ಬಾಡಿಗೆ ಮನೆಯಲ್ಲಿ ಗುಲ್ಬರ್ಗಾ ವಿವಿ ಬಿಕಾಂ ಪರೀಕ್ಷೆ: ವಿದ್ಯಾರ್ಥಿಗಳು ಪೊಲೀಸ್ ವಶಕ್ಕೆ
ರಾಯಚೂರು, ಮೇ 12: ಗುಲ್ಬರ್ಗಾ ವಿ.ವಿ ಬಿಕಾಂ ವಿದ್ಯಾರ್ಥಿಗಳು ಬಾಡಿಗೆ ಮನೆಯೊಂದರಲ್ಲಿ ಕುಳಿತು ಅಕ್ರಮವಾಗಿ ಪರೀಕ್ಷೆ ಬರೆಯುತ್ತಿರುವುದು ಬಯಲಾಗಿದ್ದು, ವಿದ್ಯಾರ್ಥಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದು ವಿಚಾರಣೆ ಮುಂದುವರಿಸಿದ್ದಾರೆ.
ಮೇ 8 ರಿಂದ ಪದವಿ ಪರೀಕ್ಷೆಗಳು ಆರಂಭವಾಗಿದ್ದು, ಪರೀಕ್ಷಾ ಕೇಂದ್ರಕ್ಕೆ ತೆರಳದೆ ಮನೆಯಲ್ಲೆ ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ. ಪರೀಕ್ಷಾ ಕೇಂದ್ರದ ಸಿಬ್ಬಂದಿಯೇ ಈ ದಂಧೆಗೆ ಬೆಂಬಲ ನೀಡಿದ್ದಾರೆ ಎನ್ನಲಾಗಿದ್ದು, ನಗರದ ನಗರದ ಐಡಿಎಸ್ ಬಡಾವಣೆಯ ಬಾಡಿಗೆ ಮನೆಯಲ್ಲಿ ಬರೆಯುತ್ತಿರುವ ಮಾಹಿತಿ ಆಧಾರದ ಮೇಲೆ ಪರೀಕ್ಷಾ ಜಾಗೃತ ದಳದ ಅಧಿಕಾರಿಗಳು ದಾಳಿ ಮಾಡಿ ಅಕ್ರಮ ಬಯಲಿಗೆಳೆದಿದ್ದಾರೆ.
ಬಿ.ಕಾಂ ಎರಡನೆ ಸೆಮಿಸ್ಟರ್ ಅರ್ಥಶಾಸ್ತ್ರ ಹಾಗೂ ಇಂಗ್ಲಿಷ್ ವಿಷಯ ಪರೀಕ್ಷೆ ನಡೆಯುತ್ತಿದ್ದು, ವಿವಿಧ ಕಾಲೇಜಿನ ಸುಮಾರು 20ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆ ಬರೆಯುವ ವೇಳೆ ಸಿಕ್ಕಿಬಿದ್ದಿದ್ದಾರೆ. ವಿವೇಕಾನಂದ ಬಿಎಡ್ ಕಾಲೇಜಿನ ಪರೀಕ್ಷಾ ಕೇಂದ್ರದ ವಿದ್ಯಾರ್ಥಿಗಳೇ ಹೆಚ್ಚಾಗಿ ಇಲ್ಲಿ ಪರೀಕ್ಷೆ ಬರೆಯುತ್ತಿದ್ದಾರೆಂಬುದು ಗೊತ್ತಾಗಿದೆ.
ವಿವಿಧ ಕಾಲೇಜಿನ ಪರೀಕ್ಷಾ ಕೇಂದ್ರಗಳಲ್ಲಿ ಬರೆಯಬೇಕಾಗಿದ್ದ ವಿದ್ಯಾರ್ಥಿಗಳು ಬಾಡಿಗೆ ಕಟ್ಟಡದಲ್ಲಿ ಬರೆಯುತ್ತಿದ್ದಾರೆ. ಖಚಿತ ಮಾಹಿತಿ ಆಧಾರದ ಮೇಲೆ ದಾಳಿ ಮಾಡಿದ್ದು, ಈ ರೀತಿಯಾಗಿ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಟ್ಟವರು ಯಾರು ಎಂದು ಗೊತ್ತಾಗಿಲ್ಲ.
ಈ ಸಂಬಂಧ ಸಮಗ್ರ ತನಿಖೆ ನಡೆಸಲಿದ್ದು, ಸದ್ಯಕ್ಕೆ ವಿದ್ಯಾರ್ಥಿಗಳ ಉತ್ತರ ಪತ್ರಿಕೆ, ಪ್ರವೇಶ ಪತ್ರ, ನಕಲು ಮಾಡಲು ಬಳಕೆ ಮಾಡುತ್ತಿದ್ದ ಪುಸ್ತಕಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಸಂಬಂಧ ಸದರ ಬಝಾರ್ ಠಾಣೆ ಪೊಲೀಸರು ಮೊಕದ್ದಮೆ ದಾಖಲಿಸಿಕೊಂಡಿದ್ದು ತನಿಖೆ ಕೈಗೊಂಡಿದ್ದಾರೆ.