ಮೈತ್ರಿ ಸರಕಾರ ಬೀಳದಿದ್ದರೆ ಬಿಎಸ್‌ವೈ ನಿವೃತ್ತಿ ಘೋಷಿಸುವರೇ: ಝಮೀರ್ ಅಹ್ಮದ್ ಸವಾಲು
ಹುಬ್ಬಳ್ಳಿ, ಮೇ 12: ಬಿಜೆಪಿಯರಿಗೆ ಮೇ 25ರ ವರೆಗೆ ಗಡುವು ನೀಡುತ್ತೇನೆ. ಒಂದು ವೇಳೆ ಮೈತ್ರಿ ಸರಕಾರ ಬಿದ್ದರೆ, ನಾನು ರಾಜಕೀಯ ನಿವೃತ್ತಿ ಘೋಷಿಸುತ್ತೇನೆ. ಇಲ್ಲದಿದ್ದರೆ, ಯಡಿಯೂರಪ್ಪನಿವೃತ್ತಿ ತೆಗೆದುಕೊಳ್ಳಲು ತಯಾರಿದ್ದಾರಾ? ಎಂದು ಸಚಿವ ಬಿ.ಝಡ್.ಝಮೀರ್ ಅಹ್ಮದ್ ಇಂದಿಲ್ಲಿ ಸವಾಲು ಹಾಕಿದ್ದಾರೆ.
ರವಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಬಿಜೆಪಿಯ 9 ರಿಂದ 10 ಮಂದಿ ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ. ಆದರೆ, ಅವರನ್ನು ಕಾಂಗ್ರೆಸ್‌ಗೆ ಕರೆತರಲು ನಮಗೆ ಇಚ್ಚೆ ಇಲ್ಲ. ಹೀಗಿರುವಾಗ ಮೈತ್ರಿ ಸರಕಾರ ಮೇ 23ರ ಬಳಿಕ ಹೇಗೆ ಬೀಳುತ್ತದೆ ಪ್ರಶ್ನಿಸಿದರು.
ಬಿಜೆಪಿಯವರು ಮೊದಲು ತಮ್ಮ ಸಂಪರ್ಕದಲ್ಲಿರುವ ಕಾಂಗ್ರೆಸ್-ಜೆಡಿಎಸ್‌ನ 20 ಶಾಸಕರ ಹೆಸರು ಬಹಿರಂಗಪಡಿಸಲಿ. ಬಳಿಕ, ನಾವು ಬಿಜೆಪಿ ಶಾಸಕರ ಹೆಸರು ಹೇಳುತ್ತೇವೆ. ಮತ್ತೆ ಸಿಎಂ ಆಗುತ್ತೇನೆಂದು ಬಿಎಸ್‌ವೈ ಹಗಲುಗನಸು ಕಾಣುತ್ತಿದ್ದು, ಅದು ಎಂದಿಗೂ ನನಸಾಗುವುದಿಲ್ಲ ಎಂದು ಝಮೀರ್ ಅಹ್ಮದ್ ಟೀಕಿಸಿದರು.
2008ರಲ್ಲಿ ಜೆಡಿಎಸ್-ಬಿಜೆಪಿ ಸಮ್ಮಿಶ್ರ ಸರಕಾರವಿದ್ದಾಗ, ಕೊಟ್ಟ ಮಾತಿನಂತೆ ಕುಮಾರಸ್ವಾಮಿ ಬಿಜೆಪಿಗೆ ಅಧಿಕಾರ ಹಸ್ತಾಂತರಿಸಿದ್ದರೆ ಇಂದು ರಾಜ್ಯದಲ್ಲಿ ಬಿಜೆಪಿ ಇಷ್ಟೊಂದು ಬೆಳೆಯುತ್ತಿರಲಿಲ್ಲ ಎಂದ ಅವರು, ಹೈಕಮಾಂಡ್ ಆದೇಶದಂತೆ, ಕುಮಾರಸ್ವಾಮಿ ಸಿಎಂ ಆಗಿ ಐದು ವರ್ಷ ಪೂರೈಸಲಿದ್ದಾರೆ.
2022ರ ವಿಧಾನಸಭೆ ಚುನಾವಣೆಯಲ್ಲಿ ಸಿದ್ದರಾಮಯ್ಯನವರು ಮತ್ತೆ ಮುಖ್ಯಮಂತ್ರಿ ಆಗಬೇಕು ಎಂದು ರಾಜ್ಯದ ಜನ ಬಯಸುತ್ತಿದ್ದಾರೆ. ನಾನೂ ಸೇರಿದಂತೆ, ಹಲವು ಶಾಸಕರ ಅಭಿಪ್ರಾಯವೂ ಇದೇ ಆಗಿದೆ ಎಂದು ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಉತ್ತರ ನೀಡಿದರು.
‘ಕುಂದಗೋಳ ಉಪ ಚುನಾವಣೆಯಲ್ಲಿ ಶಾಸಕ ರೇಣುಕಾಚಾರ್ಯ ಅವರಿಗೆ 500 ಓಟ್ ಹಾಕಿಸುವ ತಾಕತ್ತಿಲ್ಲ. ಅವರೇನೆಂದು ರಾಜ್ಯದ ಜನರಿಗೆ ಗೊತ್ತಿದೆ. ಇಂತಹ ವ್ಯಕ್ತಿ ಮಾಧ್ಯಮಗಳಲ್ಲಿ ಸುದ್ಧಿಯಾಗಬೇಕೆಂದು ಮನಸ್ಸಿಗೆ ಬಂದಂತೆ ಮಾತನಾಡುತ್ತಿದ್ದು, ಇವರಿಗೆ ನಾವು ಪ್ರತಿಕ್ರಿಯೆ ನೀಡಬೇಕೇ?
-ಝಮೀರ್ ಅಹ್ಮದ್, ಖಾನ್ ಆಹಾರ ಸಚಿವ