ ಟೀಕಿಸಿದ್ದು ಮಾತ್ರವಲ್ಲದೆ ಅದನ್ನು ಜಾರಿಗೆ ತರದಂತೆ ದೇವಳದಲ್ಲಿ ಮತ್ತು ಬೀದಿಬೀದಿಗಳಲ್ಲಿ ಗೂಂಡಾಗಿರಿ ನಡೆಸಿದ ಸಂಘಪರಿವಾರದ ಪುಂಡುಪಡೆ ಮತ್ತು ಅವರನ್ನು ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಬೆಂಬಲಿಸಿದ ಶಾ ಮತ್ತು ಮೋದಿಯಂತಹ ಅತ್ಯುಚ್ಚ ನಾಯಕರು, ಈ ವಿಷಯದಲ್ಲಿ ಮಾತ್ರ ಸುಪ್ರೀಂ ಕೋರ್ಟಿನ ತೀರ್ಮಾನವನ್ನು ವಿಶ್ಲೇಷಿಸುವುದನ್ನೂ ಕೋರ್ಟಿಗೆ ಅವಮಾನವೆನ್ನುತ್ತಿದ್ದಾರೆ!

ಕಳೆದ ವಾರ 21 ವಿರೋಧಪಕ್ಷಗಳು ಶೇ.50ರಷ್ಟು ವಿವಿಪ್ಯಾಟ್ ಮತಸಂಗ್ರಹ ಎಣಿಕೆಯನ್ನು ಕೋರಿ ಸಲ್ಲಿಸಿದ್ದ ಮೇಲ್ಮನವಿಯನ್ನು ನಿರಾಕರಿಸುವುದರ ಮೂಲಕ ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಾಧೀಶರ ಪೀಠವೂ ಅಂಥಾ ಒಂದು ಅತಾರ್ಕಿಕ ಮತ್ತು ಅಪ್ರಜಾತಾಂತ್ರಿಕ ಆದೇಶವನ್ನು ನೀಡಿ ಚುನಾವಣೆಯ ವಿಶ್ವಾಸಾರ್ಹತೆಗೆ ಧಕ್ಕೆ ತಂದಿದೆ. ಇದು ಭಾರತದ ಚುನಾವಣಾ ಪ್ರಜಾತಂತ್ರದ ಮೇಲೆ ಗಂಭೀರವಾದ ಪರಿಣಾಮವನ್ನೇ ಬೀರಲಿದೆ. ವಾಸ್ತವವಾಗಿ ಭಾರತದ ಚುನಾವಣ ಪದ್ಧತಿಯ ಬಗ್ಗೆ ಕುಸಿಯುತ್ತಿದ್ದ ಜನರ ವಿಶ್ವಾಸವನ್ನು ಮರಳಿಗಳಿಸಲೆಂದೇ ಮತಪತ್ರಗಳ ಬದಲಿಗೆ ಇವಿಎಂ (ಎಲೆಕ್ಟ್ರಾನಿಕ್ ವೋಟಿಂಗ್ ಮೆಷಿನ್) ಬಳಕೆಯನ್ನು ಎರಡು ದಶಕಗಳ ಕೆಳಗೆ ಪ್ರಾರಂಭಿಸಲಾಯಿತು. ಇವಿಎಂಗಳ ವಿಶ್ವಾಸಾರ್ಹತೆಯ ಬಗ್ಗೆ ಗಂಭೀರವಾದ ಪ್ರಶ್ನೆ ಎದ್ದಾಗ ಸುಪ್ರೀಂ ಕೋರ್ಟೇ ವಿವಿಪ್ಯಾಟ್ ಜೋಡಿಸಲು ಆದೇಶಿಸಿತು. ಆದರೆ ಅದರ ಎಣಿಕೆಯನ್ನು ಇವಿಎಂನೊಂದಿಗೆ ತಾಳೆ ಮಾಡುವ ವಿಷಯದಲ್ಲಿ ಮಾತ್ರ ಸುಪ್ರೀಂ ಕೋರ್ಟು ಅತಾರ್ಕಿಕ ನಿಲುವನ್ನು ತಳೆಯುತ್ತಿದೆ. ತೀರ್ಮಾನವು ಭಾರತದ ಜನತೆ ಮತದಾನದ ಬಗ್ಗೆ ಕಳೆದುಕೊಂಡಿರುವ ರಾಜಕೀಯ ವಿಶ್ವಾಸವನ್ನು ತಂತ್ರಜ್ಞಾನದ ಮೂಲಕ ಪಡೆದುಕೊಳ್ಳುವ ಯತ್ನಕ್ಕೆ ಹಿನ್ನೆಡೆಯುಂಟು ಮಾಡಿದೆ.

ಆದರೆ ಭಾರತದ ಪ್ರಜಾತಂತ್ರ ಹಾಗೂ ಚುನಾವಣಾ ವ್ಯವಸ್ಥೆ ಕೆಟ್ಟಿರುವುದು ಕೇವಲ ಮತಗಟ್ಟೆಗಳಲ್ಲಿ ಮತ್ತು ಚುನಾವಣೆಯ ದಿನಗಳಲ್ಲಿ ಮಾತ್ರವಲ್ಲ. ಆಳಿದ ಐದೂ ವರ್ಷಗಳು ಜನವಿರೋಧಿಯಾಗಿ ಮತ್ತು ಉಳ್ಳವರ ಪರವಾಗಿ ಕೆಲಸ ಮಾಡುವ ರಾಜಕೀಯ ಪಕ್ಷಗಳು ಚುನಾವಣಾ ಸಂದರ್ಭದಲ್ಲಿ ಮಾತ್ರ ಸತ್ಯ ಹರಿಶ್ಚಂದ್ರನ ಮರಿಮಕ್ಕಳಂತೆ ಆಡತೊಡಗಿದರೆ ಯಾರಿಗೆ ನಂಬಿಕೆ ಬರುತ್ತದೆ? ಹಾಗೆಯೇ ಭಾರತೀಯ ಪ್ರಜಾತಂತ್ರದ ತಿರುಳನ್ನು ಕಾಪಾಡುವ ಹೊಣೆ ಹೊತ್ತಿರುವ ಸಾಂವಿಧಾನಿಕ ಸಂಸ್ಥೆಗಳು ದಿನೇದಿನೇ ಆಳುವ ಪಕ್ಷಗಳ ಬಾಲಂಗೋಚಿಗಳಂತೆ ವರ್ತಿಸುತ್ತಿರುವಾಗ ಅವುಗಳ ಬಗ್ಗೆಯೂ ಸಹಜವಾಗಿಯೇ ಜನರು ವಿಶ್ವಾಸ ಕಳೆದುಕೊಳ್ಳುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಹಲವು ಚುನಾವಣೆಗಳಲ್ಲಿ ಇವಿಎಂ ಮೆಷಿನ್‌ಗಳು ಕೈಕೊಡುವುದು, ಕೆಟ್ಟುನಿಲ್ಲುವುದು ಮತ್ತು ಅದು ಚುನಾವಣಾಧಿಕಾರಿಗಳ ಸುಪರ್ದಿಯಲ್ಲಿ ಮಾತ್ರವಲ್ಲದೆ ಖಾಸಗಿ ಹೊಟೇಲುಗಳಲ್ಲೂ ಪತ್ತೆಯಾಗಲು ಶುರುವಾದಂತೆ ಮತ್ತೆ ಅಣಕು ಚುನಾವಣೆಗಳಲ್ಲಿ ಯಾವುದೇ ಪಕ್ಷಕ್ಕೆ ಮತಹಾಕಿದರೂ ಅದು ಬಿಜೆಪಿಗೆ ಹೋದ ಉದಾಹರಣೆಗಳು ಮತ್ತು ಕೆಲವು ಕಡೆ ಮತಗಳೆಲ್ಲಾ ಕಾಂಗ್ರೆಸ್‌ಗೆ ಹೋದ ಉದಾಹರಣೆಗಳು ಕಾಣುತ್ತಿದ್ದಂತೆ ಜನರಿಗೆ ಮತ್ತು ವಿರೋಧ ಪಕ್ಷಗಳಿಗೆ ಇವಿಎಂ ಮೆಷಿನ್‌ನ ಬಗ್ಗೆಯೂ ಸಹಜ ಅನುಮಾನಗಳು ಹುಟ್ಟಿಕೊಂಡಿವೆ.

ಆದರೆ ಈ ಪಕ್ಷಗಳು ತಾವು ಗೆದ್ದಾಗ ಇವಿಎಂಗಳ ಬಗ್ಗೆ ಚಕಾರವೆತ್ತದೆ ಸೋತಾಗ ಮಾತ್ರ ಇವಿಎಂ ಮೇಲೆ ಆರೋಪ ಹೊರಿಸುವುದರಿಂದ ಆ ಪಕ್ಷಗಳ ಸಕಾರಣ ಅನುಮಾನಗಳೂ ಸಹ ಜನರ ಅನುಕಂಪವನ್ನು ಗಳಿಸಿಕೊಡುವಲ್ಲಿ ಹೆಚ್ಚು ಯಶಸ್ವಿಯಾಗಿಲ್ಲ. ಹಾಗೆ ನೋಡಿದರೆ ಈ ಅವಕಾಶವಾದಕ್ಕೆ ಮೇಲ್ಪಂಕ್ತಿ ಹಾಕಿದ್ದೇ ಬಿಜೆಪಿ ಪಕ್ಷ. 2009ರ ಚುನಾವಣೆಯಲ್ಲಿ ಗೆದ್ದೇ ಬಿಡುವ ಭರವಸೆಯಲ್ಲಿ ಬೀಗುತ್ತಿದ್ದ ಬಿಜೆಪಿ 2004ರ ಚುನಾವಣೆಗಿಂದ ಕಡಿಮೆ ವೋಟು ಮತ್ತು ಕಡಿಮೆ ಸೀಟುಗಳನ್ನು ಪಡೆದುಕೊಂಡು ಹೀನಾಯವಾಗಿ ಸೋತಾಗ ಅದರ ಬಗ್ಗೆ ರಾಜಕೀಯವಾಗಿ ಆತ್ಮಾವಲೋಕನ ಮಾಡಿಕೊಳ್ಳದೆ ಇವಿಎಂ ಮೆಷಿನ್‌ಗಳ ದುರ್ಬಳಕೆಯಾಗಿದೆಯೆಂಬ ಹುಯಿಲೆಬ್ಬಿಸಿತು. ಬಿಜೆಪಿ ವಕ್ತಾರ ಸುಬ್ರಮಣಿಯನ್ ಸ್ವಾಮಿ ಇದರ ಬಗ್ಗೆ 2013ರಲ್ಲಿ ಸುಪ್ರೀಂಕೋರ್ಟಿನಲ್ಲಿ ದಾವೆಯೊಂದನ್ನು ಹೂಡಿದರು. ಮತದಾರರು ಇವಿಎಂನಲ್ಲಿ ಹಾಕುವ ಮತಗಳು ಆ ಪಕ್ಷಕ್ಕೆ ಹೋಗಿದೆಯೇ ಎಂದು ಖಾತರಿ ಪಡಿಸಿಕೊಳ್ಳುವ ವ್ಯವಸ್ಥೆ ಇಲ್ಲದಿರುವುದರಿಂದ ಇವಿಎಂ ಜೊತೆಗೆ ಮತದಾರರು ತಮ್ಮ ಮತಚಲಾವಣೆ ಸರಿಯಾಗಿದೆಯೆಂದು ಖಾತರಿಗೊಳಿಸಿಕೊಳ್ಳುವ ವೋಟರ್ ವೆರಿಫೈಯಬಲ್ ಪೇಪರ್ ಆಡಿಟ್ ಟ್ರಯಲ್ (ವಿವಿಪ್ಯಾಟ್) ಯಂತ್ರವನ್ನೂ ಅಳವಡಿಸಬೇಕೆಂದು ಅದರಲ್ಲಿ ವಾದಿಸಲಾಗಿತ್ತು. ದಾವೆಯನ್ನು ಅಂದು ವಿಚಾರಣೆ ಮಾಡಿದ್ದ ಸುಪ್ರೀಂ ಕೋರ್ಟಿನ ದ್ವಿಸದಸ್ಯ ಪೀಠದಲ್ಲಿ ಇಂದು ಮುಖ್ಯ ನ್ಯಾಯಧೀಶರಾಗಿದ್ದ ರಂಜನ್ ಗೊಗೊಯಿ ಕೂಡಾ ಒಬ್ಬರಾಗಿದ್ದರು. ಪ್ರಕರಣದ ಬಗ್ಗೆ ಅತ್ಯಂತ ಮಹತ್ವದ ತೀರ್ಪನ್ನು ಕೊಟ್ಟ ದ್ವಿಸದಸ್ಯ ಪೀಠವು ವಿವಿಪ್ಯಾಟ್ ಅಳವಡಿಸುವುದನ್ನು ಕಡ್ಡಾಯ ಮಾಡಿತು. ಅದಕ್ಕೆ ಕಾರಣಗಳನ್ನು ನೀಡುತ್ತಾ:

‘‘ಪ್ರಜಾತಂತ್ರದಲ್ಲಿ ಜನರು ತಮ್ಮ ಪ್ರತಿನಿಧಿಯನ್ನು ಆಯ್ಕೆ ಮಾಡಿಕೊಳ್ಳುವ ಪ್ರಕ್ರಿಯೆ ಅತ್ಯಂತ ಮಹತ್ವದಾದದ್ದು. ಈ ಚುನಾವಣಾ ಪ್ರಕ್ರಿಯೆಯ ಬಗ್ಗೆ ಜನರಲ್ಲಿ ಮತ್ತು ರಾಜಕೀಯ ಪಕ್ಷಗಳಲ್ಲಿ ವಿಶ್ವಾಸಾರ್ಹತೆ ಮೂಡುವುದು ಚುನಾವಣೆಯ ಅತ್ಯಂತ ಮಹತ್ವದ ಪ್ರಕ್ರಿಯೆಯಾಗಿದೆ. ಮತ್ತು ಅದು ನಿರ್ಭೀತ ಮತ್ತು ನ್ಯಾಯೋಚಿತ ಮತದಾನದ ವಿಸ್ತೃತ ಭಾಗವೂ ಆಗಿದೆ. ಆದ್ದರಿಂದಲೇ ಅದು ಭಾರತದ ಸಂವಿಧಾನದ ಮೂಲರಚನೆಯ ಭಾಗವೂ ಆಗಿದೆ’’ ಎಂದು ವ್ಯಾಖ್ಯಾನ ಮಾಡಿತು. ಈಗಿರುವಂತೆ ಭಾರತದ ಸಂವಿಧಾನದ ಪ್ರಕಾರ ಯಾವುದನ್ನು ಸಂವಿಧಾನದ ಮೂಲ ರಚನೆಯೆಂದು ಘೋಷಿಸಲಾಗುತ್ತದೆಯೋ ಅವುಗಳು ಪ್ರಜೆಗಳ ಮೂಲಭೂತ ಹಕ್ಕುಗಳಾಗಿದ್ದು ಅವುಗಳನ್ನು ತುರ್ತುಸ್ಥಿತಿಯಲ್ಲಿ ಬಿಟ್ಟರೆ ಮಿಕ್ಕಂತೆ ಸಂಸತ್ತಾಗಲೀ ಅಥವಾ ಸುಪ್ರೀಂಕೋರ್ಟಾಗಲೀ ಜನರಿಂದ ಆ ಹಕ್ಕುಗಳನ್ನು ಕಿತ್ತುಕೊಳ್ಳಲು ಸಾಧ್ಯವಿಲ್ಲ. ಇದೇ ಬಗೆಯ ವ್ಯಾಖ್ಯಾನವನ್ನು ಸುಪ್ರೀಂಕೋರ್ಟಿನ ಪೂರ್ಣಪೀಠ 1978ರಲ್ಲಿ ಇಂದಿರಾ ಗಾಂಧಿ ಮತ್ತು ರಾಜ್‌ನಾರಾಯಣ್ ನಡುವಿನ ಪ್ರಕರಣದಲ್ಲಿ ಸಹ ಮಾಡಿತ್ತು.

ಹೀಗಾಗಿ ಒಂದರ್ಥದಲ್ಲಿ ವಿಶ್ವಾಸಾರ್ಹತೆಯುಳ್ಳ ಚುನಾವಣಾ ಪ್ರಕ್ರಿಯೆಗಳು ಭಾರತದ ಮತದಾರರ ಮೂಲಭೂತ ಹಕ್ಕೇ ಆಗಿಬಿಟ್ಟಿವೆ ಎಂದೇ ಹೇಳಬಹುದು. ಅದರ ಬಗ್ಗೆ ಕಿಂಚಿತ್ತೂ ರಾಜಿಯಾಗದಂತೆ ವ್ಯವಹರಿಸಬೇಕಿರುವುದು ಸರಕಾರ, ಚುನಾವಣಾ ಆಯೋಗಗಳ ಕರ್ತವ್ಯ ಮಾತ್ರವಲ್ಲ, ಸುಪ್ರೀಂ ಕೋರ್ಟಿನ ಕರ್ತವ್ಯವೂ ಆಗಿರುತ್ತದೆ. ಸುಪ್ರೀಂ ಕೋರ್ಟಿನ 2013ರ ಆದೇಶದಂತೆ 2014ರ ಚುನಾವಣೆಗಳಿಂದಲೇ ಹಂತಹಂತವಾಗಿ ಇವಿಎಂ ಮೆಷಿನ್‌ಗಳ ಜೊತೆ ವಿವಿಪ್ಯಾಟ್ ಮೆಷಿನನ್ನೂ ಲಗತ್ತಿಸಲು ಪ್ರಾರಂಭವಾಗಿ ಈಗ ದೇಶಾದ್ಯಂತ ಲೋಕಸಭಾ ಚುನಾವಣೆಯಲ್ಲಿ ಬಳಸಲಾಗುತ್ತಿರುವ 10 ಲಕ್ಷ ಇವಿಎಂ ಮೆಷಿನ್‌ಗಳಿಗೂ 10 ಲಕ್ಷ ವಿವಿಪ್ಯಾಟ್ ಮೆಷಿನ್‌ಗಳನ್ನೂ ಲಗತ್ತಿಸಲಾಗುತ್ತಿದೆ.

ಈಗಾಗಲೆ ದೇಶದ ಮತದಾರರಿಗೆಲ್ಲ ಪರಿಚಿತವಾಗಿರುವಂತೆ ಇವಿಎಂ ಮೆಷಿನ್‌ನಲ್ಲಿ ಮತದಾರ ತನ್ನ ಆಯ್ಕೆಯ ಪಕ್ಷಕ್ಕೆ ಮತವನ್ನು ಹಾಕುತ್ತಿದ್ದಂತೆ ವಿವಿಪ್ಯಾಟ್ ಮೆಷಿನ್‌ನಲ್ಲಿ ಏಳು ಸೆಕೆಂಡುಗಳ ಕಾಲ ಯಾರಿಗೆ ಮತಹಾಕಲಾಗಿದೆಯೆಂದು ತೋರಿಸುವುದಲ್ಲದೆ ಆ ಮತವನ್ನು ಹೊತ್ತ ಕಾಗದದ ತುಂಡು ಪೆಟ್ಟಿಗೆಯೊಳಗೆ ಬಿದ್ದು ಸಂಗ್ರಹವಾಗುತ್ತದೆ. ಚುನಾವಣಾ ಕಾಯ್ದೆಯ 58ನೇ ಸೆಕ್ಷನ್ ಪ್ರಕಾರ ಮತಗಣನೆ ನಡೆಯುವಾಗ ಇವಿಎಂ ಮೆಷಿನ್ ತೋರಿಸುವ ಸಂಖ್ಯೆಯ ಬಗ್ಗೆ ಯಾವುದಾದರೂ ಪಕ್ಷದ ಏಜೆಂಟಿಗೆ ಅನುಮಾನ ಬಂದರೆ ಅವರು ಚುನಾವಣಾಧಿಕಾರಿಗೆ ಲಿಖಿತ ಮನವಿ ಕೊಟ್ಟು ಆ ನಿರ್ದಿಷ್ಟ ಇವಿಎಂ ಮೆಷಿನ್‌ಗೆ ಲಗತ್ತಿಸಲಾದ ವಿವಿಪ್ಯಾಟ್ ಮತಚೀಟಿ ಸಂಗ್ರಹದ ಜೊತೆ ತಾಳೆ ಮಾಡಲು ಕೋರಬಹುದು. ಹಾಗೊಮ್ಮೆ ಇವಿಎಂ ಮೆಷಿನ್ ಮತ್ತು ವಿವಿಪ್ಯಾಟ್ ತಾಳೆ ಮಾಡಿದಾಗ ವ್ಯತ್ಯಾಸಗಳು ಕಂಡುಬಂದರೆ ವಿವಿಪ್ಯಾಟ್‌ನಲ್ಲಿ ಸಂಗ್ರಹವಾದ ಮತಗಳ ಲೆಕ್ಕವೇ ಅಂತಿಮವಾಗುತ್ತದೆ. ಇವಿಎಂ ಮೆಷಿನ್‌ನ ಲೆಕ್ಕಾಚಾರವಲ್ಲ. ಆದರೆ ಸೂಕ್ತ ಕಾರಣವನ್ನು ಕೊಟ್ಟು ವಿವಿಪ್ಯಾಟ್ ಎಣಿಕೆಯ ಬಗ್ಗೆ ಪಕ್ಷಗಳ ಮನವಿಯನ್ನು ಪುರಸ್ಕರಿಸುವ ಅಥವಾ ತಿರಸ್ಕರಿಸುವ ಅಂತಿಮ ಅಧಿಕಾರ ಸಂಬಂಧಪಟ್ಟ ಚುನಾವಣಾಧಿಕಾರಿಯದ್ದಾಗಿರುತ್ತದೆ. ಹೀಗಾಗಿ ವಿವಿಪ್ಯಾಟ್ ಗಣನೆಯ ಅವಕಾಶ ಇದ್ದೂ ಇಲ್ಲದಂತಾಗಿದೆ.

ಅದೇ ಸಮಯದಲ್ಲಿ 2014ರ ನಂತರ ನಡೆದ ಹಲವಾರು ಚುನಾವಣೆಗಳಲ್ಲಿ ಆಳುವ ಪಕ್ಷಗಳ ಪರವಾಗಿಯೇ ಅನಿರೀಕ್ಷಿತವಾದ ಫಲಿತಾಂಶಗಳು ಅಥವಾ ಅನಿರೀಕ್ಷಿತ ಪ್ರಮಾಣದ ಮತಗಳು ಚಲಾವಣೆಯಾಗಿರುವ, ಇವಿಎಂಗಳು ಎರ್ರಾಬಿರ್ರಿಯಾಗಿ ವರ್ತಿಸುವ, ಬಳಕೆಯಾಗದ ಇವಿಎಂ ಮೆಷಿನ್‌ಗಳು ಖಾಸಗಿ ಹೋಟೆಲುಗಳಲ್ಲಿ ಅಥವಾ ಬೀದಿಗಳಲ್ಲಿ ಪತ್ತೆಯಾಗುವ ಘಟನೆಗಳು ನಡೆಯಲಾರಂಭಿಸಿತು. ಇವೆಲ್ಲದರ ಹಿನ್ನೆಲೆಯಲ್ಲಿ ಇವಿಎಂ ಮೆಷಿನ್‌ನ ಬಗ್ಗೆ ರಾಜಕಿಯ ಪಕ್ಷಗಳಲ್ಲಿ ಮತ್ತು ಮತದಾರರಲ್ಲಿ ಮತ್ತೆ ಅನುಮಾನ ದಟ್ಟವಾಗಲಾರಂಭಿಸಿತು.

 ಇದಲ್ಲದೆ ಜಗತ್ತಿನ ಇತರೆಡೆ ಬಳಸುತ್ತಿದ್ದ ಇವಿಎಂ ಮೆಷಿನ್‌ಗಳನ್ನು ಉತ್ಪಾದನಾ ಹಂತದಲ್ಲಿ, ವಿತರಣಾ ಹಂತದಲ್ಲಿ ಹಾಗೂ ಸಂಗ್ರಹದ ಹಂತದಲ್ಲಿ ತಂತ್ರಾಂಶಗಳ ಬದಲಾವಣೆ ಮತು ಹಾರ್ಡ್‌ವೇರ್‌ಗಳ ಬದಲಾವಣೆ ಅಥವಾ ಇಡಿಯಾಗಿ ಮೆಷಿನ್‌ಗಳನ್ನೇ ಬದಲಾವಣೆ ಮಾಡುವ ಮೂಲಕ ಇವಿಎಂಗಳನ್ನು ತಾಂತ್ರಿಕ ರಿಗ್ಗಿಂಗ್ ಮಾಡುವ ಅವಕಾಶಗಳಿವೆ ಎಂಬ ಮಾಹಿತಿಗಳು ಒಳಹರಿಯಲಾರಂಭಿಸಿತು. ಉತ್ಪಾದನಾ ಹಂತದಲ್ಲಿ ಮೊದಲೇ ಬೇಕಾದಂತೆ ಪ್ರೋಗ್ರಾಮಿಂಗ್ ಮಾಡುವ ಮೂಲಕ ಅಥವಾ ಮರುಬಳಕೆ ಮಾಡುವ ಚಿಪ್ಪನ್ನು ಬಳಸುವ ಮೂಲಕ, ಯಂತ್ರಗಳ ವಿತರಣಾ ಹಂತದಲ್ಲಿ ನಿರ್ದಿಷ್ಟ ಮಾರ್ಕಿನ ಇವಿಎಂ ಮೆಷಿನ್‌ಗಳೇ ನಿರ್ದಿಷ್ಟ ಕ್ಷೇತ್ರಗಳಿಗೆ ಹೋಗುವಂತೆ ಮಾಡುವ ಮೂಲಕ ಹಾಗೂ ಅಂತಿಮವಾಗಿ ಇವಿಎಂಗಳನ್ನು ಸಂಗ್ರಹಿಸಿಟ್ಟುಕೊಳ್ಳುವ ಸ್ಟ್ರಾಂಗ್‌ರೂಮಿನಲ್ಲಿ ಒಂದರ ಬದಲಿಗೆ ಮತ್ತೊಂದು ಇವಿಎಂ ಅನ್ನು ಬದಲಾಯಿಸಿಬಿಡುವಂತಹ ಸಾಧ್ಯತೆಗಳಿವೆ ಎಂಬುದು ಆ ಅನುಮಾನಗಳ ಸಾರಾಂಶ.

ಆದರೆ ಭಾರತದಲ್ಲಿ 2010ರಿಂದಲೂ ಈ ಬಗೆಯ ಸಾಧ್ಯತೆಗಳಿಗೆ ಕಡಿವಾಣ ಹಾಕುವಂತಹ ಹಲವು ಕ್ರಮಗಳನ್ನು ತೆಗೆದುಕೊಳ್ಳುತ್ತಾ ಬರಲಾಗುತ್ತಿದೆ. ನಮ್ಮ ಇವಿಎಂ ಮೆಷಿನ್‌ಗಳಲ್ಲಿ ಆಪರೇಟಿಂಗ್ ಸಿಸ್ಟಮ್ ಇಲ್ಲ. ಇವಿಎಂ ಮೆಷಿನ್‌ಗಳನ್ನು ಇಂಟರ್‌ನೆಟ್, ಬ್ಲೂ ಟೂಥ್ ಅಥವಾ ಇನ್ಯಾವುದೇ ತಾಂತ್ರಿಕತೆಯ ಮೂಲಕ ಇವಿಎಂ ಅನ್ನು ಹೊರಗಡೆಯಿಂದ ಆಪರೇಟ್ ಮಾಡಲು ಬರುವುದಿಲ್ಲ. ಇವಿಎಂನಲ್ಲಿ ಒಮ್ಮೆ ಬಳಸಿದ ಚಿಪ್ಪನ್ನು ಮರುಬಳಕೆ ಮಾಡಲಾಗುವುದಿಲ್ಲ. ವಿತರಣೆ ಮತ್ತು ಸಂಗ್ರಹಗಳೆಲ್ಲವನ್ನೂ ಎಲ್ಲಾ ರಾಜಕೀಯ ಪಕ್ಷಗಳ ಏಜೆಂಟರ ಸಮಕ್ಷಮದಲ್ಲೇ ಮಾಡಲಾಗುತ್ತದೆ. ಮತದಾನದ ನಂತರ ಇವಿಎಂ ಸಂಗ್ರಹಿಸಿಡಲಾದ ಸ್ಟ್ರಾಂಗ್ ರೂಮಿನಲ್ಲಿ ಸರಿಯಾದ ಎಚ್ಚರಿಕೆ ಪಾಲಿಸಲಾಗಿದೆಯೇ ಎಂಬುದನ್ನು ಎಲ್ಲಾ ರಾಜಕೀಯ ಪಕ್ಷಗಳ ಏಜೆಂಟರು ಕಾಲಕಾಲಕ್ಕೆ ತಪಾಸಣೆ ನಡೆಸಬಹುದಾಗಿದೆ ಮತ್ತು ಎಣಿಕೆ ಪ್ರಾರಂಭವಾಗುವಾಗ ಸೀಲ್ ಸರಿಯಾಗಿದೆಯೇ ಎಂದು ಎಲ್ಲರ ಮುಂದೆ ಪರೀಕ್ಷಿಸಿಯೇ ಒಡೆಯುವ ಪದ್ಧತಿಗಳನ್ನು ಅನುಸರಿಸಲಾಗುತ್ತಿದೆ.

 ಇವೆಲ್ಲವೂ ಸ್ವಾಗತಾರ್ಹ ಕ್ರಮಗಳೇ ಅದರೂ ಇವುಗಳು ತಾಂತ್ರಿಕ ರಿಗ್ಗಿಂಗ್ ಅನ್ನು ಪೂರ್ಣವಾಗಿ ತಡೆಗಟ್ಟಬಹುದೆಂಬ ವಿಶ್ವಾಸವನ್ನು ಹುಟ್ಟಿಸುತ್ತಿಲ್ಲ. ಅದಕ್ಕೆ ಚುನಾವಣಾ ಆಯೋಗದ ಮತ್ತು ಆಳುವ ಸರಕಾರದ ಹಲವಾರು ರಹಸ್ಯ ಮತ್ತು ನಿಗೂಢ ನಡೆಗಳೇ ಕಾರಣ.

ಅಂತಹ ನಿಗೂಢ ನಡೆಗಳ ಸಾಲಿಗೆ ಇತ್ತೀಚೆಗೆ ಆರ್‌ಟಿಐ ಕಾರ್ಯಕರ್ತರೊಬ್ಬರು ಬೆಳಕಿಗೆ ತಂದಿರುವ ಸ್ಫೋಟಕ ಮಾಹಿತಿಯೂ ಸೇರಿಕೊಂಡು ಸಂದರ್ಭವನ್ನು ಮತ್ತಷ್ಟು ಅನುಮಾನಾಸ್ಪದಗೊಳಿಸಿದೆ. ಮನೋರಂಜನ್ ರಾಯ್ ಎಂಬ ಆರ್‌ಟಿಐ ಕಾರ್ಯಕರ್ತರು ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯ ಮೂಲಕ ಬಯಲಿಗೆ ತಂದಿರುವ ಆ ಸ್ಫೋಟಕ ಸತ್ಯವೇನೆಂದರೆ ಚುನಾವಣಾ ಆಯೋಗಕ್ಕೆ ಬೆಂಗಳೂರಿನ ಬಿಇಎಲ್ ಮತ್ತು ಹೈದರಾಬಾದಿನ ಇಸಿಐಎಲ್ ಸಂಸ್ಥೆ ಸರಬರಾಜು ಮಾಡಿರುವ 20 ಲಕ್ಷಕ್ಕೂ ಹೆಚ್ಚು ಇವಿಎಂ ಮೆಷಿನ್‌ಗಳಲ್ಲಿ 10 ಲಕ್ಷ ಮೆಷಿನ್‌ಗಳು ಚುನಾವಣಾ ಆಯೋಗಕ್ಕೆ ತಲುಪೇ ಇಲ್ಲ. ಇದುವರೆಗೂ ಪುಸ್ತಕಗಳ ಲೆಕ್ಕಾಚಾರಗಳಲ್ಲೂ ಅವುಗಳ ಪತ್ತೆಯಾಗಿಲ್ಲ. ಆದರೆ ಚುನಾವಣಾ ಆಯೋಗ 20 ಲಕ್ಷ ಮೆಷಿನ್‌ಗಳಿಗೆ 115 ಕೋಟಿ ರೂ. ಪಾವತಿಯನ್ನೂ ಮಾಡಿಯಾಗಿದೆ. ಆದರೂ ಅದರ ಸಂಗ್ರಹದಲ್ಲಿ 20 ಲಕ್ಷ ಮೆಷಿನ್‌ಗಳಿಲ್ಲ. ಇದರ ಬಗ್ಗೆ ಕೋರ್ಟಿನಲ್ಲೂ ಸಹ ಚುನಾವಣಾ ಆಯೋಗ ಸರಿಯಾದ ಉತ್ತರವನ್ನು ನೀಡಿಲ್ಲ. ಎಲ್ಲಾ ಬೆಳವಣಿಗೆಗಳು ಜನತೆಯಲ್ಲಿ ಮತ್ತು ವಿರೋಧ ಪಕ್ಷಗಳಲ್ಲಿ ಇವಿಎಂ ಮೆಷಿನ್‌ಗಳ ವಿಶ್ವಾಸಾರ್ಹತೆಯ ಬಗ್ಗೆ ಸಕಾರಣವಾದ ಅನುಮಾನಗಳನ್ನು ಹುಟ್ಟುಹಾಕಿದೆ. ಚುನಾವಣಾ ಆಯೋಗವೂ ಅನುಮಾನಗಳನ್ನು ನಿವಾರಿಸುವ ಧೋರಣೆಗಿಂತ ಸವಾಲೆಸೆಯುವ ಧೋರಣೆಯನ್ನು ತಳೆದಿದೆ.

ಈ ಕಾರಣಗಳಿಂದ ಇವಿಎಂ ಮೆಷಿನ್‌ಗಳಿಗಿಂತ ಜನರ ವೋಟುಗಳನ್ನು ಮತಪತ್ರದ ರೂಪದಲ್ಲಿ ದಾಖಲಿಸಿಡುವ ವಿವಿಪ್ಯಾಟ್‌ಗಳೇ ಹೆಚ್ಚಿನ ವಿಶ್ವಾಸಾರ್ಹತೆಯನ್ನು ಪಡೆದುಕೊಳ್ಳುತ್ತಿದೆ.

ಜನರು ಇವಿಎಂನಲ್ಲಿ ಹಾಕಿರುವ ಎಲ್ಲ ವೋಟುಗಳಲ್ಲದಿದ್ದರೂ ಕನಿಷ್ಟ ಅರ್ಧದಷ್ಟು ವೋಟುಗಳಾದರೂ ವಿವಿಪ್ಯಾಟ್‌ನಲ್ಲಿ ಸಂಗ್ರಹವಾದ ಮತಪತ್ರಗಳೊಂದಿಗೆ ತಾಳೆಯಾದರೆ ಆಗ ವಿಶ್ವಾಸ ಮೂಡುತ್ತದೆಂಬುದು ವಿರೋಧ ಪಕ್ಷಗಳು ತಾರ್ಕಿಕವಾದ ಮತ್ತು ಸಕಾರಣವಾದ ಆಗ್ರಹವನ್ನು ಮುಂದಿಟ್ಟಿದ್ದವು. ಆದರೆ ಚುನಾವಣಾ ಆಯೋಗವು ಒಂದು ಲೋಕಸಭಾ ಕ್ಷೇತ್ರದಲ್ಲಿ ಬರುವ ಅಂದಾಜು ಎಂಟು ಅಸೆಂಬ್ಲಿ ವಿಭಾಗದಲ್ಲಿ ತಲಾ ಒಂದು ಮೆಷಿನ್‌ಗಳ ವೋಟುಗಳನ್ನು ಮಾತ್ರ ಆಯಾ ವಿವಿಪ್ಯಾಟ್ ಸಂಗ್ರಹದೊಂದಿಗೆ ತಾಳೆ ಮಾಡಲಾಗುವುದೆಂದು ತೀರ್ಮಾನ ಮಾಡಿತು.

ಇಂದು ದೇಶಾದ್ಯಂತ 10 ಲಕ್ಷ ಇವಿಎಂ ಮೆಷಿನ್‌ಗಳನ್ನು ಬಳಸಲಾಗುತ್ತಿದೆ. ಆಯೋಗದ ತೀರ್ಮಾನದ ಪ್ರಕಾರ ಆಗ 10 ಲಕ್ಷ ಯಂತ್ರಗಳಲ್ಲಿ 4,000 ಇವಿಎಂಗಳು ಅಂದರೆ ಶೇ.0.4ರಷ್ಟು ಮೆಷಿನ್‌ಗಳನ್ನು ಮಾತ್ರ ವಿವಿಪ್ಯಾಟ್‌ಗಳೊಂದಿಗೆ ಹೋಲಿಸಲಾಗುವುದೆಂದಾಯಿತು. ಇದಕ್ಕೆ ಅದು ಒದಗಿಸಿದ ತರ್ಕ ಗಣಿತಾತ್ಮಕವಾಗಿಯೂ ಮತ್ತು ಪ್ರಾಯೋಗಿಕವಾಗಿಯೂ ವಿಶ್ವಾಸ ಮೂಡಿಸುವಂತಿರಲಿಲ್ಲ. ಆದ್ದರಿಂದಲೇ 21 ವಿರೋಧ ಪಕ್ಷಗಳು ಸುಪ್ರೀಂಕೋರ್ಟಿಗೆ ಮನವಿಯೊಂದನ್ನು ಸಲ್ಲಿಸಿ ಇದು ಚುನಾವಣಾ ಪ್ರಕ್ರಿಯೆಗಳ ಬಗೆಗಿನ ವಿಶ್ವಾಸಾರ್ಹತೆಯ ಪ್ರಶ್ನೆಯಾಗಿರುವುದರಿಂದ ಶೇ.50ರಷ್ಟು ಮತಗಳನ್ನು ವಿವಿಪ್ಯಾಟ್‌ನೊಂದಿಗೆ ತಾಳೆ ಮಾಡಬೇಕೆಂದು ಆಗ್ರಹಿಸಿದವು. ಪ್ರಾರಂಭದಲ್ಲಿ ಇದನ್ನು ಪುರಸ್ಕರಿಸಿದ ಸುಪ್ರೀಂ ಕೋರ್ಟು ಚುನಾವಣೆಯ ವಿಶ್ವಾಸಾರ್ಹತೆಯ ವಿಷಯದಲ್ಲಿ ರಾಜಿ ಸಾಧ್ಯವೇ ಇಲ್ಲವೆಂದು ಭರವಸೆ ನೀಡಿ ಚುನಾವಣಾ ಆಯೋಗಕ್ಕೆ ನೋಟಿಸು ನೀಡಿತು. ಆದರೆ ಆ ವೇಳೆಗೆ ಚುನಾವಣಾ ಆಯೋಗವು ಭಾರತದ ಅಂಕಿಅಂಶ ಸಂಸ್ಥೆ (ಇಂಡಿಯನ್ ಸ್ಟಾಟಿಸ್ಟಿಕಲ್ ಇನ್‌ಸ್ಟಿಟ್ಯೂಟ್)ಯಿಂದ ಹಲವಾರು ವೈವಿಧ್ಯವುಳ್ಳ ಭಾರತದ ಲೋಕಸಭಾ ಕ್ಷೇತ್ರಗಳಲ್ಲಿ ಏಕಪ್ರಕಾರವಾಗಿ ಕೇವಲ ಶೇ.0.4ರಷ್ಟು ಸ್ಯಾಂಪಲ್ ತಾಳೆ ಮಾಡಿದರೂ ಶೇ.99ರಷ್ಟು ಖಚಿತತೆ ದೊರೆಯುತ್ತದೆಂದು ರಾಜಕೀಯ ಲೋಕವಿರಲಿ ಗಣಿತಲೋಕವೂ ದಿಗ್ಭ್ರಾಂತಗೊಂಡಂತಹ ವರದಿಯನ್ನು ಕೋರ್ಟಿಗೆ ಸಲ್ಲಿಸಿತು. ಅಷ್ಟು ಮಾತ್ರವಲ್ಲದೆ ಶೇ.50ರಷ್ಟು ವಿವಿಪ್ಯಾಟ್ ತಾಳೆ ಮಾಡಿದರೆ ಫಲಿತಾಂಶ ಘೋಷಿಸುವುದು ಆರು ದಿನಗಳಷ್ಟು ತಡವಾಗುತ್ತದೆಂಬ ಬೇಜವಾಬ್ದಾರಿ ಸಬೂಬು ನೀಡಿತು.

ಹೀಗಾಗಿ ಸುಪ್ರೀಂ ಕೋರ್ಟಿನ ಮುಂದಿದ್ದದ್ದು ಶೇ.0.4ರಷ್ಟು ವಿವಿಪ್ಯಾಟ್ ತಾಳೆ ಮಾಡಿದರೆ ಶೇ.99ರಷ್ಟು ಖಚಿತತೆ ಸಿಗುತ್ತದೆ ಎಂದು ಇಂಡಿಯನ್ ಸ್ಟಾಟಿಸ್ಟಿಕಲ್ ಇನ್‌ಸ್ಟಿಟ್ಯೂಟ್ ಹೇಳಿದ ಗಣಿತ ವಿಜ್ಞಾನವನ್ನು ಒಪ್ಪಿಕೊಳ್ಳುವುದು ಅಥವಾ ವಿರೋಧ ಪಕ್ಷಗಳ ಸಲಹೆಯಂತೆ ಶೇ.50ರಷ್ಟು ವಿವಿಪ್ಯಾಟ್ ತಾಳೆಯಾದಾಗ ವಿಶ್ವಾಸಾರ್ಹತೆ ಮೂಡುತ್ತದೆ ಎಂಬ ರಾಜಕೀಯ ವಿಜ್ಞಾನವನ್ನು ಒಪ್ಪಿಕೊಳ್ಳುವುದು. ಹಾಗೆ ನೋಡಿದರೆ ಪ್ರಜಾತಂತ್ರ ಮತ್ತು ಚುನಾವಣೆಯ ವಿಷಯಗಳಲ್ಲಿ ವಿಶ್ವಾಸಾರ್ಹತೆಯೇ ವಿಜ್ಞಾನವೂ ಕೂಡಾ ಆಗಿರುತ್ತದೆ. ಸುಪ್ರೀಂ ಕೋರ್ಟು ತನ್ನ ಆದೇಶಕ್ಕೆ ಮೇಲಿನ ಎರಡರಲ್ಲಿ ಯಾವುದಾದರೂ ಒಂದನ್ನು ಆಧರಿಸಿದ್ದರೂ, ಅದು, ಸರಿಯೋ-ತಪ್ಪೋ, ಒಟ್ಟಿನಲ್ಲಿ ತಾರ್ಕಿಕವಾಗಿಯಾದರೂ ಇರುತ್ತಿತ್ತು. ಅದರೆ ಸುಪ್ರೀಂಕೋರ್ಟು ಅವೆರಡನ್ನೂ ಮಾಡಲಿಲ್ಲ. ಬದಲಿಗೆ 10 ಲಕ್ಷ ಮೆಷಿನ್‌ಗಳಲ್ಲಿ ಚುನಾವಣಾ ಆಯೋಗ ಹೇಳಿದಂತೆ ಶೇ.0.4ರಷ್ಟು ಮೆಷಿನ್‌ಗಳ ಬದಲಿಗೆ ಶೇ.2ರಷ್ಟು ಮೆಷಿನ್‌ಗಳ ವೋಟುಗಳನ್ನು ವ�

Writer - ಶಿವಸುಂದರ್

contributor

Editor - ಶಿವಸುಂದರ್

contributor

Similar News