ಬ್ಲಾಕ್ ಸ್ಪಾಟ್‍ಗಳಲ್ಲಿ ಅಪಘಾತ ನಿಯಂತ್ರಣಕ್ಕೆ ಅಗತ್ಯ ಮಾರ್ಪಾಡು: ಚಿಕ್ಕಮಗಳೂರು ಎಸ್ಪಿ ಹರೀಶ್ ಪಾಂಡೆ

Update: 2019-05-11 11:50 GMT

ಚಿಕ್ಕಮಗಳೂರು, ಮೇ 11: ಜಿಲ್ಲಾದ್ಯಂತ 48 ಅಪಘಾತ ಸ್ಥಳ (ಬ್ಲಾಕ್‍ಸ್ಪಾಟ್)ಗಳನ್ನು ಗುರುತಿಸಲಾಗಿದ್ದು, ಇಂತಹ ಅಪಾಘಾತ ಸ್ಥಳ, ರಸ್ತೆಗಳಲ್ಲಿ ಅಗತ್ಯ ಸಂಚಾರಿ ಪರಿಕರಗಳ ಜೋಡಣೆ ಅಥವಾ ರಸ್ತೆಯನ್ನೇ ಮಾರ್ಪಾಡು ಮಾಡುವ ಮೂಲಕ ಅಪಘಾತಗಳ ನಿಯಂತ್ರಣಕ್ಕೆ ಸೂಕ್ತ ಕ್ರಮಕೈಗಳ್ಳಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರೀಶ್ ಪಾಂಡೆ ತಿಳಿಸಿದ್ದಾರೆ.

ಶನಿವಾರ ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಿಕ್ಕಮಗಳೂರು ನಗರದಲ್ಲಿ ಸಂಚಾರಿ ವ್ಯವಸ್ಥೆ ಬಗ್ಗೆ ಸಾಕಷ್ಟು ದೂರುಗಳು ಬಂದಿದ್ದವು. ಈ ಕಾರಣಕ್ಕೆ ಜಿಲ್ಲಾ ಅಪರಾಧ ಮತ್ತು ಟ್ರಾಫಿಕ್ ವ್ಯವಸ್ಥೆಯ ನೋಡಲ್ ಅಧಿಕಾರಿಯಾಗಿರುವ ಎಎಸ್ಪಿ ಶೃತಿ ಅವರು ನಗರದ ಟ್ರಾಫಿಕ್ ಸಮಸ್ಯೆಗಳು ಹಾಗೂ ಜಿಲ್ಲಾದ್ಯಂತ ಇರುವ ಟ್ರಾಫಿಕ್ ಸಮಸ್ಯೆ ಮತ್ತು ಅಪಾಘಾತ ಸ್ಥಳಗಳ ಬಗ್ಗೆ ಪಟ್ಟಿ ಸಿದ್ಧಪಡಿಸಿದ್ದಾರೆ. ಅದರಂತೆ ಜಿಲ್ಲಾದ್ಯಂತ 48 ಅಪಘಾತ ಸ್ಥಳಗಳನ್ನು ಗುರುತಿಸಲಾಗಿದ್ದು, ಚಿಕ್ಕಮಗಳೂರು ನಗರ ಸೇರಿದಂತೆ ತಾಲೂಕು ವ್ಯಾಪ್ತಿಯಲ್ಲಿ 17 ಅಪಘಾತ ಸ್ಥಳಗಳನ್ನು ಗುರುತಿಸಲಾಗಿದೆ. ಶೃಂಗೇರಿ ಪಟ್ಟಣದಲ್ಲಿ 1, ತರೀಕೆರೆ ತಾಲೂಕಿನಲ್ಲಿ 5, ಅಜ್ಜಂಪುರ ತಾಲೂಕು ವ್ಯಾಪ್ತಿಯಲ್ಲಿ 3, ಬೀರೂರು ಹೋಬಳಿ ವ್ಯಾಪ್ತಿಯಲ್ಲಿ 7, ಕಡೂರು ತಾಲೂಕಿನಲ್ಲಿ 12 ಹಾಗೂ ಸಖರಾಯಪಟ್ಟಣ ಹೋಬಳಿ ವ್ಯಾಪ್ತಿಯಲ್ಲಿ 2 ಅಪಘಾತ ಸ್ಥಳಗಳನ್ನು ಗುರುತಿಸಲಾಗಿದೆ ಎಂದರು.

ಜಿಲ್ಲಾದ್ಯಂತ ಇರುವ 48 ಅಪಘಾತ ಸ್ಥಳಗಳಲ್ಲಿ ಈ ಹಿಂದೆ ನಡೆದ ವಾಹನ ಅಪಘಾತಗಳಲ್ಲಿ 3ರಿಂದ 5 ಪ್ರಯಾಣಿಕರು ಸಾವನ್ನಪ್ಪಿದ್ದಾರೆ. ಇಂತಹ ಸ್ಥಳಗಳಲ್ಲಿ ಪದೇ ಪದೇ ಅಪಗಾತಗಳು ನಡೆಯುತ್ತಿವೆ. ಈ ಕಾರಣಕ್ಕೆ ಇವುಗಳನ್ನು ಬ್ಲಾಕ್ ಸ್ಪಾಟ್‍ಗಳೆಂದು ಪಿಡ್ಬ್ಲೂಡಿ, ಆರ್‍ಟಿಒ, ಪೊಲೀಸ್ ಹಾಗೂ ಎನ್‍ಎಚ್ ಇಂಜಿನಿಯರನ್ನೊಳಗೊಂಡ ಅಧಿಕಾರಿಗಳ ತಂಡ ಗುರುತಿಸಿದೆ. ಇಂತಹ ಬ್ಲಾಕ್ ಸ್ಟಾಟ್‍ಗಳಲ್ಲಿ ಅಪಘಾತಕ್ಕೆ ಕಾರಣ ಏನೆಂಬುದರ ಬಗ್ಗೆ ಈ ತಂಡ ಮಾಹಿತಿ ಕಲೆ ಹಾಕಿದೆ. ಅದರಂತೆ ಬ್ಲಾಕ್ ಸ್ಟಾಟ್‍ಗಳಲ್ಲಿ ಅಗತ್ಯವಿರುವ ಸಂಚಾರ ಪರಿಕರಗಳ ಅಳವಡಿಕೆ, ಸೋಲಾರ್ ಲ್ಯಾಂಪ್, ರಸ್ತೆ ವಿಭಜಕ, ನಾಮಫಲಕ, ರಿಪ್ಲೆಕ್ಟರ್, ಹಂಪ್ಸ್ ಗಳು, ತಡೆಗೋಡೆಗಳು ಮತ್ತಿತರ ಅಗತ್ಯ ಸಂಚಾರಿ ಪರಿಕರಗಳನ್ನು ಅಳವಡಿಸಲಾಗುವುದು. ಅಗತ್ಯವಿದ್ದಲ್ಲಿ ರಸ್ತೆಯನ್ನೇ ಮಾರ್ಪಾಡು, ದುರಸ್ತಿ ಮಾಡಲಾಗುವುದು ಎಂದ ಅವರು, ಇದಕ್ಕಾಗಿ ಅಗತ್ಯವಿರುವ ಅನುದಾನಕ್ಕಾಗಿ ಸಂಬಂಧಿಸಿದ ಇಲಾಖೆಗೆ ಪ್ರಸ್ತಾವ ಕಳುಹಿಸಲಾಗಿದೆ. ಅನುದಾನ ಬಿಡುಗಡೆಯಾದ ಕೂಡಲೇ ಕೆಲಸ ಆರಂಭವಾಗಲಿದೆ. ಇದರಿಂದಾಗಿ ಶೇ.30-40ರಷ್ಟು ಅಪಘಾತ ಪ್ರಕರಣಗಳು ಕಡಿಮೆಯಾಗಲಿವೆ ಎಂದರು.

ಚಿಕ್ಕಮಗಳೂರು ನಗರದಲ್ಲಿ ಸಂಚಾರಿ ವ್ಯವಸ್ಥೆ ಬಗ್ಗೆ ದೂರುಗಳಿವೆ. ಈ ಸಂಬಂಧ ಕೆಲ ಸಂಚಾರಿ ಮಾರ್ಪಾಡುಗಳನ್ನು ಮಾಡಲಾಗಿದೆ. ನಗರದಲ್ಲಿರುವ ಟ್ರಾಫಿಕ್ಸ್ ಸಿಗ್ನಲ್‍ಗಳಲ್ಲಿ ಕೆಟ್ಟಿದ್ದ ಪರಿಕರಗಳನ್ನು ಬದಲಾಯಿಸಲಾಗುತ್ತಿದ್ದು, ಶೇ.90ರಷ್ಟು ಕೆಲಸ ಪೂರ್ಣಗೊಂಡಿದೆ ಎಂದ ಎಸ್ಪಿ ಹರಿಶ್ ಪಾಂಡೆ, ನಗರದ ಆಜಾದ್ ಪಾರ್ಕ್‍ನಲ್ಲೂ ಟ್ರಾಫಿಕ್ ಸಿಗ್ನಲ್ ಅಳವಡಿಕೆಗೆ ಅಂದಾಜು ಸಿದ್ಧಪಡಿಸಲಾಗಿದೆ. ನಗರದ ಎನ್‍ಎಂಸಿ ಸರ್ಕಲ್ ಹಾಗೂ ಶೃಂಗಾರ್ ವೃತ್ತಗಳಲ್ಲಿ ರಸ್ತೆ ಬದಿಗಳಲ್ಲಿ 100 ಮೀಟರ್ ವರೆಗೆ ನಾಲ್ಕು ಚಕ್ರಗಳ ವಾಹನ ನಿಲುಗಡೆಯನ್ನು ನಿಷೇಧಿಸಲಾಗಿದೆ. ಈ ಕ್ರಮದಿಂದಾಗಿ ಈ ವೃತ್ತಗಳಲ್ಲಿದ್ದ ಟ್ರಾಫಿಕ್ ಜಾಮ್ ಸಮಸ್ಯೆ ನಿವಾರಣೆಯಾಗಿದೆ. ಉಪ್ಪಳ್ಳಿ, ಬದ್ರಿಯಾ ರಸ್ತೆಗಳಲ್ಲಿ ಈ ಹಿಂದೆ ಅಡ್ಡಾದಿಡ್ಡಿ ವಾಹನಗಳ ನಿಲುಗಡೆಯಿಂದಾಗಿ ಸುಗಮ ಸಂಚಾರಕ್ಕೆ ತೊಂದರೆಯಾಗಿತ್ತು. ಈ ರಸ್ತೆಗಳಲ್ಲಿ ಸದ್ಯ ವಾಹನ ನಿಲುಗಡೆಯನ್ನು ತೆರವುಗೊಳಿಸಲಾಗಿದ್ದು, ಸದ್ಯ ವಾಹನಗಳ ಸುಗಮ ಸಂಚಾರ ಸಾಧ್ಯವಾಗಿದೆ. ಇಂತಹ ಕ್ರಮಗಳನ್ನು ಹಂತಹಂತವಾಗಿ ನಗರದಾದ್ಯಂತ ವಿಸ್ತರಿಸಲಾಗುವುದು ಎಂದರು.

ಬಾಬಾ ಬುಡನ್‍ಗಿರಿ, ಮುಳ್ಳಯ್ಯನಗಿರಿಗೆ ಬರುವ ದೂರದ ಪ್ರವಾಸಿಗರನ್ನು ಸ್ಥಳೀಯ ಜೀಪ್ ಮಾಲಕರು ಮನಬಂದಂತೆ ಬಾಡಿಗೆ ಪಡೆಯುತ್ತ ಸುಲಿಗೆ ಮಾಡುತ್ತಿದ್ದಾರೆಂಬ ದೂರು ಬಂದಿದೆ. ಈ ಬಗ್ಗೆ ಕ್ರಮಕೈಗೊಳ್ಳಲಾಗಿದೆಯಾದರೂ ಸುಲಿಗೆ ಮುಂದುವರಿದಿದೆ ಎಂಬ ದೂರುಗಳಿವೆ ಈ ನಿಟ್ಟಿನಲ್ಲಿ ಪ್ರವಾಸೋದ್ಯಮ ಸಮಿತಿ ಸಭೆ ನಡೆಸಿ ಅಗತ್ಯ ಕ್ರಮಕೈಗೊಳ್ಳಲಾಗುವುದು ಎಂದರು.

ದನಗಳ್ಳತನ ಮಾಡುತ್ತಿದ್ದ ಒಂದು ತಂಡವನ್ನು ಈಗಾಗಲೇ ಜೈಲಿಗೆ ಕಳಿಸಲಾಗಿದೆ. ಅವರಿನ್ನೂ ಜೈಲಿನಲ್ಲೇ ಇದ್ದಾರೆ. ಇದೀಗ ಮತ್ತೊಂದು ಗುಂಪು ಈ ಕೃತ್ಯದಲ್ಲಿ ಭಾಗಿಯಾಗಿರುವ ಶಂಕೆ ಇದೆ. ಸವಿನಂದನ್ ಎಂಬಾತನ ತಂಡ ಈ ಕೃತ್ಯವನ್ನು ಮಲೆನಾಡು ಭಾಗದಲ್ಲಿ ಮಾಡುತ್ತಿರುವ ಬಗ್ಗೆ ಶಂಕೆ ಇದೆ. ದನಗಳ್ಳತನ ಪ್ರಕರಣಗಳ ಪತ್ತೆಗೆ ಪೊಲೀಸರ ತಂಡವೊಂದು ಕಾರ್ಯನಿರ್ವಹಿಸುತ್ತಿದೆ ಎಂದು ಹರೀಶ್ ಪಾಂಡೆ ಇದೇ ವೇಳೆ ತಿಳಿಸಿದರು.

ಸರಕು ಸಾಗಣೆ ಪಿಕ್‍ಅಪ್ ವಾಹನಗಳಲ್ಲಿ ಪ್ರಯಾಣಿಕರ ಸಾಗಣೆ ಬಗ್ಗೆ ವಾಹನಗಳ ಮಾಲಕರು, ಚಾಲಕರಿಗೆ ತಿಳಿ ಹೇಳಿ ಎಚ್ಚರಿಕೆ ನೀಡಲಾಗಿದೆ. ಕೂಲಿ ಕಾರ್ಮಿಕರನ್ನು ಟ್ರ್ಯಾಕ್ಟರ್, ಟ್ರಕ್, ಲಾರಿ, ಗೂಡ್ಸ್‍ಗಳಲ್ಲಿ ಕಾಫಿ, ತೋಟ, ಎಸ್ಟೇಟ್‍ಗಳಿಗೆ ಸಾಗಣೆ ಮಾಡುತ್ತಿರುವ ಬಗ್ಗೆ ಎಸ್ಟೆಟ್ ಮಾಲಕರು, ಮ್ಯಾನೇಜರ್ ಗಳ ಸಭೆ ನಡೆಸಿ ತಿಳುವಳಿಕೆ ಹೇಳಲಾಗಿದೆ. ಇದನ್ನು ಮೀರಿದರೆ ಕಾನೂನು ಕ್ರಮಕೈಗೊಳ್ಳಲಾಗುವುದು ಎಂದರು.

ನಗರದ ಕೆಲ ಶಾಲಾ ಕಾಲೇಜುಗಳ ಸಮೀಪದ ರಸ್ತೆಗಳಲ್ಲಿ ಪರವಾನಿಗೆ ಇಲ್ಲದ ಯುವಕರು ದ್ವಿಚಕ್ರ ವಾಹನಗಳನ್ನು ಅಡ್ಡಾದಿಡ್ಡಿ ಓಡಿಸುತ್ತಿದ್ದಾರೆಂಬ ದೂರುಗಳಿವೆ. ಈ ಸಂಬಂಧ ಶಾಲಾ ಕಾಲೇಜುಗಳ ಮುಖ್ಯಸ್ಥರ ಸಭೆ ನಡೆಸಿ, ಇಂತಹ ಯುವಕರು ಕಂಡುಬಂದಲ್ಲಿ ದೂರು ನೀಡುವಂತೆ ಸೂಚಿಸಲಾಗಿದೆ. ಶಾಲಾ ಮಕ್ಕಳ ಹಿತದೃಷ್ಟಿಯಿಂದ ಶಾಲಾ ವಾಹನಗಳಲ್ಲಿ ಅಗತ್ಯಕ್ಕಿಂತ ಹೆಚ್ಚು ಮಕ್ಕಳ ಸಾಗಣೆ, ಹಳೇ ವಾಹನಗಳ ಬಳಕೆ, ಪರವಾನಿಗೆ ಇಲ್ಲದ ಹಾಗೂ ಹೆಚ್ಚು ಅಪಘಾತ ಪ್ರಕರಣಗಳು ದಾಖಲಾಗಿರುವ ಚಾಲಕರ ನೇಮಕ ಮಾಡಿಕೊಂಡಿರುವ ಶಾಲಾ ಕಾಲೇಜುಗಳ ಪ್ರಾಂಶುಪಾಲರಿಗೆ ಕ್ರಮಕ್ಕೆ ಸೂಚನೆ ನೀಡಲಾಗಿದೆ.

- ಹರೀಶ್ ಪಾಂಡೆ, ಎಸ್ಪಿ

(ಪೈಲ್ 3ನಲ್ಲಿರುವ ಎಸ್ಪಿ ಸುದ್ದಿಗೆ ಬಾಕ್ಸ್ ಮಾಡಿಕೊಳ್ಳಿ)

ಎಲ್ಲೆಲ್ಲಿ ಬ್ಲಾಕ್ ಸ್ಪಾಟ್‍ಗಳು ?

ಚಿಕ್ಕಮಗಳೂರು: ನಗರದ ಹೌಸಿಂಗ್‍ಬೋರ್ಡ್‍ನ ಹೋಲಿಕ್ರಾಸ್ ಆಸ್ಪತ್ರೆ ವೃತ್ತ, ಐಡಿಎಸ್‍ಜಿ ಕಾಲೇಜ್ ಮತ್ತು ಎಐಟಿ ವೃತ್ತ, ಎಪಿಎಂಸಿ ಮತ್ತು ಸಂತಜೋಸೇಫ್‍ರ ಪ್ರೌಢಶಾಲೆ ವೃತ್ತ, ದಂಟರಮಕ್ಕಿಕೆರೆ ಮತ್ತು ತೋಟಗಾರಿಕಾ ಇಲಾಖೆ ವೃತ್ತ, ಟೆಂಡರ್ ಚಿಕನ್ ಮತ್ತು ದಂಟರಮಕ್ಕಿ ಕೆರೆ ಏರಿ ಪ್ರವೇಶಿಸುವ ವೃತ್ತ, ನಾಗಲಕ್ಷ್ಮೀ ಚಿತ್ರಮಂದಿರ ಮತ್ತು ಶ್ಯಾಮನೂರು ಬಂಕ್ ವೃತ್ತ, ಮಥಾಯಸ್‍ ಟವರ್ ಮತ್ತು ತೊಗರಿಹಂಕಲ್ ವೃತ್ತ, ಅನ್ನಪೂರ್ಣ ಆಸ್ಪತ್ರೆ ಮತ್ತು ಬೋಳರಾಮೇಶ್ವರ ದೇವಾಲಯ ವೃತ್ತ, ಕೆ.ಎಸ್.ಆರ್.ಟಿ.ಸಿ ವೃತ್ತ ಮತ್ತು ಕಾಫಿ ಡೇ ವೃತ್ತ, ಜೂನಿಯರ್ ಕಾಲೇಜ್ ಸ್ಪೆನ್ಸರ್ ರೋಡ್ ವೃತ್ತ, ಹೊಂಡಾ ಶೋ ರೂಮ್ ಮತ್ತು ಕೋಟೆಕೆರೆ ವೃತ್ತ, ಆಂಜನೇಯ ಸರ್ವಿಸ್ ಸ್ಟೇಷನ್ ಮತ್ತು ರೈಲ್ವೇ ಸ್ಟೇಷನ್ ತಿರುವು, ಪೈಛತ್ರ ಮತ್ತು ಹಿರೇಮಗಳೂರು ವೃತ್ತ, ಹಾಲೇನಹಳ್ಳಿ ಮತ್ತು ಮೌಂಟನ್‍ವ್ಯೂ ಶಾಲೆ ವೃತ್ತ, ಗಾಲ್ಪ್ ಕ್ಲಬ್ ಮತ್ತು ಅಲ್ಲಂಪುರ ವೃತ್ತ, ಲಕ್ಷ್ಮೀಪುರ ತಿರುವು, ಮಾಗಡಿಕೆರೆ ಏರಿ ಪ್ರದೇಶ.

ಶೃಂಗೇರಿ: ಪಟ್ಟಣದ ಶ್ರೀಮಠ ಮತ್ತು ಕುರುಬಗೆರೆ ತಿರುವು ರಸ್ತೆ

ತರೀಕೆರೆ: ಪಟ್ಟಣದ ತಾಲೂಕು ಕಚೇರಿಮತ್ತು ಎಸ್‍ಡಿಪಿಓ ತಿರುವು, ಎಪಿಎಂಸಿ ಆವರಣ ಮತ್ತು ಭಾರತ್ ಟಾಕೀಸ್ ವೃತ್ತ, ಅಲಂಕಾರ್ ಹೋಟೇಲ್ ಮತ್ತು ಭುವನ ಹೋಟೇಲ್ ವೃತ್ತ, ವಿಐಎಲ್ ಪ್ಯಾಕ್ಟರಿ ಮತ್ತು ಹಳಿಯೂರು ಗೇಟ್ ವೃತ್ತ, ಗೇರಮರಡಿ ಮತ್ತು ಅಜ್ಜಂಪುರ ತಿರುವು, ಎಂಸಿ ಹಳ್ಳಿ ರಸ್ತೆ

ಅಜ್ಜಂಪುರ: ಅಜ್ಜಂಪುರ ವ್ಯಾಪ್ತಿಯ ಎಪಿಎಂಸಿ ಮತ್ತು ಎಂ.ಜಿ ಸರ್ಕಲ್, ಕಾಟನಗೆರೆ ಗೇಟ್, ತಮಟದಳ್ಳಿ ಗೇಟ್

ಬೀರೂರು: ಬೀರೂರು ವ್ಯಾಪ್ತಿಯ ಕೋರನಹಳ್ಳಿ ಮತ್ತು ಚಟ್ನಹಳ್ಳಿ ಸರ್ಕಲ್, ಸಿದ್ದರಾಮೇಶ್ವರ ದೇವಸ್ಥಾನ ಮತ್ತು ಶಿವಪುರ ಗೇಟ್, ಕುಡ್ಲೂರು ಮತ್ತು ಪುಂಡನಹಳ್ಳಿ ವೃತ್ತ, 2ನೇ ರೈಲ್ವೇ ಗೇಟ್ ಮತ್ತು ಜೋಡಿ ತಿಮ್ಮಾಪುರ, ರೈಲ್ವೇ ಗೇಟ್ ಮತ್ತು ಗಾಳಿಹಳ್ಳಿ ತಿರುವು, ಕೋಡಿಹಳ್ಳಿ ತಿರುವು ಮತ್ತು ಎಂ.ಜಿ ವೃತ್ತ, ಬ್ರೈಟ್‍ಪ್ಯೂಚರ್ ಶಾಲೆ ಮತ್ತು ಮಿಲ್ಕ್ ಡೈರಿ ವೃತ್ತ.

ಕಡೂರು: ಕಡೂರಿನ ಕೆಎಲ್‍ವಿ ಸರ್ಕಲ್ ಮತ್ತು ಚೆಕ್ ಪೋಸ್ಟ್ ವೃತ್ತ, ಅನ್ನಪೂರ್ಣ ಲಾಡ್ಜ್ ಮತ್ತು ಮಸಾಲಡಾಬಾ ವೃತ್ತ, ತಂಗಲಿ ತಿರುವು ಮತ್ತು ಪ್ರಜ್ಞಾ ಶಾಲೆ, ಗೆದ್ಲೆಹಳ್ಳಿ ತಿರುವು ಮತ್ತು ವಿಶ್ವವಿದ್ಯಾಲಯ ವೃತ್ತ, ಮತ್ತಿಗಟ್ಟ ಮುಖ್ಯರಸ್ತೆ, ಕುಪ್ಪಾಳು ಮುಖ್ಯ ರಸ್ತೆ, ಮೂರಾರ್ಜಿ ಶಾಲೆ ಮತ್ತು ಬಾಬಾ ಎಸ್ಟೇಟ್, ತುರುವನಹಳ್ಳಿ ತಿರುವು ಮತ್ತು ವಿಜಯಲಕ್ಷ್ಮೀ ಟಾಕೀಸ್, ಸಿಗೇಹಡ್ಲು ಮತ್ತು ಮಲ್ಲಿದೇವಿಹಳ್ಳಿ ರಸ್ತೆ, ಯುಬಿ ರಸ್ತೆ, ಕನಕ ವೃತ್ತ ಮತ್ತು ಚಿಕ್ಕಪಟ್ಟಣಗೆರೆ ರಸ್ತೆ, ಕಂಸಾಗರ ಗೇಟ್ ಮತ್ತು ಸರಸ್ವತಿಪುರ ವೃತ್ತ.

ಸಖರಾಯಪಟ್ಟಣ: ಸಖರಾಯಪಟ್ಟಣಣದ ಕುಶಾಲ್‍ಗೌಡರ ಜಮೀನು ಮತ್ತು ಲ್ಯಾಂಡ್ ಮತ್ತು ಕಲ್ಮರುಡೇಶ್ವರ್ ದೇವಾಲಯದ ಪ್ರವೇಶ ದ್ವಾರ, ಹೊಸೂರು ಗ್ರಾಮ ಮತ್ತು ಆಂಜನೇಯ ದೇವಾಲಯ ರಸ್ತೆಗಳನ್ನು ಅಪಘಾತ ಪ್ರದೇಶಗಳೆಂದು ಗುರುತಿಸಲಾಗಿದೆ ಎಂದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News