ರಾಜ್ಯ ಉಪ ಚುನಾವಣೆ: ತಾರಕಕ್ಕೇರಿದ ಪ್ರಚಾರದ ಭರಾಟೆ

Update: 2019-05-11 12:46 GMT

ಬೆಂಗಳೂರು, ಮೇ 11: ಕುಂದಗೋಳ, ಚಿಂಚೋಳಿ ಕ್ಷೇತ್ರಗಳ ಉಪ ಚುನಾವಣೆ (ಮೇ 19)ಗೆ ಕೇವಲ ಏಳು ದಿನ ಬಾಕಿಯಿದ್ದು, ಎರಡೂ ಕ್ಷೇತ್ರಗಳ ಗೆಲುವಿಗಾಗಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಹಾಗೂ ವಿಪಕ್ಷ ಬಿಜೆಪಿ ಮುಖಂಡರು ಭರ್ಜರಿ ಬೆವರು ಹರಿಸುತ್ತಿದ್ದಾರೆ.

ಈ ಮಧ್ಯೆ ‘ಮುಖ್ಯಮಂತ್ರಿ’ ಹುದ್ದೆಯ ಕನವರಿಕೆಯಲ್ಲೆ ರಾಜಕೀಯ ಪಕ್ಷಗಳ ಮುಖಂಡರು ಉಪ ಚುನಾವಣೆ ನಡೆಯಲಿರುವ ಎರಡೂ ಕ್ಷೇತ್ರಗಳಲ್ಲಿ ಪ್ರಚಾರ ಕೈಗೊಂಡಿದ್ದಾರೆ. ಆದರೆ, ಕ್ಷೇತ್ರಗಳಲ್ಲಿನ ಜನರ ಸಮಸ್ಯೆಗಳು ಹಾಗೂ ಅಭಿವೃದ್ಧಿಯ ಬಗ್ಗೆ ಮಾತನಾಡುವ ಬದಲಿಗೆ ನಾಯಕರು ಪರಸ್ಪರ ಆರೋಪ-ಪ್ರತ್ಯಾರೋಪದಲ್ಲೆ ಮುಳುಗಿದ್ದಾರೆ.

‘ಸಿದ್ದರಾಮಯ್ಯ ಮತ್ತೊಮ್ಮೆ ಮುಖ್ಯಮಂತ್ರಿ ಆಗಬೇಕು’ ಎಂದು ಕಾಂಗ್ರೆಸಿನ ಕೆಲ ಸಚಿವರು, ಶಾಸಕರು ಪ್ರತಿಪಾದಿಸುತ್ತಿದ್ದಾರೆ. ಈ ಮಧ್ಯೆ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಸೇರಿ ಇನ್ನಿತರ ಮುಖಂಡರು ‘ಮೇ 23ರ ನಂತರ ಮೈತ್ರಿ ಸರಕಾರ ಪತನಗೊಳ್ಳಲಿದೆ’ ಎಂಬ ಹೇಳಿಕೆ ನೀಡುವ ಮೂಲಕ ಅವರೂ ಮುಖ್ಯಮಂತ್ರಿ ಹುದ್ದೆ ಕನವರಿಕೆಯಲ್ಲಿದ್ದಾರೆ.

ಮತ್ತೊಂದು ಕಡೆ ಯಾವುದೇ ಕಾರಣಕ್ಕೂ ರಾಜ್ಯದಲ್ಲಿನ ಮೈತ್ರಿ ಸರಕಾರ ಪತನಗೊಳ್ಳಲು ಸಾಧ್ಯವಿಲ್ಲ. ಈ ಸರಕಾರ ಇನ್ನೂ ನಾಲ್ಕು ವರ್ಷ ಸುಭದ್ರವಾಗಿರಲಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಮೈತ್ರಿ ಮುಖಂಡರು ಪ್ರತಿಪಾದಿಸುತ್ತಿದ್ದಾರೆ.

ನಿನ್ನೆಯಷ್ಟೇ ‘ಕಾಂಗ್ರೆಸಿನ 20 ಶಾಸಕರಿಗೆ ಈ ಸರಕಾರದ ಬಗ್ಗೆ ಅತೃಪ್ತಿ ಇದ್ದು, ಯಾವಾಗ ಏನೂ ಬೇಕಾದರೂ ಆಗಬಹುದು’ ಎಂದಿದ್ದ ಯಡಿಯೂರಪ್ಪ, ಇಂದು ನಾನು ಹಾಗೇ ಹೇಳಿಯೇ ಇಲ್ಲ. ಕಾಂಗ್ರೆಸ್-ಜೆಡಿಎಸ್ ಶಾಸಕರಿಗೆ ಸರಕಾರದ ಬಗ್ಗೆ ಅಸಮಾಧಾನವಿದೆ ಎಂದಷ್ಟೇ ಹೇಳಿದ್ದೆ ಎಂದು ಸಮಜಾಯಿಷಿ ನೀಡುವ ಪ್ರಯತ್ನ ಮಾಡಿದ್ದಾರೆ.

ಯಾವುದೇ ರಾಜಕೀಯ ಹೇಳಿಕೆಗಳಿಗೆ ತಕ್ಷಣವೇ ಪ್ರತಿಕ್ರಿಯೆ ನೀಡುತ್ತಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿ ವಿಶ್ರಾಂತಿ ನೆಪದಲ್ಲಿ ಕೊಡಗು ಜಿಲ್ಲೆ ಮಡಿಕೇರಿಯ ರೆಸಾರ್ಟ್‌ಗೆ ತೆರಳಿದ್ದು, ಲೋಕಸಭೆ ಚುನಾವಣೆ ಫಲಿತಾಂಶದ ಸೋಲು-ಗೆಲುವಿನ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ.

‘ದುಡ್ಡು ಕೊಟ್ಟು ಶಾಸಕರನ್ನು ಖರೀದಿಸಿ, ಮೈತ್ರಿ ಸರಕಾರವನ್ನು ಬೀಳಿಸುವುದು ವಿರೋಧ ಪಕ್ಷದ ಕೆಲಸವೇ? ಯಡಿಯೂರಪ್ಪಗೆ ಸರಕಾರ ರಚನೆಗೆ ರಾಜ್ಯಪಾಲರು ಅವಕಾಶ ಮಾಡಿಕೊಟ್ಟಿದ್ದರು. ಆದರೆ, ಸಂಖ್ಯಾಬಲ ತೋರಿಸಲು ಬಿಎಸ್‌ವೈಗೆ ಆಗಲಿಲ್ಲ. ಹೀಗಾಗಿ ಹತಾಶರಾಗಿ ಮನಸೋ ಇಚ್ಛೆ ಮಾತನಾಡುತ್ತಿದ್ದಾರೆ’

-ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News