×
Ad

ಸೋಲುವ ಭೀತಿಯಿಂದ ಬಿಜೆಪಿಯವರಿಂದ ಮನಸೋ ಇಚ್ಛೆ ಹೇಳಿಕೆ: ದಿನೇಶ್ ಗುಂಡೂರಾವ್

Update: 2019-05-12 17:35 IST

ಹುಬ್ಬಳ್ಳಿ, ಮೇ 12: ಲೋಕಸಭೆ ಹಾಗೂ ಉಪ ಚುನಾವಣೆಗಳಲ್ಲಿ ಸೋಲುವ ಭೀತಿಯಿಂದ ಬಿಜೆಪಿಯವರು ಮನಸೋ ಇಚ್ಛೆ ಮಾತನಾಡುತ್ತಿದ್ದಾರೆ. ಐದು ಚುನಾವಣೋತ್ತರ ಸಮೀಕ್ಷೆಗಳಲ್ಲಿ ಬಿಜೆಪಿಗೆ 160 ಸೀಟುಗಳು ಬರಲಿವೆ ಎಂದು ಹೇಳಿದ್ದು, ಮೋದಿ ಮನಬಂದಂತೆ ಮಾತನಾಡುತ್ತಿದ್ದಾರೆಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಟೀಕಿಸಿದ್ದಾರೆ.

ರವಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮೇ 23ರ ಲೋಕಸಭೆ ಚುನಾವಣಾ ಫಲಿತಾಂಶ ಬಡಾಯಿಗಳ ಬಾಯಿ ಮುಚ್ಚಿಸಲಿದೆ. ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಹೆಚ್ಚು ಸ್ಥಾನ ಗಳಿಸಿ ಕೇಂದ್ರದಲ್ಲಿ ಸರಕಾರ ರಚಿಸಲಿದೆ. ಉಪ ಚುನಾವಣೆಯಲ್ಲಿಯೂ ಮೈತ್ರಿ ಅಭ್ಯರ್ಥಿಗಳು ಗೆಲ್ಲಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬಿಜೆಪಿ ಎಂದರೆ ಭ್ರಷ್ಟಾಚಾರಿಗಳ ಜನತಾ ಪಕ್ಷ. ಅಲ್ಲಿರುವವರೆಲ್ಲರೂ ಭ್ರಷ್ಟಾಚಾರಿಗಳೆ. ಮೈತ್ರಿ ಸರಕಾರ ಬೀಳಿಸುವ ಯತ್ನ ಮಾಡಿರುವ ಯಡಿಯೂರಪ್ಪ ಅವರ ಧ್ವನಿಮುದ್ರಿಕೆಯಲ್ಲೇ ಇದು ಸಾಬೀತಾಗಿದೆ. ಅಂತಹವರ ಭ್ರಷ್ಟಾಚಾರದ ವಿರುದ್ಧದ ಮಾತನ್ನು ಯಾರು ತಾನೇ ಕೇಳುತ್ತಾರೆ ಎಂದು ಲೇವಡಿ ಮಾಡಿದರು.

ನಯಾಪೈಸೆ ನೀಡಿಲ್ಲ: ರಾಜ್ಯದಲ್ಲಿನ ಭೀಕರ ಸ್ವರೂಪದ ಬರಕ್ಕೆ ಕೇಂದ್ರ ಸರಕಾರ ನಯಾಪೈಸೆ ಅನುದಾನ ಬಿಡುಗಡೆ ಮಾಡಿಲ್ಲ. ಬರ ಪರಿಹಾರ ಕಾಮಗಾರಿ ಕೈಗೊಳ್ಳಲು ಚುನಾವಣಾ ಆಯೋಗ ಅವಕಾಶ ಕಲ್ಪಿಸುತ್ತಿಲ್ಲ. ಸಚಿವ ಕೃಷ್ಣ ಬೈರೇಗೌಡ ನೇತೃತ್ವದ ನಿಯೋಗದ ಮನವಿಗೂ ಕೇಂದ್ರ ಸ್ಪಂದಿಸಿಲ್ಲ ಎಂದು ದೂರಿದರು.

ರಾಜ್ಯದ ಲೋಕಸಭೆ ಚುನಾವಣೆಯಲ್ಲಿಯೂ ಮೈತ್ರಿ ಪಕ್ಷಗಳು ಹೆಚ್ಚಿನ ಸ್ಥಾನಗಳನ್ನು ಗಳಿಸಲಿದ್ದು, ಎರಡೂ ಉಪ ಚುನಾವಣೆಯಲ್ಲಿಯೂ ಮೈತ್ರಿ ಅಭ್ಯರ್ಥಿಗಳ ಗೆಲುವು ನಿಶ್ಚಿತ. ಬಿಜೆಪಿ ವಿಪಕ್ಷ ಸ್ಥಾನದಲ್ಲಿದ್ದು, ಬರ ಸ್ಥಿತಿಗೆ ಕೇಂದ್ರದಿಂದ ಅನುದಾನ ಕೊಡಿಸುವ ಬದಲು ರಾಜಕೀಯ ಮಾಡುತ್ತಿದೆ ಎಂದು ಟೀಕಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News