ಜೆಡಿಎಸ್‌ನಿಂದ ಕುತಂತ್ರ ರಾಜಕಾರಣ: ಚಲುವರಾಯಸ್ವಾಮಿ ಬೆಂಬಲಿಗರ ಆರೋಪ

Update: 2019-05-11 17:51 GMT

ಮಂಡ್ಯ, ಮೇ 11: ಲೋಕಸಭಾ ಚುನಾವಣೆಯಲ್ಲಿ ಒಂದು ಹೆಣ್ಣನ್ನು ಎದುರಿಸಲಾಗದ ಜೆಡಿಎಸ್‌ನವರು ಶಿಖಂಡಿಗಳು ಎಂದು ನಾಗಮಂಗಲದ ಮಾಜಿ ಸಚಿವ ಎನ್.ಚಲುವರಾಯಸ್ವಾಮಿ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶನಿವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಪಂ ಮಾಜಿ ಸದಸ್ಯ ಪ್ರಸನ್ನ, ಜಿಲ್ಲೆಯ ಅಭ್ಯರ್ಥಿಯನ್ನು ಕಣಕ್ಕಿಳಿಸದೆ ಸಿಎಂ ಪುತ್ರ ನಿಖಿಲ್ ಕಣಕ್ಕಿಳಿಸಿರುವ ಜೆಡಿಎಸ್ ಶಾಸಕರು ಶಿಖಂಡಿ ರಾಜಕಾರಣ ಮಾಡಿದ್ದಾರೆಂದು ಲೇವಡಿ ಮಾಡಿದರು. ಜಿಲ್ಲೆಯ ಎಲ್ಲ ಕ್ಷೇತ್ರಗಳ ಶಾಸಕರು, ಸಂಸದರು, ಸಚಿವರು, ಮಾಜಿ ಪ್ರಧಾನಿ, ಸಿಎಂ, ಇತರ ನಾಯಕರಿದ್ದರೂ ಲೋಕಸಭಾ ಚುನಾವಣೆಯಲ್ಲಿ ಓರ್ವ ಹೆಣ್ಣು ಮಗಳನ್ನು ಸೋಲಿಸಲು ಯತ್ನಿಸಿದ್ದು ನಾಚಿಕೆಗೇಡು ಎಂದು ಅವರು ವ್ಯಂಗ್ಯವಾಡಿದರು.

ಸುಮಲತಾ ಸ್ಪರ್ಧಿಸಿದ್ದಾರೆಂಬ ಕಾರಣಕ್ಕೆ ಅದೇ ಹೆಸರಿನ ಮೂವರನ್ನು ಅಖಾಡಕ್ಕಿಳಿಸಿ ಕುತಂತ್ರ ರಾಜಕಾರಣ ಮಾಡಿದಿರಲ್ಲ. ಇದು ಶಿಖಂಡಿತನದ ರಾಜಕಾರಣವಲ್ಲವೇ ಎಂದು ಅವರು ಪ್ರಶ್ನಿಸಿದ ಅವರು, ಗೆಲ್ಲುವ ವಿಶ್ವಾಸವಿರುವ ನಿಮಗೆ ಸೋತಿರುವ ಚಲುವರಾಯಸ್ವಾಮಿ ಅವರ ಉಸಾಬರಿ ಏಕೆ? ಚಲುವರಾಯಸ್ವಾಮಿ ತಪ್ಪಾಗಿ ನಡೆದಿದ್ದರೆ ಪ್ರಶ್ನಿಸಲು ಕಾಂಗ್ರೆಸ್ ವರಿಷ್ಠರಿದ್ದಾರೆ. ಅದರ ಉಸಾಬರಿ ನಿಮಗೆ ಬೇಕಾಗಿಲ್ಲ ಎಂದು ಅವರು ಜೆಡಿಎಸ್ ಮುಖಂಡರನ್ನು ತರಾಟೆಗೆ ತೆಗೆದುಕೊಂಡರು.

ರಾಜ್ಯಸಭಾ ಚುನಾವಣೆಯಲ್ಲಿ ಚಲುವರಾಯಸ್ವಾಮಿ ಅಡ್ಡಮತದಾನ ಮಾಡಿದ್ದಾರೆ ಎಂದು ಹೇಳುತ್ತೀರಿ. ಫಾರೂಕ್, ಶರವಣ ವಿಧಾನಪರಿಷತ್‌ಗೆ ಸ್ಪರ್ಧಿಸಿದ್ದಾಗ ಶಾಸಕರೆಲ್ಲಾ ಚಾಕೋಲೇಟ್ ಪಡೆದು ಓಟ್ ಹಾಕಿದ್ದರಾ? ಎನ್.ಅಪ್ಪಾಜಿಗೌಡ ಸ್ಪರ್ಧೆ ವೇಳೆ 50 ಲಕ್ಷ ರೂ. ಕೊಟ್ಟಿರುವುದಾಗಿ ಬಹಿರಂಗವಾಗಿಯೇ ಹೇಳಿದ್ದರು. ನಿಮ್ಮಿಂದ ರಾಜಕೀಯದ ನೀತಿ ಪಾಠ ಕಲಿಯಬೇಕಿಲ್ಲ ಎಂದು ಟೀಕಿಸಿದರು.

ಲೋಕಸಭಾ ಚುನಾವಣೆಯಲ್ಲಿ ಚಲುವರಾಯಸ್ವಾಮಿ ತಟಸ್ಥರಾಗಿದ್ದರು. ಆದರೆ, ನಾವು ಸ್ವತಂತ್ರವಾಗಿ ನಿರ್ಧಾರ ಕೈಗೊಂಡು ಸ್ವಾಭಿಮಾನದ ದೃಷ್ಟಿಯಿಂದ ಸುಮಲತಾ ಬೆಂಬಲಿಸಿದ್ದೇವೆ. ನಮ್ಮ ನಿರ್ಧಾರಕ್ಕೂ ಚಲುವರಾಯಸ್ವಾಮಿ ಅವರಿಗೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದರು.

ಜೆಡಿಎಸ್‌ನವರು ನಮ್ಮ ಮೇಲೆ ಸುಳ್ಳು ಕೇಸುಗಳನ್ನು ದಾಖಲಿಸಿ ಸ್ಥಳೀಯವಾಗಿ ಕಿರುಕುಳ ನೀಡಿದ್ದಾರೆ. ಎಪಿಎಂಸಿಗೆ ನಮಗೊಂದು ನಾಮನಿರ್ದೇಶನ ಕೊಡುವಂತೆ ಸಚಿವ ಡಿ.ಕೆ.ಶಿವಕುಮಾರ್ ಮೂಲಕ ಕೋರಿಕೆ ಇಟ್ಟಾಗ ಜಿಲ್ಲೆಯ ಎಲ್ಲ ಶಾಸಕರು ಸೇರಿ ಅದನ್ನು ತಪ್ಪಿಸಿದರು. ಅದಕ್ಕಾಗಿಯೇ ಜೆಡಿಎಸ್ ಅಭ್ಯರ್ಥಿ ವಿರುದ್ಧ ಕೆಲಸ ಮಾಡಬೇಕಾಯಿತು ಎಂದು ಸಮರ್ಥಿಸಿಕೊಂಡರು.

ಲೋಕಸಭಾ ಉಪ ಚುನಾವಣೆಯಲ್ಲಿ ಸಿ.ಎಸ್.ಪುಟ್ಟರಾಜು ಸೋಲಲು ಗುಂಪುಗಾರಿಕೆ ಕಾರಣ, ಚಲುವರಾಯಸ್ವಾಮಿ ಅಲ್ಲ. ಎರಡನೆೀ ಬಾರಿ ಗುಂಪುಗಾರಿಕೆ ಇಲ್ಲದ್ದರಿಂದ ಗೆದ್ದರು ಎಂದೂ ಅವರು ವಿವರಣೆ ನೀಡಿದರು. ಈ ಸಂದರ್ಭದಲ್ಲಿ ಮುಖಂಡರಾದ ಕೃಷ್ಣೇಗೌಡ, ನರಸಿಂಹುೂರ್ತಿ, ರಾಜೇಶ್, ವಸಂತ್, ರವಿಕಾಂತ್, ರಾಜೇಶ್ ಹಾಗೂ ಸುಭಾಷ್‌ಚಂದ್ರ ಉಪಸ್ಥಿತರಿದ್ದರು.

ಶಾಸಕ ಸುರೇಶ್‌ಗೌಡಗೆ ಎಚ್ಚರಿಕೆ

ಶಾಸಕ ಸುರೇಶ್‌ಗೌಡರು ಕ್ಷೇತ್ರದಲ್ಲಿರುವ ಸಮಸ್ಯೆಗಳ ಬಗ್ಗೆ ಮೊದಲು ಗಮನಹರಿಸಲಿ. ತಾಲೂಕಿನ 65ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಾಂಡವವಾಡುತ್ತಿದ್ದು, ನೀರಿನ ಅಭಾವ ನೀಗಿಸುವ ಬದ್ಧತೆ ಪ್ರದರ್ಶಿಸಲಿ. ಅದನ್ನು ಬಿಟ್ಟು ಚಲುವರಾಯಸ್ವಾಮಿ ಅವರ ವಿರುದ್ಧ ಮತ್ತೊಮ್ಮೆ ನಾಲಗೆ ಹರಿಯಬಿಟ್ಟರೆ ಬೀದಿಗಿಳಿದು ಹೋರಾಟ ನಡೆಸುವುದಾಗಿ ಅವರು ಎಚ್ಚರಿಕೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News