ಬಸ್-ಬೈಕ್ ಮುಖಾಮುಖಿ ಢಿಕ್ಕಿ: ಒಂದೇ ಕುಟುಂಬದ ಮೂವರು ಮೃತ್ಯು

Update: 2019-05-12 12:30 GMT

ಮಂಡ್ಯ, ಮೇ 12: ಕೃಷ್ಣರಾಜಪೇಟೆ ಪಟ್ಟಣದ ಹೊರವಲಯದ ಹೇಮಗಿರಿ ಮುಖ್ಯರಸ್ತೆಯ ಸಾಧುಗೋನಹಳ್ಳಿಯ ಬಳಿ ಸಾರಿಗೆ ಸಂಸ್ಥೆಯ ಬಸ್ ಮತ್ತು ಬೈಕ್ ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿ ಬೈಕಿನಲ್ಲಿದ್ದ ಮೂವರು ಸ್ಥಳದಲ್ಲೇ ಸಾವನಪ್ಪಿದ ಘಟನೆ ರವಿವಾರ ಮಧ್ಯಾಹ್ನ ನಡೆದಿದೆ.

ಕೆ.ಆರ್.ಪೇಟೆ ಪಟ್ಟಣದ ಅಂಬೇಡ್ಕರ್ ನಗರದ ನಿವಾಸಿಗಳಾದ ಕೃಷ್ಣ(40) ಅವರ ಪತ್ನಿ ಗೌರಿ(30) ಹಾಗೂ ಅತ್ತೆ ಜಯಮ್ಮ(55) ಸಾವನ್ನಪ್ಪಿದವರು.

ಅನಾರೋಗ್ಯ ಪೀಡಿತ ಸಂಬಂಧಿಕರ ಆರೋಗ್ಯ ವಿಚಾರಿಸಲು ಕೃಷ್ಣ ಅವರು ಪತ್ನಿ, ಅತ್ತೆ ಜೊತೆ ಬೈಕ್‍ನಲ್ಲಿ ತೆರಳುತ್ತಿದ್ದಾಗ ರಸ್ತೆ ತಿರುವಿನಲ್ಲಿ ವೇಗವಾಗಿ ಬಂದ ಸಾರಿಗೆ ಬಸ್ ಢಿಕ್ಕಿಯಾಗಿ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ.

ಬಸ್ ಚಾಲಕನ ಅಜಾಗರೂಕತೆಯೇ ಅಪಘಾತಕ್ಕೆ ಕಾರಣವೆನ್ನಲಾಗಿದ್ದು, ಸುದ್ದಿ ತಿಳಿದ ತಕ್ಷಣ ಗ್ರಾಮಾಂತರ ಪೋಲಿಸ್ ಠಾಣೆ ಸಬ್‍ಇನ್ಸ್ ಪೆಕ್ಟರ್ ಆನಂದೇಗೌಡ ಸ್ಥಳಕ್ಕೆ ಭೇಟಿ ನೀಡಿ ಮೃತದೇಹಗಳನ್ನು ಸಾರ್ವಜನಿಕ ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಿದ್ದಾರೆ.

ಅಪಘಾತದ ಬಳಿಕ ಬಸ್ ಚಾಲಕ ಮಹದೇವ ತಲೆ ಮರೆಸಿಕೊಂಡಿದ್ದು, ಆತನ ಬಂಧನಕ್ಕೆ ಪೋಲಿಸರು ಬಲೆ ಬೀಸಿದ್ದಾರೆ. ಮೃತರ ಬಂಧುಗಳ ಆಕ್ರಂಧನ ಮುಗಿಲು ಮುಟ್ಟಿತ್ತು.  

ಶಾಸಕ ನಾರಾಯಣಗೌಡ, ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್, ಪುರಸಭೆ ಸದಸ್ಯ ಡಿ.ಪ್ರೇಮಕುಮಾರ್, ಜಿಪಂ ಸದಸ್ಯ ರಾಮದಾಸ, ಕೆಪಿಜೆಪಿ ತಾಲೂಕು ಅಧ್ಯಕ್ಷ ಕಾಂತರಾಜು, ಕೆ.ಟಿ.ಗಂಗಾಧರ, ಸೋಮಸುಂದರ್, ರವೀಂದ್ರಬಾಬು, ಇತರ ಮುಖಂಡರು ಶವಾಗಾರಕ್ಕೆ ಭೇಟಿ ನೀಡಿ ಮೃತರ ಕುಟುಂಬದವರಿಗೆ ಸಾಂತ್ವನ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News