×
Ad

ಸುಳ್ಳು ಭಾಷಣ, ವಿದೇಶ ಸುತ್ತಿದ್ದೇ ಮೋದಿಯ ಸಾಧನೆ: ಸಿದ್ದರಾಮಯ್ಯ

Update: 2019-05-12 18:22 IST

ಕಲಬುರಗಿ, ಮೇ 12: ಲೋಕಸಭಾ ಚುನಾವಣಾ ಫಲಿತಾಂಶದ ಬಳಿಕ ರಾಜ್ಯ ರಾಜಕಾರಣದಲ್ಲಿ ಯಾವ ಬದಲಾವಣೆಯೂ ಆಗುವುದಿಲ್ಲ. ಕುಮಾರಸ್ವಾಮಿ ಸಮ್ಮಿಶ್ರ ಸರಕಾರದ ಮುಖ್ಯಮಂತ್ರಿಯಾಗಿ ಮುಂದುವರೆಯಲಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.

ರವಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೇ 23ರ ದಿನ ರಾಷ್ಟ್ರ ರಾಜಕಾರಣದ ಭವಿಷ್ಯ ನಿರ್ಧರಿಸಲಿದೆಯೇ ಹೊರತು, ರಾಜ್ಯಕ್ಕೂ ಅದಕ್ಕೂ ಯಾವುದೇ ಸಂಬಂಧವಿಲ್ಲ ಎಂದರು.

ದೇಶದಲ್ಲಿ ನರೇಂದ್ರ ಮೋದಿಯವರ ವಿರೋಧಿ ಅಲೆಯಿದೆ. ಕಳೆದ ಬಾರಿಯಂತೆ ಬಿಜೆಪಿಯನ್ನು ಒಳಗೊಂಡ ಎನ್‌ಡಿಎ ಮೈತ್ರಿಕೂಟ ಸ್ಪಷ್ಟ ಬಹುಮತ ಪಡೆಯಲಾರದು. ಕಳೆದ ಬಾರಿ ಗೆದ್ದ ಸ್ಥಾನಗಳಲ್ಲಿ ಬಿಜೆಪಿ ಕನಿಷ್ಠ ನೂರು ಸ್ಥಾನಗಳನ್ನು ಕಳೆದುಕೊಳ್ಳಲಿದೆ. ಬಿಜೆಪಿಯ ವಿರುದ್ಧ ಪಕ್ಷಗಳು ಅತೀ ಹೆಚ್ಚು ಸ್ಥಾನಗಳಿಸಿ, ಮೈತ್ರಿ ಸರಕಾರ ರಚಿಸಲಿವೆ ಎಂಬುದು ನನ್ನ ಲೆಕ್ಕಾಚಾರ ಎಂದು ಅವರು ಹೇಳಿದರು.

ಮನಮೋಹನ್‌ಸಿಂಗ್ ಅವರು ಪ್ರಧಾನಿಯಾಗಿದ್ದಾಗ ಆಹಾರ ಭದ್ರತಾ ಕಾಯ್ದೆ ಜಾರಿಗೆ ತಂದು ಬಡ ಜನರಿಗೆ ಕಡಿವೆು ದರದಲ್ಲಿ ಆಹಾರ ಸಿಗುವಂತೆ ಮಾಡಿದರು. ಮಾಹಿತಿ ಹಕ್ಕು, ಶಿಕ್ಷಣದ ಹಕ್ಕು, ಉದ್ಯೋಗ ಖಾತ್ರಿ ಕಾಯ್ದೆ ಜಾರಿಗೊಳಿಸಿ ಸಾಮಾಜಿಕ ಬದಲಾವಣೆ ಕಾರಣರಾದವರು ಕಾಂಗ್ರೆಸ್‌ನವರು. ಆದರೆ, ನೋಟ್ ಬ್ಯಾನ್ ಮಾಡಿ ಜನರನ್ನು ಬೀದಿಗೆ ತಂದವರು ಮೋದಿ ಎಂದು ಅವರು ಟೀಕಿಸಿದರು.

ಜನರ ದುಡ್ಡಿಯಲ್ಲಿ ಪ್ರಧಾನಿ ಮೋದಿ ವಿದೇಶ ಯಾತ್ರೆ ಮಾಡಿಕೊಂಡು ಆರಾಮಾಗಿದ್ದಾರೆ. ಈವರೆಗೆ 1690 ಕೋಟಿ ರೂ.ವೆಚ್ಚದಲ್ಲಿ 84 ಬಾರಿ ವಿದೇಶ ಯಾತ್ರೆ ಮಾಡಿದ್ದು, ಸುಳ್ಳು ಭಾಷಣ, ವಿದೇಶ ಸುತ್ತಿದ್ದೇ ಅವರ ಸಾಧನೆಗಳಾಗಿವೆ ಎಂದು ಸಿದ್ದರಾಮಯ್ಯ ದೂರಿದರು.

ಅಭಿವೃದ್ಧಿ ಮತ್ತು ಸೌಹಾರ್ದತೆಯ ಅರ್ಥವೇ ಗೊತ್ತಿರದ ಬಿಜೆಪಿಯನ್ನು ಈ ಭಾರಿ ಜನ ತಿರಸ್ಕರಿಸಲಿದ್ದಾರೆ ಎಂಬ ಭರವಸೆಯಿದೆ. ಬಿಜೆಪಿಯವರು ಕಸರತ್ತು ನಡೆಸಿ ಉಮೇಶ್ ಜಾಧವ್ ಅವರನ್ನು ಸೆಳೆದುಕೊಂಡಿರಬಹುದು. ಆದರೆ, ಉಳಿದ ಯಾವೊಬ್ಬ ಶಾಸಕನೂ ಪಕ್ಷ ಬಿಟ್ಟು ಹೋಗುವುದಿಲ್ಲ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ರಮೇಶ್ ಜಾರಕಿಹೊಳಿ, ನಾಗೇಂದ್ರ, ಮಹೇಶ್ ಕಮಟಳ್ಳಿ ಇವರೆಲ್ಲ ಪಕ್ಷದಲ್ಲೇ ಮುಂದುವರೆಯುತ್ತಾರೆಂಬ ಭರವಸೆಯಿದೆ. ಪಕ್ಷದಲ್ಲಿ ಬಗೆಹರಿಸಲಾರದ ಯಾವುದೇ ಸಮಸ್ಯೆಗಳಿಲ್ಲ, ಎಲ್ಲವೂ ಸರಿಯಾಗಿದೆ ಸಿದ್ದರಾಮಯ್ಯ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News