×
Ad

ನನ್ನ ಬಳಿ ಹಣ ಇದ್ದರೆ ಅಕ್ಕನ ಬ್ಯಾಗ್‌ನಲ್ಲಿಟ್ಟು ಕಳಿಸುವೆ: ಶೋಭಾ ಕರಂದ್ಲಾಜೆಗೆ ಸಚಿವ ಡಿಕೆಶಿ ತಿರುಗೇಟು

Update: 2019-05-11 20:15 IST

ಹುಬ್ಬಳ್ಳಿ, ಮೇ 11: ಹಣದ ಮೂಟೆ ಇಟ್ಟುಕೊಂಡು ಬಂದು ಕುಂದಗೋಳದಲ್ಲಿ ಚುನಾವಣೆ ನಡೆಸುತ್ತಿದ್ದಾರೆ ಎಂದು ತಮ್ಮ ವಿರುದ್ಧ ಆರೋಪ ಮಾಡಿರುವ ಸಂಸದೆ ಶೋಭಾ ಕರಂದ್ಲಾಜೆಗೆ ತಿರುಗೇಟು ನೀಡಿದ ಸಚಿವ ಡಿ.ಕೆ.ಶಿವಕುಮಾರ್, ನನ್ನ ಬಳಿ ಹಣ ಇದ್ದರೆ ಅಕ್ಕನ(ಶೋಭಾ ಕರಂದ್ಲಾಜೆ) ಬ್ಯಾಗ್‌ನಲ್ಲಿಟ್ಟು ಕಳಿಸುವೆ ಎಂದರು.

ನಂಜನಗೂಡು, ಗುಂಡ್ಲುಪೇಟೆ ಕ್ಷೇತ್ರಗಳ ಉಪ ಚುನಾವಣೆ ಸಂದರ್ಭದಲ್ಲಿ ನಾನು ನೋಡಿದ್ದೇನೆ. ಕಾರು, ಲಾರಿಯ ಟೈರ್‌ನಲ್ಲಿ ಶಿವಕುಮಾರ್, ಹಣ ಸಾಗಿಸಿ ಚುನಾವಣೆ ನಡೆಸುತ್ತಾರೆ ಎಂದು ಶೋಭಾ ಕರಂದ್ಲಾಜೆ ಮಾಡಿದ್ದ ಆರೋಪಕ್ಕೆ ಅವರು ಈ ಮೇಲಿನಂತೆ ಪ್ರತಿಕ್ರಿಯಿಸಿದರು.

ಬಲಿಕೊಡಲಿ ಬಿಡಿ: ಶಿವಕುಮಾರ್ ಕನಕಪುರದ ಭ್ರಷ್ಟ ಬಂಡೆ, ಕಾಂಗ್ರೆಸ್‌ನವರು ಬಲಿಕೊಡಲು ಕರೆ ತಂದಿರುವ ಕೋಣ ಎಂದು ಬಿಜೆಪಿ ಶಾಸಕ ರೇಣುಕಾಚಾರ್ಯ ಮಾಡಿರುವ ಟೀಕೆಗೆ ಪ್ರತಿಕ್ರಿಯಿಸಿದ ಅವರು, ರೇಣುಕಾಚಾರ್ಯ ಅಂತಹ ದೊಡ್ಡವರಿಗೆ ಉತ್ತರ ಕೊಡುವ ಶಕ್ತಿ ನಮಗಿಲ್ಲ ಎಂದರು.

ಮಾರಿಹಬ್ಬದ ಸಂದರ್ಭದಲ್ಲಿ ನಮ್ಮ ಹಳ್ಳಿಗಳ ಕಡೆ ಊರಿಗೆ ಒಳ್ಳೆಯದಾಗಲಿ ಎಂದು ಕೋಣವನ್ನು ಬಲಿ ಕೊಡುತ್ತಾರೆ. ಕುಂದಗೋಳ ಕ್ಷೇತ್ರಕ್ಕೆ ಒಳ್ಳೆಯದಾಗುವುದಾದರೆ ಬಿಜೆಪಿಯವರು, ಕಾಂಗ್ರೆಸ್‌ನವರು ನನ್ನನ್ನು ಬಲಿಕೊಡಲಿ ಬಿಡಿ ಎಂದು ಶಿವಕುಮಾರ್ ಹೇಳಿದರು.

ನನ್ನ ಸರಿಸಮಾನವಾಗಿರುವವರ ಜೊತೆ, ನನಗಿಂತ ದೊಡ್ಡವರ ಜೊತೆ ಯುದ್ಧ ಮಾಡಿದ್ದೇನೆ. ಪಾಪ ರೇಣುಕಾಚಾರ್ಯ, ಅವರ ಬಗ್ಗೆ ನಾನು ಏನು ಹೇಳಲಿ ಎಂದು ಶಿವಕುಮಾರ್ ವ್ಯಂಗ್ಯವಾಡಿದರು.

ಉತ್ತರ ಕರ್ನಾಟಕದಲ್ಲಿ ಯಾರು ಗಂಡಸರು ಇರಲಿಲ್ಲವೇ? ಕಾಂಗ್ರೆಸ್‌ನವರು ಶಿವಕುಮಾರ್‌ರನ್ನು ಚುನಾವಣಾ ಉಸ್ತುವಾರಿಯಾಗಿ ಕರೆದುಕೊಂಡು ಬಂದಿದ್ದಾರೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಈ ಬಗ್ಗೆ ಅವರ ಜಿಲ್ಲೆಯವರೇ ಆದ ಗೃಹ ಸಚಿವ ಎಂ.ಬಿ.ಪಾಟೀಲ್ ಉತ್ತರಿಸುತ್ತಾರೆ ಎಂದರು.

ಡಿವಿಜಿ ಕಗ್ಗ ಉಲ್ಲೇಖ

ನಗುವು ಸಹಜದ ಧರ್ಮ, ನಗಿಸುವುದು ಪರಧರ್ಮ

ನಗುವ ಕೇಳುತ ನಗುವುದತಿಶಯದ ಧರ್ಮ

ನಗುವ ನಗಿಸುವ ನಗಿಸಿ ನಗುತ ಬಾಳುವ ವರವ

ಮಿಗೆನೀನು ಬೇಡಿಕೊಳೊ-ಮಂಕುತಿಮ್ಮ

ಎಂದು ಡಿವಿಜಿಯವರ ಕಗ್ಗವನ್ನು ಉಲ್ಲೇಖಿಸಿ ರೇಣುಕಾಚಾರ್ಯ ವಿರುದ್ಧ ಡಿ.ಕೆ.ಶಿವಕುಮಾರ್ ವಾಗ್ದಾಳಿ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News