ಮರಕ್ಕೆ ಕಾರು ಢಿಕ್ಕಿ: ಯುವಕ ಸಾವು, ಮೂವರಿಗೆ ಗಾಯ
ಚಿಕ್ಕಮಗಳೂರು, ಮೇ 12: ನಾಲ್ವರು ಯುವಕರಿದ್ದ ಹೊಸ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಢಿಕ್ಕಿ ಹೊಡೆದ ಪರಿಣಾಮ ಓರ್ವ ಯುವಕ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ರವಿವಾರ ಸಂಜೆ ವೇಳೆ ತಾಲೂಕಿನ ಉದ್ದೇಬೋರನಹಳ್ಳಿ-ಹಿರೇಗೌಜ ಗ್ರಾಮಗಳ ನಡುವಿನ ತಿರುವಿನಲ್ಲಿ ಸಂಭವಿಸಿದೆ.
ಮೃತ ಯುವಕನನ್ನು ಚಿಕ್ಕಮಗಳೂರು ನಗರದ ಕೋಟೆ ಬಡಾವಣೆ ನಿವಾಸಿ ಕಿಶೋರ್ (22) ಎಂದು ಗುರುತಿಸಲಾಗಿದ್ದು, ಮೂವರು ಯುವಕರು ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗಾಯಾಳುಗಳಿಗೆ ನಗರದ ಮಲ್ಲೇಗೌಡ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ.
ಘಟನೆ ವಿವರ: ಚಿಕ್ಕಮಗಳೂರು ನಗರದ ಬಟ್ಟೆ ವ್ಯಾಪಾರಿ ಲೋಕೇಶ್ ಎಂಬವರು ಎರಡು ದಿನಗಳ ಹಿಂದೆ ಮಹೇಂದ್ರ ಕಂಪೆನಿಯ ಹೊಸ ಕಾರೊಂದನ್ನು ಖರೀದಿಸಿದ್ದರು. ಈ ಹಿನ್ನೆಲೆಯಲ್ಲಿ ಲೋಕೇಶ್ ಅವರ ಮಗನ ಮೂವರು ಸ್ನೇಹಿತರು ಪಾರ್ಟಿ ನೀಡುವಂತೆ ಕೇಳಿದ್ದರಿಂದ ಲೋಕೇಶ್ ರ ಮಗ ಕೋಟೆ ನಿವಾಸಿ ಕಿಶೋರ್, ಮತ್ತಿಬ್ಬರು ಸ್ನೇಹಿತರೊಂದಿಗೆ ತಂದೆಯ ಕಾರಿನಲ್ಲಿ ರವಿವಾರ ಸಂಜೆ ವೇಳೆಗೆ ಚಿಕ್ಕಮಗಳೂರಿನಿಂದ ಸಖರಾಯಪಟ್ಟಣದತ್ತ ಪಾರ್ಟಿ ಮಾಡಲು ತೆರಳಿದ್ದಾರೆ. ನಾಲ್ವರು ಯುವಕರು ಹೊಸ ಕಾರಿನಲ್ಲಿ ತೆರಳುತ್ತಿದ್ದ ವೇಳೆ ಚಿಕ್ಕಮಗಳೂರು ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿರುವ ಉದ್ದೇಬೋರನಹಳ್ಳಿ ಹಿರೇಗೌಜ ಗ್ರಾಮಗಳ ನಡುವೆ ಬರುವ ತಿರುವೊಂದರಲ್ಲಿ ವೇಗವಾಗಿ ಹೋಗುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಢಿಕ್ಕಿ ಹೊಡೆದಿದೆ ಎಂದು ತಿಳಿದು ಬಂದಿದೆ.
ಘಟನೆಯಲ್ಲಿ ಕಾರು ಮಾಲಕನ ಸ್ನೇಹಿತ, ನಗರದ ಕೋಟೆ ಬಡಾವಣೆ ನಿವಾಸಿ ಕಿಶೋರ್ ಸ್ಥಳದಲ್ಲೇ ಮೃತಪಟ್ಟಿದ್ದು, ಉಳಿದ ಮೂವರು ತೀವ್ರವಾಗಿ ಗಾಯಗೊಂಡಿದ್ದಾರೆ. ಘಟನೆಯಲ್ಲಿ ಹೊಸ ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು, ಸ್ಥಳೀಯರ ಮಹಿತಿ ಮೇರೆಗೆ ಚಿಕ್ಕಮಗಳೂರು ನಗರ ಠಾಣೆಯ ಪೊಲೀಸರು ಸ್ಥಳಕ್ಕೆ ತೆರಳಿ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆಂದು ತಿಳಿದುಬಂದಿದೆ.