×
Ad

ವಕ್ಫ್ ಆಸ್ತಿ ವಿಚಾರ: ಎರಡು ಗುಂಪುಗಳ ಮಧ್ಯೆ ಘರ್ಷಣೆ; ಲಘು ಲಾಠಿ ಪ್ರಹಾರ

Update: 2019-05-11 23:03 IST

ದಾವಣಗೆರೆ, ಮೇ 11: ವಕ್ಫ್ ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಹರಿಹರ ತಾ. ಮಲೆಬೆನ್ನೂರು ಪಟ್ಟಣದ ಜುಮಾ ಮಸೀದಿ ಬಳಿ ಎರಡು ಗುಂಪುಗಳ ಮಧ್ಯೆ ಘರ್ಷಣೆ ಸಂಭವಿಸಿ, ಮೂವರು ತೀವ್ರ ಗಾಯಗೊಂಡಿದ್ದು, ಗುಂಪನ್ನು ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ ಘಟನೆ ನಡೆದಿದೆ ಎನ್ನಲಾಗಿದೆ. 

ಮಲೆಬೆನ್ನೂರು ಗ್ರಾಮದಲ್ಲಿ ಜುಮಾ ಮಸೀದಿ, ಜಾಮಿಯಾ ನ್ಯಾಷನಲ್ ವಿದ್ಯಾಸಂಸ್ಥೆ, ಶಾದಿ ಮಹಲ್‍ನಲ್ಲಿ ಭಾರೀ ಅವ್ಯವಹಾರ ನಡೆದಿದೆಯೆಂದು ಗುಂಪೊಂದು ರಾಜ್ಯ ವಕ್ಫ್ ಮಂಡಳಿಗೆ ದೂರು ನೀಡಿ, ಸೂಕ್ತ ತನಿಖೆ ನಡೆಸುವ ಜೊತೆಗೆ ಕ್ರಮಕ್ಕೂ ಒತ್ತಾಯಿಸಿತ್ತು. ಸಮಾಜದ ಅಂಗ ಸಂಸ್ಥೆಗಳ ಅವ್ಯವಹಾರದ ಬಗ್ಗೆ ರಾಜ್ಯ ವಕ್ಫ್ ಮಂಡಳಿ ಉನ್ನತ ಅಧಿಕಾರಿಗಳಿಂದ ತನಿಖೆ ಮಾಡಿಸಬೇಕು. ಲೆಕ್ಕ ಪತ್ರ ಸರಿಯಾಗುವವರೆಗೂ ಮಲೆಬೆನ್ನೂರಿನ ವಕ್ಫ್ ಆಸ್ತಿ, ಸಂಸ್ಥೆಗಳಿಗೆ ಆಡಳಿತಾಧಿಕಾರಿ ನೇಮಕ ಮಾಡಿ, ಹಾಲಿ ಇಡುವ ಆಡಳಿತ ಮಂಡಳಿ ತಕ್ಷಣದಿಂದಲೇ ಅಮಾನತಿನಲ್ಲಿಡಬೇಕು ಎಂಬುದಾಗಿ ಆಗ್ರಹಿಸಿತ್ತು.

ರಾಜ್ಯ ವಕ್ಫ್ ಮಂಡಳಿಗೆ ದೂರು ನೀಡಿದ್ದ ಗುಂಪಿನಲ್ಲಿ ಗುರುತಿಸಿಕೊಂಡಿರುವ ಎಂ.ಬಿ.ಶೌಕತ್ ಅಲಿ, ಪುತ್ರ ಶಹಬಾಜ್, ಸೈಯದ್ ಖಾಲಿದ್ ಪಾಷಾ ಎಂಬವರು ಮಲೆಬೆನ್ನೂರಿನ ಜುಮಾ ಮಸೀದಿಗೆ ಶುಕ್ರವಾರದ ಪ್ರಾರ್ಥನೆಗೆಂದು ತೆರಳಿದ್ದರು. ಈ ವೇಳೆ ಎದುರು ಗುಂಪಿನವರು ಶೌಕತ್ ಅಲಿ ಇತರರ ಜೊತೆಗೆ ತಮ್ಮ ವಿರುದ್ಧ ಮಾಡಿದ್ದ ಆರೋಪದ ಬಗ್ಗೆ ಸಣ್ಣದಾಗಿ ಆರಂಭಗೊಂಡ ಮಾತಿನ ಚಕಮಕಿ ತೀವ್ರಗೊಂಡು, ಘರ್ಷಣೆಗೆ ತಿರುಗಿದೆ ಎನ್ನಲಾಗಿದೆ. ಘರ್ಷಣೆಯಲ್ಲಿ ಸೈಯದ್ ಖಾಲಿದ್ ಪಾಷಾ, ಶಹಬಾಜ್ ಅಲಿ ಹಾಗೂ ಶೌಕತ್ ಅಲಿ ಗಾಯಗೊಂಡಿದ್ದಾರೆ. ತಕ್ಷಣವೇ ಪೊಲೀಸರು ಸ್ಥಳಕ್ಕೆ ದೌಡಾಯಿಸಿ, ಎರಡೂ ಗುಂಪುಗಳನ್ನು ಚದುರಿಸಲು ಲಘು ಲಾಠಿ ಪ್ರಹಾರ ನಡೆಸಬೇಕಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News