×
Ad

ತಿಪಟೂರಿನಲ್ಲಿ ಟ್ರ್ಯಾಕ್ಟರ್ ದುರಂತ: ಸಾವಿನ ಸಂಖ್ಯೆ 5ಕ್ಕೆ ಏರಿಕೆ

Update: 2019-05-12 18:04 IST

ತುಮಕೂರು.ಮೇ.12: ಶನಿವಾರ ತಿಪಟೂರು ತಾಲೂಕಿನ ಹತ್ಯಾಳ ನರಸಿಂಹಸ್ವಾಮೀ ಬೆಟ್ಟದ ಬಳಿ ಚಾಲಕನ ನಿಯಂತ್ರಣ ತಪ್ಪಿ ಟ್ರ್ಯಾಕ್ಟರ್ ಮಗಚಿ ಬಿದ್ದಿದ್ದು, ಸಾವನ್ನಪ್ಪಿದವರ ಸಂಖ್ಯೆ 5ಕ್ಕೆ ಏರಿದೆ. ಇಬ್ಬರು ಗಾಯಾಳುಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ನಿಮಾನ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ.

ಘಟನೆಯಲ್ಲಿ ಶನಿವಾರ ಸಂಜೆ ಟ್ರ್ಯಾಕ್ಟರ್ ಚಾಲಕ ಶಿವಲಿಂಗಪ್ಪ(45) ಶಂಕರಮ್ಮ(60) ದೊಡ್ಡಲಿಂಗಯ್ಯ(65) ಸ್ಥಳದಲ್ಲಿಯೇ ಸಾವನ್ನಪ್ಪಿದರೆ, 7 ವರ್ಷದ ಭವನ್ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟಿದ್ದರು. ರವಿವಾರ ಚಿಕಿತ್ಸೆ ಫಲಕಾರಿಯಾಗದೆ ನಾಗರಾಜ್ ಎಂಬುವವರು ಮೃತಪಟ್ಟಿದ್ದಾರೆ. ತೀವ್ರವಾಗಿ ತಲೆಗೆ ಗಾಯವಾಗಿರುವ ಗೌರಮ್ಮ ಮತ್ತು ಇನ್ನೊಂದು ಮಗುವನ್ನು ಬೆಂಗಳೂರಿನ ನಿಮಾನ್ಸ್ ಗೆ ಕಳುಹಿಸಲಾಗಿದೆ.

ಚಿಕ್ಕನಾಯಕನಹಳ್ಳಿ ತಾಲೂಕು ಮಾದಾಪುರ ಗ್ರಾಮದವರಾದ ಎಲ್ಲರೂ ತಮ್ಮ ಬಂಧುಗಳೊಂದಿಗೆ ದೇವಾಲಯಕ್ಕೆ ಆಗಮಿಸಿ, ಹರಕೆ ತೀರಿಸಿದ ನಂತರ ಮನೆಗೆ ವಾಪಾಸ್ಸಾಗುವಾಗ ಈ ದುರ್ಘಟನೆ ನಡೆದಿದೆ. ಎರಡು ಮೃತದೇಹಗಳು ಗುಬ್ಬಿ ಸರಕಾರಿ ಆಸ್ಪತ್ರೆಯ ಶವಾಗಾರದಲ್ಲಿದ್ದರೆ, ಇನ್ನೆರಡು ತಿಪಟೂರು ಆಸ್ಪತ್ರೆಯಲ್ಲಿ ಇಡಲಾಗಿದೆ.

ಗಾಯಾಳುಗಳಲ್ಲಿ ದ್ರಾಕ್ಷಾಯಿಣಿ(60) ಸುಧಾ (25) ಅನಿತಾ (16) ಗಂಗಮ್ಮ (35) ಪದ್ಮ (38) ಲಾವಣ್ಯ (13) ದೀಕ್ಷಾ (5) ಲೋಹಿತ್ (8) ನಯನ (7) ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಎಲ್ಲರೂ ಅಪಾಯದಿಂದ ಪಾರಾಗಿದ್ದಾರೆ ಎಂದು ಜಿಲ್ಲಾಸ್ಪತ್ರೆಯ ಸರ್ಜನ್ ಡಾ.ವೀರಭದ್ರಯ್ಯ ತಿಳಿಸಿದ್ದಾರೆ. ಮೃತರಲ್ಲಿ ಶಂಕರಮ್ಮ ಮತ್ತು ದೊಡ್ಡಲಿಂಗಯ್ಯ ದಂಪತಿಗಳಾಗಿದ್ದು, ಅವರ ಮಗಳು ಸುಧಾ ಅವರ ಸಹ ಗಂಭೀರವಾಗಿ ಗಾಯಗೊಂಡಿದ್ದಾರೆ. 

ರವಿವಾರ ಬೆಳಗ್ಗೆ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದ ಚಿನಾಹಳ್ಳಿ ಶಾಸಕ ಜೆ.ಸಿ.ಮಾಧುಸ್ವಾಮಿ, ದೇವರ ಹರಕೆ ತೀರಿಸಿ ಬರುವಾಗ ಈ ದುರ್ಘಟನೆ ನಡೆದಿರುವುದು ದುರದೃಷ್ಟಕರ. ಒಂದೇ ಕುಟುಂಬದ ಮೂವರು ಮತ್ತು ಇನ್ನೊಂದು ಕುಟುಂಬದ ಇಬ್ಬರು ಮೃತಪಟ್ಟಿದ್ದಾರೆ. ಜಿಲ್ಲಾ ಸರ್ಜನ್ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದು, ಉತ್ತಮ ಚಿಕಿತ್ಸೆ ನೀಡಲು ಸಲಹೆ ನೀಡಿದ್ದೇನೆ. ಮೃತರ ಕುಟುಂಬಗಳಿಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಪರಿಹಾರ ಒದಗಿಸಲು ನಾಳೆ ಸಿ.ಎಂ ಭೇಟಿ ಮಾಡಿ ಚರ್ಚೆ ನಡೆಸಲಿದ್ದೇನೆ. ಮೃತರಿಗೆ ತಲಾ ಐದು ಲಕ್ಷ ಹಾಗೂ ಗಾಯಾಳುಗಳಿಗೆ ತಲಾ 2.50 ಲಕ್ಷ ಪರಿಹಾರ ನೀಡಬೇಕೆಂದು ಮನವಿ ಸಲ್ಲಿಸಲಾಗುವುದು ಎಂದು ಶಾಸಕ ಮಾಧುಸ್ವಾಮಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News