×
Ad

ಉಪ ಚುನಾವಣೆಯಲ್ಲಿ ಗೆದ್ದರೆ ನಮ್ಮ ಸರಕಾರ ರಚನೆ: ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ

Update: 2019-05-12 18:17 IST

ಹುಬ್ಬಳ್ಳಿ, ಮೇ 12: ಕುಂದಗೋಳ ಹಾಗೂ ಚಿಂಚೋಳಿ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಿದರೆ, ಮುಂದೆ ನಾವೇ ಸರಕಾರ ರಚನೆ ಮಾಡುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಹೇಳಿದ್ದಾರೆ.

ರವಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಂದಗೋಳ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಎಸ್.ಐ.ಚಿಕ್ಕನಗೌಡ್ರು ಕನಿಷ್ಠ 25 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸುವ ವಿಶ್ವಾಸವಿದೆ ಎಂದರು.

ಕುಂದಗೋಳ ಕ್ಷೇತ್ರದಲ್ಲಿ ಇವತ್ತು ಪ್ರಚಾರ ಮುಗಿಸಿ, ಚಿಂಚೋಳಿಗೆ ತೆರಳುತ್ತಿದ್ದೇನೆ. ಮೇ 16 ಹಾಗೂ 17ರಂದು ಮತ್ತೆ ಕುಂದಗೋಳದಲ್ಲಿ ಪ್ರಚಾರ ಕೈಗೊಳ್ಳುತ್ತೇನೆ. ಎರಡು ಕ್ಷೇತ್ರಗಳಲ್ಲಿ ನಮ್ಮ ಅಭ್ಯರ್ಥಿಗಳು ಗೆಲ್ಲುವ ಪೂರಕ ವಾತಾವರಣವಿದೆ ಎಂದು ಯಡಿಯೂರಪ್ಪ ಹೇಳಿದರು.

ಸಚಿವ ಡಿ.ಕೆ.ಶಿವಕುಮಾರ್ ಎಷ್ಟೇ ಆಮ್ಡಿಷಗಳನ್ನುವೊಡ್ಡಿದರೂ ನಮ್ಮ ಪಕ್ಷದ ಯಾವುದೇ ಮುಖಂಡರು ಕಾಂಗ್ರೆಸ್‌ಗೆ ಹೋಗುವುದಿಲ್ಲ. ನಾವು ಮೈತ್ರಿ ಸರಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನ ಮಾಡುವುದಿಲ್ಲ. ಕಾಂಗ್ರೆಸ್-ಜೆಡಿಎಸ್ ಮುಖಂಡರು ಆಂತರಿಕವಾಗಿ ಕಚ್ಚಾಡಿಕೊಳ್ಳುತ್ತಿದ್ದಾರೆ. ಅದಕ್ಕೆಲ್ಲ ನಾವು ಹೊಣೆಯಾಗುತ್ತೇವೆಯೇ ಎಂದು ಅವರು ಪ್ರಶ್ನಿಸಿದರು.

ವಿಧಾನಪರಿಷತ್ ಮಾಜಿ ಸದಸ್ಯ ಬಿ.ಜೆ.ಪುಟ್ಟಸ್ವಾಮಿ ಮಾತನಾಡಿ, ರಾಜ್ಯದಲ್ಲಿ ಯಡಿಯೂರಪ್ಪ ಮತ್ತೆ ಮುಖ್ಯಮಂತ್ರಿಯಾಗುವುದನ್ನು ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ. ಮೈತ್ರಿ ಸರಕಾರದ ಕಾರ್ಯವೈಖರಿಯಿಂದ ಆಡಳಿತ ಪಕ್ಷದ ಶಾಸಕರೇ ಬೇಸತ್ತಿದ್ದಾರೆ ಎಂದರು.

ಕಾಂಗ್ರೆಸ್-ಜೆಡಿಎಸ್ ಪಕ್ಷದ ಶಾಸಕರು ಬಿಜೆಪಿಗೆ ಬರಲು ಸರತಿ ಸಾಲಿನಲ್ಲಿ ನಿಂತಿದ್ದಾರೆ. ಮಾಜಿ ಸಚಿವ ರಮೇಶ್ ಜಾರಕಿಹೊಳಿ ಜೊತೆ ಆರು ಮಂದಿ ಶಾಸಕರಿದ್ದಾರೆ. ಮೇ 23ರಂದು ಪ್ರಕಟವಾಗುವ ಲೋಕಸಭೆಯ ಚುನಾವಣಾ ಫಲಿತಾಂಶಕ್ಕಾಗಿ ಎಲ್ಲರೂ ಎದುರು ನೋಡುತ್ತಿದ್ದಾರೆ ಎಂದು ಅವರು ಹೇಳಿದರು.

ರಾಜ್ಯದ ಜನರ ಹಿತಕ್ಕಿಂತ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಗೆ ತಮ್ಮ ಕುಟುಂಬ ಸದಸ್ಯರ ಸೋಲು-ಗೆಲುವಿನ ವಿಷಯವೇ ಪ್ರಮುಖ ವಿಚಾರವಾಗಿದೆ. ಆದುದರಿಂದಲೇ, ಕಾಂಗ್ರೆಸ್-ಜೆಡಿಎಸ್ ನಾಯಕರ ನಡುವೆ ಕಚ್ಚಾಟ ನಡೆಯುತ್ತಿದೆ ಎಂದು ಅವರು ದೂರಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News