ಉಪ ಉಪಚುನಾವಣೆ ಗೆದ್ದು ಸರಕಾರವನ್ನು ಸುಭದ್ರಗೊಳಿಸಲಿದ್ದೇವೆ: ಎಚ್.ಕೆ.ಪಾಟೀಲ್

Update: 2019-05-12 15:08 GMT

ಕುಂದಗೋಳ ಮೇ 12: ಕುಂದಗೋಳ ಹಾಗೂ ಚಿಂಚೋಳಿ ಉಪಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಮೈತ್ರಿ ಪಕ್ಷಗಳ ಅಭ್ಯರ್ಥಿಗಳು ಗೆಲುವು ಸಾಧಿಸುವ ಮೂಲಕ ಸರಕಾರವನ್ನು ಮತ್ತಷ್ಟು ಸುಭದ್ರಗೊಳಿಸಲಿದ್ದಾರೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಚ್.ಕೆ ಪಾಟೀಲ್ ಹೇಳಿದ್ದಾರೆ.

ಕುಂದಗೋಳ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯ ಪರವಾಗಿ ಪಶುಪತಿಹಾಳ ಗ್ರಾಮದಲ್ಲಿ ಆಯೋಜಿಸಿದ್ದ ಚುನಾವಣಾ ಸಭೆಯಲ್ಲಿ ಮಾತನಾಡಿದ ಅವರು, ಉಪಚುನಾವಣೆ ನಡೆಯುತ್ತಿರುವ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ. ಈ ಮೂಲಕ ರಾಜ್ಯ ಸರಕಾರ ಮತ್ತಷ್ಟು ಸುಭದ್ರಗೊಳ್ಳಲಿದೆ ಎಂದರು.

ಕಾಂಗ್ರೆಸ್ ನೇತೃತ್ವದ ಸರಕಾರ ರಾಜ್ಯದ ಹಾಗೂ ದೇಶದ ಅಭಿವೃದ್ದಿಗೆ ಸಾಕಷ್ಟು ಕೊಡುಗೆಗಳನ್ನು ನೀಡಿದೆ. ಸಿದ್ದರಾಮಯ್ಯ ನೇತೃತ್ವದ ಸರಕಾರ ನೀಡಿದ ಅನ್ನಭಾಗ್ಯ, ಶೌಚಾಲಯ ನಿರ್ಮಾಣ ಯೋಜನೆ ಎಲ್ಲವೂ ಕೂಡಾ ಗ್ರಾಮೀಣ ಮಟ್ಟದ ಜನರ ಜೀವನ ಸುಧಾರಿಸುವಲ್ಲಿ ಪ್ರಮುಖ ಪಾತ್ರವಹಿಸಿವೆ ಎಂದು ಅವರು ಹೇಳಿದರು.

ಕುಂದಗೋಳ ತಾಲೂಕು ಹಾಗೂ ಧಾರವಾಡ ಜಿಲ್ಲೆಯಲ್ಲಿ ಕುಡಿಯುವ ನೀರಿನ ಬಹಳ ತೊಂದರೆ ಇರುವುದನ್ನು ಬಹಳಷ್ಟು ಜನರು ನನ್ನ ಗಮನಕ್ಕೆ ತಂದಿದ್ದಾರೆ. ಗದಗ ಜಿಲ್ಲೆಯಲ್ಲಿ ಕೈಗೊಂಡಿರುವಂತೆ ನದಿ ಮೂಲದಿಂದ ಜನರಿಗೆ ಕುಡಿಯುವ ನೀರು ಸರಬರಾಜು ಯೋಜನೆಯ ರೀತಿಯಲ್ಲಿಯೇ ಧಾರವಾಡ ಜಿಲ್ಲೆಯಲ್ಲಿಯೂ ಹೊಸ ಯೋಜನೆಯನ್ನು ಪ್ರಾರಂಭಿಸುವ ಭರವಸೆಯನ್ನು ಅವರು ನೀಡಿದರು. ಗ್ರಾಮಪಂಚಾಯತ್ ಚುನಾವಣೆಗಳಲ್ಲಿ ಮಹಿಳೆಯರು ಸೇರಿದಂತೆ ಎಲ್ಲಾ ವರ್ಗದ ಜನರೂ ಕೂಡಾ ಭಾಗವಸುವಂತಹ ಕ್ರಾಂತಿಕಾರಕ ಕಾರ್ಯಕ್ರಮಗಳನ್ನು ನೀಡಿದ್ದು, ಕಾಂಗ್ರೆಸ್ ರಕ್ತರಹಿತ ರಾಜಕೀಯ ಮೌನ ಕ್ರಾಂತಿಯನ್ನು ಹಾಗೂ ಜನಪರ ಶಾಸನಗಳನ್ನು ಕಾಂಗ್ರೆಸ್ ಜಾರಿಗೆ ತಂದಿದೆ ಎಂದು ಅವರು ಹೇಳಿದರು.

ರಾಜೀವ್ ಗಾಂಧಿ ಕಾಲದಲ್ಲಿ ಜಾರಿಗೊಂಡ ಶಾಸನಗಳು ಇಂದು ಹಲವಾರು ಕೆಳಸ್ತರದ ಜನರು ಚುನಾವಣೆಯಲ್ಲಿ ಪಾಲ್ಗೊಳ್ಳುವಂತೆ ಮಾಡಿದೆ. ದೇಶದ ಕೆಳಸ್ತರದ ಜನರ ಅಭಿವೃದ್ದಿಗಾಗಿ ಶ್ರಮಿಸುವುದು ಕಾಂಗ್ರೆಸ್‌ನ ಮೂಲಗುರಿ. ಇಂತಹ ಮೂಲ ಅಂಶಗಳ ಮೇಲೆ ಆಡಳಿತ ನೀಡುತ್ತಿರುವ ಪಕ್ಷದ ಅಭ್ಯರ್ಥಿಯನ್ನು ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸಬೇಕಾಗಿದೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News