×
Ad

ಲಿಂಗಸಗೂರು ತಾಲೂಕಿನಲ್ಲಿ ಕುಡಿಯುವ ನೀರಿಗೆ ಹಾಹಾಕಾರ: ಸಮರ್ಪಕ ನೀರು ಒದಗಿಸಲು ಸೂಕ್ತ ಕ್ರಮ- ಇಒ ಪ್ರಕಾಶ್

Update: 2019-05-11 21:28 IST

ರಾಯಚೂರು, ಮೇ 11: ಕಳೆದ 40 ವರ್ಷಗಳಲ್ಲಿಯೆ ಅತಿ ಹೆಚ್ಚು ನೀರಿನ ಅಭಾವ ರಾಯಚೂರಿನ ಲಿಂಗಸಗೂರು ತಾಲೂಕಿನಲ್ಲಿ ತಲೆದೋರಿದ್ದು, ಜನರಿಗೆ ಕುಡಿಯುವ ನೀರನ್ನು ಸಮರ್ಪಕವಾಗಿ ಒದಗಿಸಲು ಸೂಕ್ತ ಕ್ರಮ ಕೈಗೊಳ್ಳಲಾಗಿದೆ ಎಂದು ತಾಲೂಕು ಪಂಚಾಯತ್ ಭರವಸೆ ನೀಡಿದೆ. 

ಲಿಂಗಸಗೂರು ತಾಲೂಕಿನ ಗುಂಡೇರಾವ್ ದೊಡ್ಡಿಯಲ್ಲಿ ನೀರಿಗಾಗಿ 40 ಅಡಿ ಆಳಕ್ಕೆ ಇಳಿದು ನೀರು ತರುವಂತಹ ಪರಿಸ್ಥಿತಿ ಇದೆ. ಇದೇ ತಾಲೂಕಿನ ಇನ್ನೊಂದು ಗ್ರಾಮ ಗಲಗಿನದೊಡ್ಡಿಯ ಜನತೆ ನಾರಾಯಣಪುರ ಬಲದಂಡೆ ಕಾಲುವೆಗೆ ಇಳಿದು ನೀರು ತರುತ್ತಿದ್ದು, ಕುಡಿಯುವ ನೀರಿಗಾಗಿ ತಮ್ಮ ಪ್ರಾಣಗಳನ್ನೆ ಒತ್ತೆ ಇಡುವಂತಾಗಿದೆ.

ಇಲ್ಲಿನ ಕಾಲುವೆ ಸುಮಾರು 150 ಅಡಿ ಆಳವಿದೆ. ಜನರು ಕುಡಿಯುವ ನೀರಿಗಾಗಿ ಈ ಕಾಲುವೆಗೆ ಇಳಿದು ನೀರು ತರಬೇಕಾಗಿದೆ. ಗಲಗಿನದೊಡ್ಡಿ ಎರಡು ಹ್ಯಾಂಡ್ ಪಂಪುಗಳಲ್ಲಿ ಸರಿಯಾಗಿ ನೀರು ಬರುತ್ತಿಲ್ಲ. ಇನ್ನು ಕುಡಿವ ನೀರಿನ ಕೊಳವೆ ಬಾವಿಯಿಂದ ಟ್ಯಾಂಕುಗಳಿಗೆ ನೀರು ತುಂಬಿಸಲು ವಿದ್ಯುತ್ ಕೊರತೆ ಇದೆ. ಹೀಗಾಗಿ ನೀರು ಸಿಗದೇ ಜನ ಆಗಾಗ ಕಾಲುವೆಗೆ ಇಳಿದು ನೀರು ತರಬೇಕಾದ ಅನಿವಾರ್ಯತೆ ಎದುರಾಗಿದೆ.

ಈ ಕುರಿತು ಸುದ್ದಿ ಮಾಧ್ಯಮಗಳಲ್ಲಿ ವರದಿ ಪ್ರಸಾರವಾಗುತ್ತಿದ್ದಂತೆ ಲಿಂಗಸಗೂರು ತಾಲೂಕು ಸಹಾಯಕ ಆಯುಕ್ತ ರಾಜಶೇಖರ ಡಂಬಳ, ತಾಲೂಕು ಪಂಚಾಯತ್ ಇಒ ಪ್ರಕಾಶ್ ಹಾಗೂ ದೇವರ ಬೋಪ್ಪುರ ಗ್ರಾಮ ಪಂಚಾಯತ್ ಪಿಡಿಒ ಸದಾನಂದ ಎಂಬುವರು ಭೇಟಿ ನೀಡಿ ಜನರ ಜತೆ ಸಮಸ್ಯೆಗಳ ಬಗ್ಗೆ ಚರ್ಚಿಸಿದರು. ಅಲ್ಲದೇ ವಿದುತ್ ತೊಂದರೆ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.

ರಾಯಚೂರಿನಲ್ಲಿ ಕುಡಿಯುವ ನೀರಿಗೆ ಸಮಸ್ಯೆ ತಲೆದೋರಿದ್ದು, ಇದನ್ನು ನಿವಾರಿಸುವ ನಿಟ್ಟಿನಲ್ಲಿ ಅಧಿಕಾರಿ, ಸಿಬ್ಬಂದಿಗಳೊಂದಿಗೆ ಚರ್ಚೆ ನಡೆಸಿದ್ದೇವೆ. ನೀರು ಲಭ್ಯ ಇರುವ ಜಾಗದಿಂದ ಅಭಾವವಿರುವ ಸ್ಥಳಗಳಿಗೆ ಉಚಿತವಾಗಿ ನೀರು ಸರಬರಾಜಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ತಾಲೂಕು ಪಂಚಾಯತ್ ಇಒ ಪ್ರಕಾಶ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News