ಬಿಜೆಪಿ ಶಾಸಕನ ಜೊತೆ 1 ತಿಂಗಳು ಮುಂಬೈನಲ್ಲಿ ಇದ್ದದ್ದು ಸುಳ್ಳೇ: ಜಾಧವ್ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ

Update: 2019-05-11 14:17 GMT

ಕಲಬುರ್ಗಿ, ಮೇ 11: ‘ಹಣ ಪಡೆದು ಬಿಜೆಪಿ ಸೇರ್ಪಡೆಯಾಗಿಲ್ಲ, ಸ್ವಾಭಿಮಾನಕ್ಕೆ ಧಕ್ಕೆ ಆಗಿದ್ದಕ್ಕೆ ಕಾಂಗ್ರೆಸ್ ತೊರೆದೆ’ ಎನ್ನುವ ಉಮೇಶ್ ಜಾಧವ್, ಮಲ್ಲೇಶ್ವರಂ ಕ್ಷೇತ್ರದ ಬಿಜೆಪಿ ಶಾಸಕ ಡಾ.ಅಶ್ವಥ್‌ನಾರಾಯಣ್ ಜೊತೆ 1 ತಿಂಗಳು ಮುಂಬೈನಲ್ಲಿ ಇದ್ದದ್ದು ಸುಳ್ಳೇ ? ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಶನಿವಾರ ಚಿಂಚೋಳಿ ಕ್ಷೇತ್ರದ ಅರಣಕಲ್ ಗ್ರಾಮದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸುಭಾಷ್ ರಾಠೋಡ್ ಪರ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಬಿಜೆಪಿಯವರು ಶಾಸಕರಿಗೆ 25ರಿಂದ 30ಕೋಟಿ ರೂ. ಆಮಿಷವೊಡ್ಡಿದ್ದರು. ಆದರೆ, ಖರ್ಗೆ ವಿರುದ್ಧ ಕಲಬುರಗಿ ಕ್ಷೇತ್ರದಲ್ಲಿ ಸ್ಪರ್ಧಿಸುವ ಕಾರಣ ಜಾಧವ್‌ 50 ಕೋಟಿ ರೂ.ಪಡೆದಿದ್ದಾರೆಂದು ಕ್ಷೇತ್ರದ ಜನತೆ ಮಾತನಾಡಿಕೊಳ್ಳುತ್ತಿದ್ದಾರೆಂದು ಟೀಕಿಸಿದರು.

ಮಲ್ಲಿಕಾರ್ಜುನ ಖರ್ಗೆ ಅವರಿಗೆ ಪುತ್ರನ ಮೇಲೆ ವ್ಯಾಮೋಹ. ಹೀಗಾಗಿ ಅವರಿಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದ್ದಾರೆಂಬ ಜಾಧವ್ ಆರೋಪ ಮಾಡುತ್ತಿದ್ದಾರೆ. ಆದರೆ, ಈಗ ಜಾಧವ್ ತಮ್ಮ ಪುತ್ರ ಚುನಾವಣೆಗೆ ಸ್ಪರ್ಧಿಸಿದ್ದಾರೆ. ಇದಕ್ಕೆ ಜಾಧವ್ ಏನು ಹೇಳುತ್ತಾರೆ ಎಂದು ವಾಗ್ದಾಳಿ ನಡೆಸಿದರು.

ಬಂಜಾರ ಸಮುದಾಯಗಳು ವಾಸ ಮಾಡುವ ತಾಂಡಾಗಳಿಗೆ ಕಂದಾಯ ಗ್ರಾಮಗಳ ಸ್ಥಾನಮಾನ ನೀಡಿದ್ದು, ಕಾಂಗ್ರೆಸ್ ಸರಕಾರ. ಇದೀಗ ಮುಂಭಡ್ತಿ ಮೀಸಲಾತಿ ಕಾಯ್ದೆ ರೂಪಿಸುವ ಮೂಲಕ ಪರಿಶಿಷ್ಟ ನೌಕರರ ಹಿತರಕ್ಷಣೆ ಮಾಡಲಾಗಿದೆ. ಇದನ್ನೆಲ್ಲ ಬಿಜೆಪಿಯವರು ಮಾಡಿದ್ದರೇ ಎಂದು ಜಾಧವ್ ಉತ್ತರ ಹೇಳಬೇಕೆಂದು ಸಿದ್ದರಾಮಯ್ಯ ಒತ್ತಾಯಿಸಿದರು.

ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾಗಿರುವ ಬಿಜೆಪಿಯವರು ಅಂಬೇಡ್ಕರ್ ರೂಪಿಸಿದ ಸಂವಿಧಾನ ಸುಡುವ ಮತ್ತು ಅದನ್ನು ಬದಲಾವಣೆ ಮಾಡುವ ಪಕ್ಷಕ್ಕೆ ಹೋಗಿದ್ದೀರಲ್ಲ ಜಾಧವ್ ನಿಮಗೆ ನಾಚಿಕೆ ಆಗುವುದಿಲ್ಲವೇ ಎಂದು ಪ್ರಶ್ನಿಸಿದ ಅವರು, ಸಂವಿಧಾನ ಬದಲಾದರೆ ನಿಮಗೆ ಮೀಸಲಾತಿ ಸಿಗುವುದೇ ಎಂದು  ಪ್ರಶ್ನಿಸಿದರು.

ಯಾವುದೇ ಕಾರಣಕ್ಕೂ ಕ್ಷೇತ್ರದ ಜನತೆ ಮತ್ತು ಪಕ್ಷಕ್ಕೆ ದ್ರೋಹ ಮಾಡಿದ ವ್ಯಕ್ತಿಗೆ ಮತ ನೀಡಬೇಡಿ. ಬದಲಿಗೆ ಅತ್ಯಂತ ಸಂಭಾವಿತ ವ್ಯಕ್ತಿ ಹಾಗೂ ಹೋರಾಟಗಾರ ಸುಭಾಷ್ ರಾಠೋಡ್ ಅವರಿಗೆ ಮತ ನೀಡುವ ಮೂಲಕ ಚಿಂಚೋಳಿ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುವ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿ ಎಂದು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಲೋಕಸಭೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ, ಸಚಿವ ಎಂ.ಬಿ.ಪಾಟೀಲ್, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ಶಾಸಕರಾದ ಅಮರೇಗೌಡ ಬಯ್ಯೆಪುರ, ನಾರಾಯಣರಾವ್, ಶರಣಪ್ಪ ಮಟ್ಟೂರು, ಸಿ.ಎಂ. ಇಬ್ರಾಹೀಂ, ಡಾ.ಶರಣಪ್ರಕಾಶ್ ಪಾಟೀಲ್ ಸೇರಿ ಇನ್ನಿತರರು ಹಾಜರಿದ್ದರು.

‘ನನ್ನ ಮುಖ ನೋಡಲಿಕ್ಕೆ ಕಪ್ಪಿದೆ, ನಾನು ಸುಂದರವಾಗಿಲ್ಲ. ನನ್ನನ್ನು ನೋಡಿ ಕಾಂಗ್ರೆಸ್ ಪಕ್ಷದಲ್ಲಿ ಇರಲು ಆಗುವುದಿಲ್ಲ ಎಂದರೆ, ಮಾಜಿ ಸಿಎಂ ಸಿದ್ದರಾಮಯ್ಯರ ಮುಖವನ್ನು ನೋಡಿಯಾದರೂ ಪಕ್ಷದಲ್ಲೇ ಇರಬಹುದಿತ್ತಲ್ಲ ಎಂದು ಪಕ್ಷ ತೊರೆದ ಉಮೇಶ್ ಜಾಧವ್‌ಗೆ ಮಲ್ಲಿಕಾರ್ಜುನ ಖರ್ಗೆ ತಿರುಗೇಟು ನೀಡಿದರು’

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News