ಮತ್ತೆ ಸಿಎಂ ಆಗುವ ಕನಸು ಕಾಣುತ್ತಿದ್ದಾರೆ: ಸಿದ್ದರಾಮಯ್ಯ ವಿರುದ್ಧ ಈಶ್ವರಪ್ಪ ವಾಗ್ದಾಳಿ

Update: 2019-05-11 17:40 GMT

ಶಿವಮೊಗ್ಗ, ಮೇ 11: ತಾವೇ ಮುಂದಿನ ಮುಖ್ಯಮಂತ್ರಿ ಎಂದು ಸಿದ್ದರಾಮಯ್ಯನವರು ಕಾಂಗ್ರೆಸ್ ಪಕ್ಷದ ಕೆಲ ಶಾಸಕರ ಮೂಲಕ ಹೇಳಿಸುತ್ತಾ ಮತ್ತೆ ಸಿಎಂ ಆಗುವ ಕನಸು ಕಾಣುತ್ತಿದ್ದಾರೆ ಎಂದು ಬಿಜೆಪಿ ಮುಖಂಡ ಕೆ.ಎಸ್. ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ. 

ಶನಿವಾರ ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್‌ನಲ್ಲಿ ಎರಡು ಗುಂಪುಗಳಿವೆ. ಒಂದು ಗುಂಪು ಸಿದ್ದರಾಮಯ್ಯರೇ ಸಿಎಂ ಆಗಬೇಕು ಎಂದು ಹೇಳುತ್ತಿದೆ. ಸ್ವತಃ ಸಿದ್ದರಾಮಯ್ಯರೇ ಈ ಗುಂಪಿನ ಬೆನ್ನ ಹಿಂದಿದ್ದು, ಹೇಳಿಕೆ ಕೊಡಿಸುತ್ತಿದ್ದಾರೆ. ಇನ್ನೊಂದು ಗುಂಪು ಮೂಲ ಕಾಂಗ್ರೆಸಿಗರು. ಈ ಗುಂಪು ಬಟ್ಟೆ ಹಾವಿನಂತಿದೆ. ನಿಸ್ಸಹಾಯಕರಾಗಿದ್ದಾರೆ ಎಂದರು.

ಮೈತ್ರಿ ಸರಕಾರ ಅತಂತ್ರಕ್ಕೆ ಸಿದ್ದರಾಮಯ್ಯರೇ ತಂತ್ರಗಾರಿಕೆ ನಡೆಸುತ್ತಿದ್ದಾರೆಯೇ ಹೊರತು, ಬಿಜೆಪಿಯಾಗಲಿ, ಯಡಿಯೂರಪ್ಪನವರಾಗಲೀ ಅಲ್ಲ. ತಮ್ಮ ಕುತಂತ್ರ ಮುಚ್ಚಿ ಹಾಕಿಕೊಳ್ಳಲು ಬಿಜೆಪಿ ವಿರುದ್ಧ ಸಿದ್ದರಾಮಯ್ಯ ಆರೋಪ ಹೊರಿಸುತ್ತಿದ್ದಾರೆ. ಮೇ 23ರ ನಂತರ ಸಮ್ಮಿಶ್ರ ಸರಕಾರದ ಬಿಕ್ಕಟ್ಟು ಮತ್ತಷ್ಟು ತೀವ್ರಗೊಳ್ಳಲಿದೆ. ಅಧಿಕಾರದ ಕಿತ್ತಾಟ ಹೆಚ್ಚಾಗಲಿದೆ ಎಂದು ತಿಳಿಸಿದರು.

‘ಜಾದವ್ ಖರೀದಿಯಾಗಿ ಬಿಜೆಪಿಗೆ ಹೋಗಿದ್ದಾರೆ’ಎಂದು ಸಿದ್ದರಾಮಯ್ಯ ಹೇಳಿರುವುದು ಖಂಡನೀಯ. ಜೆಡಿಎಸ್‌ನಿಂದ ಕಾಂಗ್ರೆಸ್‌ಗೆ ಹೋದ ಸಿದ್ದರಾಮಯ್ಯ ಆಗ ಎಷ್ಟು ಹಣ ತೆಗೆದುಕೊಂಡಿದ್ದರು. ಅವರು ಜಾತಿಗಳ ನಡುವೆ ಬೆಂಕಿ ಹಚ್ಚಿದ ಅವರಿಗೆ ನಾಚಿಕೆಯೇ ಇಲ್ಲ ಎಂದರು. ಕಾಂಗ್ರೆಸ್ ಬಿಟ್ಟು ಜೆಡಿಎಸ್ ಮೈತ್ರಿಯಿಂದ ಹೊರಬಂದರೆ ಅವರೊಂದಿಗೆ ಬಿಜೆಪಿ ಕೈಜೋಡಿಸಲಿದೆಯೇ ಎಂಬ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಈಶ್ವರಪ್ಪ, ಯಾವುದೇ ಕಾರಣಕ್ಕೂ ಕಾಂಗ್ರೆಸ್‌ನೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ. ಹಾಗೆಂದು ಜೆಡಿಎಸ್ ಜೊತೆ ಸಂಪರ್ಕದಲ್ಲಿಯೂ ಇಲ್ಲ. ಅಥವಾ ಅವರೊಂದಿಗೆ ಕೈಜೋಡಿಸಲಾಗುತ್ತದೆ ಎಂಬುವುದರಲ್ಲಿ ಅರ್ಥವೂ ಇಲ್ಲ ಎಂದು ಪ್ರತಿಕ್ರಿಯೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News