ಗೋಡ್ಸೆ ಅನುಯಾಯಿಗಳ ದೇಶಪ್ರೇಮದ ಪ್ರಮಾಣ ಪತ್ರ ಅಗತ್ಯವಿಲ್ಲ: ಮಾಜಿ ಸಿಎಂ ಸಿದ್ದರಾಮಯ್ಯ

Update: 2019-05-12 14:52 GMT

ಕಲಬುರಗಿ, ಮೇ 12: ದೇಶಪ್ರೇಮಿ, ರಾಷ್ಟ್ರಪಿತ ಮಹಾತ್ಮ ಗಾಂಧಿಯನ್ನು ಕೊಂದ ಆರೆಸ್ಸೆಸ್ ನ ನಾಥೂರಾಮ್ ಗೋಡ್ಸೆಯ ಅನುಯಾಯಿಗಳು ನೀಡುವ ದೇಶಪ್ರೇಮದ ಸರ್ಟಿಫಿಕೇಟ್ ಯಾರಿಗೆ ಬೇಕಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

ರವಿವಾರ ಚಿಂಚೋಳಿ ವಿಧಾನಸಭೆ ಕ್ಷೇತ್ರದ ಕೊಡದೂರಿನಲ್ಲಿ ಆಯೋಜಿಸಿದ್ದ ಚುನಾವಣಾ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ದೇಶದ ಸ್ವಾತಂತ್ರಕ್ಕಾಗಿ ಹೋರಾಡಿ ಜೈಲು ಸೇರಿದ ಪಕ್ಷದವರಿಗೆ ಭ್ರಷ್ಟಾಚಾರ ಮಾಡಿ ಜೈಲು ಸೇರಿದ ಪಕ್ಷದವರು, ದೇಶಪ್ರೇಮದ ಸರ್ಟಿಫಿಕೇಟ್ ನೀಡುತ್ತಿದ್ದಾರೆ. ಎಂತಹ ವಿಪರ್ಯಾಸವಲ್ಲವೇ ಎಂದರು.

ಮಹಾತ್ಮಗಾಂಧಿ, ಇಂದಿರಾಗಾಂಧಿ, ರಾಜೀವ್ ಗಾಂಧಿ ದೇಶಕ್ಕಾಗಿ ಪ್ರಾಣಾರ್ಪಣೆಗೈದರು. ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಒಬ್ಬನೇ ಒಬ್ಬ ಬಿಜೆಪಿಯವನನ್ನು ತೋರಿಸಿ. ಉಳಿದವರ ದೇಶಪ್ರೇಮವನ್ನು ಪ್ರಶ್ನಿಸುವ ಬಿಜೆಪಿಯವರೇ ನಿಜವಾದ ದೇಶ ಪ್ರೇಮಿಗಳಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಮಹಾತ್ಮಗಾಂಧಿ, ಜವಾಹರ್‌ಲಾಲ್ ನೆಹರು, ಸರ್ದಾರ್ ವಲ್ಲಭಭಾಯಿ ಪಟೇಲ್, ಮೌಲಾನಾ ಆಝಾದ್ ಇವರೆಲ್ಲ ಸ್ವಾತಂತ್ರ ಹೋರಾಟದಲ್ಲಿ ಭಾಗವಹಿಸಿ, ವರ್ಷಗಟ್ಟಲೆ ಜೈಲುವಾಸ ಅನುಭವಿಸಿದರು. ಇವರಂತೆ, ಸ್ವಾತಂತ್ರ ಹೋರಾಟದಲ್ಲಿ ಭಾಗಿಯಾಗಿ ಜೈಲು ಸೇರಿ ಬಂದ ಒಬ್ಬನೇ ಒಬ್ಬ ಆರೆಸೆಸ್ಸ್ ಮುಖಂಡನನ್ನು ತೋರಿಸಿ. ಆಮೇಲೆ ಬಿಜೆಪಿಯವರ ದೇಶಪ್ರೇಮವನ್ನು ಒಪ್ಪೋಣ ಎಂದು ಅವರು ಹೇಳಿದರು.

ಯಡಿಯೂರಪ್ಪ, ಕಟ್ಟಾಸುಬ್ರಹ್ಮಣ್ಯ ನಾಯ್ಡು, ಜನಾರ್ದನ ರೆಡ್ಡಿ, ಅಮಿತ್ ಶಾ ಇವರೆಲ್ಲಾ ಜೈಲಿಗೇನು ಬೀಗತನಾ ಮಾಡಲು ಹೋಗಿದ್ರಾ ? ಇಂತಹ ಬಿಜೆಪಿಗೆ ಮತ ಹಾಕಬೇಕಾ ? ತನ್ನನ್ನು ದೇಶ ಭಕ್ತ ಎಂದು ಹೇಳಿಕೊಳ್ಳುವ ನರೇಂದ್ರಮೋದಿ, ಜಾತಿ, ಧರ್ಮಗಳ ಆಧಾರದ ಮೇಲೆ ದೇಶವನ್ನು ಒಡೆಯುತ್ತಿರುವ ನಿಜವಾದ ದೇಶದ್ರೋಹಿ ಎಂದು ಸಿದ್ದರಾಮಯ್ಯ ಟೀಕಿಸಿದರು.

ಆಸ್ಪತ್ರೆಯಲ್ಲಿ ವೈದ್ಯನಾಗಿದ್ದ ಉಮೇಶ್ ಜಾಧವ್‌ನನ್ನು ಕರೆದುಕೊಂಡು ಬಂದವರು ಯಾರು ? ಈಗ ಬಿಜೆಪಿಗೆ ಹೋಗಿ ತನ್ನ ಮಗನಿಗೆ ಮತ ಕೇಳುತ್ತಿದ್ದಾರೆ. ಇಂತಹವನಿಗೆ ಊರಿನ ಒಳಗೆ ಸೇರಿಸಬಾರದು. 50 ಕೋಟಿ ರೂ.ಗಳಿಗೆ ತನ್ನನ್ನೇ ಮಾರಾಟ ಮಾಡಿಕೊಂಡಿದ್ದಾನೆ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ ಎಂದು ಅವರು ಹೇಳಿದರು.

ದನಕರುಗಳು ಮಾರಾಟವಾಗುತ್ತವೆ ಎಂದು ಕೇಳಿದ್ದೇವೆ. ಆದರೆ, ಇಲ್ಲಿ ಶಾಸಕನೇ ಮಾರಾಟವಾಗಿದ್ದಾನೆ. ಉಮೇಶ್ ಜಾಧವ್ ಪ್ಯಾಕೇಜ್ ಡೀಲ್ ಆಗಿದ್ದಾನೆ. 50 ಕೋಟಿ ರೂ.ತೆಗೆದುಕೊಂಡು ಕಾಂಗ್ರೆಸ್ ಬಿಟ್ಟು ಲೋಕಸಭೆಗೆ ಟಿಕೆಟ್ ಪಡೆದಿದ್ದಾನೆ. ಉಪ ಚುನಾವಣೆಯಲ್ಲಿ ತನ್ನ ಮಗನಿಗೆ ಟಿಕೆಟ್ ಕೊಡಿಸಿದ್ದಾನೆ. ಆದರೆ, ಈ ಚುನಾವಣೆಯಲ್ಲಿ ಉಮೇಶ್ ಜಾಧವ್ ಮಗ ಸೋಲೋದು ನೂರಕ್ಕೆ ನೂರರಷ್ಟು ಸತ್ಯ ಎಂದು ಸಿದ್ದರಾಮಯ್ಯ ಹೇಳಿದರು.

ವಿಶ್ವನಾಥ್ ಬಗ್ಗೆ ಸಮನ್ವಯ ಸಮಿತಿಯಲ್ಲಿ ಚರ್ಚೆ: ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಲಿ ಎಂದು ಕೆಲವರು ಚಮಚಾಗಿರಿ ಮಾಡುತ್ತಿದ್ದಾರೆ. ಐದು ವರ್ಷ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಏನು ಮಾಡಿದರು ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ನೀಡಿರುವ ಹೇಳಿಕೆ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಆತ ನನ್ನ ಬಗ್ಗೆ ಹೊಟ್ಟೆ ಕಿಚ್ಚಿನಿಂದ ಮಾತನಾಡುತ್ತಿದ್ದಾನೆ. ಈ ಬಗ್ಗೆ ಸಮನ್ವಯ ಸಮಿತಿ ಸಭೆಯಲ್ಲಿ ಚರ್ಚೆ ಮಾಡುತ್ತೇನೆ. ಬಹಿರಂಗವಾಗಿ ಈ ವಿಚಾರಗಳನ್ನು ಚರ್ಚಿಸಲ್ಲ ಎಂದರು.

ಭಾರಿ ಬಹುಮತ ಹೊಂದಿದ್ದ ಎಸ್.ಎಂ.ಕೃಷ್ಣ ಸರಕಾರದಲ್ಲಿ ವಿಶ್ವನಾಥ್ ಮಂತ್ರಿಯಾಗಿದ್ದ. ನಂತರ, ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ 65 ಸ್ಥಾನಗಳಿಗೆ ಬಂದಿದ್ದು ಏಕೆ ? ಆತನ ಮಾತಿಗೆಲ್ಲ ಕಿಮ್ಮತ್ತು ಕೊಡುವ ಅಗತ್ಯವಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News