×
Ad

ಸುಮಲತಾ ಪರ ಕೆಲಸ ಮಾಡಿದ್ದೇನೆಂಬುದು ಸುಳ್ಳು: ಮಾಜಿ ಶಾಸಕ ನರೇಂದ್ರಸ್ವಾಮಿ

Update: 2019-05-12 17:30 IST

ಮಂಡ್ಯ, ಮೇ 12: ಜೆಡಿಎಸ್ ಪರ ಚುನಾವಣೆ ಮಾಡಲು ಇಚ್ಚೆ ಇರಲಿಲ್ಲವಾದ್ದರಿಂದ ಲೋಕಸಭಾ ಚುನಾವಣೆಯಲ್ಲಿ ತಟಸ್ಥನಾಗಿದ್ದೆ ಎಂದು ಮಳವಳ್ಳಿಯ ಕಾಂಗ್ರೆಸ್‍ನ ಮಾಜಿ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಹೇಳಿದ್ದಾರೆ.

ರವಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆಯಲ್ಲಿ ಯಾರ ಪರವಾಗಿಯೂ ಕೆಲಸ ಮಾಡಿಲ್ಲ. ಪಕ್ಷೇತರ ಅಭ್ಯರ್ಥಿ ಸುಮಲತಾ ಪರ ಕೆಲಸ ಮಾಡಿದೆನೆಂಬುದು ಸುಳ್ಳು ಎಂದು ಸ್ಪಷ್ಟಪಡಿಸಿದರು.

ಸಚಿವ ಡಿ.ಕೆ.ಶಿವಕುಮಾರ್ ಸೇರಿದಂತೆ ಕಾಂಗ್ರೆಸ್ ಪಕ್ಷದ ನಾಯಕರಿಗೆ ತಾನು ತಟಸ್ಥವಾಗಿರುವುದಾಗಿ ಮೊದಲೇ ಹೇಳಿದ್ದೆ. ನಾನು ಜವಾಬ್ದಾರಿ ರಾಜಕಾರಣ ಮಾಡುವವನು. ಗುಲಾಮಗಿರಿ ರಾಜಕಾರಣ ಮಾಡುವವನಲ್ಲ ಎಂದು ಅವರು ಶಾಸಕ ಅನ್ನದಾನಿಗೆ ತಿರುಗೇಟು ನೀಡಿದರು.

ನನಗೆ ಹಿಡಿಸದ, ಉಸಿರುಗಟ್ಟುವ ವಾತಾವರಣದಲ್ಲಿ ನಾನು ಇರುವುದಿಲ್ಲ. ಮಳವಳ್ಳಿ ಕ್ಷೇತ್ರದ ಕಾಂಗ್ರೆಸ್ಸಿಗರ ಧನಿಯಾಗಿ ನಾನಿದ್ದೆ. ನಾನು ಇನ್ನೊಂದು ಪಕ್ಷದ ಧನಿಯಾಗಲ್ಲ. ಸುಮಲತಾ ಪರ ಯಾವ ವೇದಿಕೆಯಲ್ಲೂ ಕಾಣಿಸಿಕೊಂಡಿಲ್ಲ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಬರ್ತ್ ಡೇ ಪಾರ್ಟಿಗೆ ತೆರಳಿದ್ದಾಗ ನಾವು-ಸುಮಲತಾ ಮುಖಾಮುಖಿ ಆಗಿದ್ದೆವು. ಹಾಗೆಂದ ಮಾತ್ರಕ್ಕೆ ಚುನಾವಣೆಯಲ್ಲಿ ಅವರ ಪರ ಕೆಲಸ ಮಾಡಿದ್ದೇವೆಂದಲ್ಲ. ಎಲ್ಲದಕ್ಕೂ ಉತ್ತರ ಕೊಡುವುದಕ್ಕೆ ಆಗುವುದಿಲ್ಲ ಎಂದೂ ಅವರು ತಿಳಿಸಿದರು.

ಸುಮಲತಾ ಪರವಾಗಿ ಸಿದ್ದರಾಮಯ್ಯ ಅವರೂ ಇರಲಿಲ್ಲ. ಹಿಂಬಾಗಿಲ ರಾಜಕಾರಣ ಮಾಡುವ ಜಾಯಮಾನ ಅವರದ್ದಲ್ಲ. ಶಾಸಕ ಸುರೇಶ್‍ಗೌಡರ ತಲೆಯಲ್ಲಿ ಕಾಂಗ್ರೆಸ್ ಋಣ ಇದೆ. ಆದ್ದರಿಂದ ಏನೇನೋ ಮಾತಾಡುತ್ತಾರೆಂದು ಅವರು ಟೀಕಿಸಿದರು.

ಸಿದ್ದರಾಮಯ್ಯ ಅವರ ಕಾಲದಲ್ಲಿ ಸಾಕಷ್ಟು ಅಭಿವೃದ್ಧಿ ಆಗಿದೆ. ಹಾಗಾಗಿ ಮತ್ತೊಮ್ಮೆ ಅವರು ಸಿಎಂ ಆಗಬೇಕೆಂಬ ಕೂಗು ಕೇಳಿಬರುತ್ತಿದೆ. ಜನಾಭಿಪ್ರಾಯ ಇರುವುದರಿಂದ ಸಿಎಂ ಆದರೆ ತಪ್ಪೇನಿಲ್ಲ ಎಂದು ನರೇಂದ್ರಸ್ವಾಮಿ ಅಭಿಪ್ರಾಯಪಟ್ಟರು.

ಜೆಡಿಎಸ್‍ಗೆ ಅಧಿಕಾರ ಬಿಟ್ಟುಕೊಟ್ಟಿದ್ದೇವೆ. ಆದರೆ, ಅಭಿವೃದ್ಧಿ ಮಾಡುವ ಬದಲು ನಮ್ಮ ಹಿಂದಿನ ಯೋಜನೆಯನ್ನು ತಡೆಯುತ್ತಿದ್ದಾರೆ. ಜೆಡಿಎಸ್ ಪಕ್ಷದಿಂದ ನಮಗೆ ನಿರಂತರ ನೋವಾಗುತ್ತಿದೆ. ಈ ಬಗ್ಗೆ ನಮ್ಮ ನಾಯಕರೊಂದಿಗೆ ಚರ್ಚೆ ಮಾಡುತ್ತೇನೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News