ಮಹಿಳೆಯ ಸಾಮೂಹಿಕ ಅತ್ಯಾಚಾರ ಪ್ರಕರಣ: ಆರೋಪಿಗಳ ಪತ್ತೆಗೆ ಪೊಲೀಸರಿಂದ ತನಿಖೆ ಚುರುಕು
ಮೈಸೂರು,ಮೇ.12: ಮೈಸೂರಿನ ಶ್ರೀರಾಂಪುರ ರಿಂಗ್ ರಸ್ತೆ ಬಳಿಯ ಲಿಂಗಾಂಬುದಿ ಪಾಳ್ಯದ ಬಳಿ ಮಹಿಳೆ ಮೇಲೆ ನಡೆದ ಗ್ಯಾಂಗ್ ರೇಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದು, ವಾಹನಗಳ ತಪಾಸಣೆ, ಅನುಮಾನಾಸ್ಪದವಾಗಿ ಓಡಾಡುವವರ ಮೇಲೆ ಪೊಲೀಸರು ವಿಶೇಷ ನಿಗಾ ವಹಿಸಿದ್ದಾರೆ.
ಈಗಾಗಲೇ ಪ್ರಕರಣದ ತನಿಖೆಗಾಗಿ 8 ಅಧಿಕಾರಿಗಳ ತಂಡ ರಚೆನ ಮಾಡಲಾಗಿದ್ದು, ವಿವಿಧ ಆಯಾಮಗಳ ಮೂಲಕ ಪ್ರಕರಣದ ತನಿಖೆ ನಡೆಸಲಾಗುತ್ತಿದೆ. ಇನ್ನೊಂದೆರೆಡು ದಿನಗಳಲ್ಲಿ ಪೊಲೀಸರು ಪ್ರಕರಣದ ಬಗ್ಗೆ ಮಹತ್ವದ ಮಾಹಿತಿ ಪಡೆದುಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ.
ಘಟನೆ ಕತ್ತಲಲ್ಲಿ ನಡೆದಿರುವುದರಿಂದ ಹಾಗೂ ಈ ಪ್ರದೇಶದಲ್ಲಿ ಸಿಸಿಟಿವಿ ಕೊರತೆ ಹಿನ್ನಲೆ ಪೊಲೀಸರಿಗೆ ಆರೋಪಿಗಳ ಪತ್ತೆ ಹಚ್ಚಲು ತಲೆನೋವು ಹೆಚ್ಚಾಗಿದ್ದು, ಈ ಹಿನ್ನಲೆಯಲ್ಲಿ ವೈಜ್ಞಾನಿಕವಾಗಿ ತನಿಖೆ ಆರಂಭಿಸಿದ್ದಾರೆ. ತನಿಖೆಗಾಗಿ ಮೊಬೈಲ್ ಟವರ್ ಸಿಗ್ನಲ್ ಮಾಹಿತಿಗೆ ತನಿಖಾಧಿಕಾರಿಗಳು ಮೊರೆ ಹೋಗಿದ್ದು, ಪ್ರಕರಣ ನಡೆದ ದಿನ ಘಟನಾ ಸ್ಥಳದಲ್ಲಿ ಯಾವ್ಯಾವ ಮೊಬೈಲ್ ಸಂಖ್ಯೆಗಳು ಚಾಲ್ತಿಯಲ್ಲಿದ್ದವು ಎಂಬುದರ ಮೇಲೆ ಮಾಹಿತಿ ಕಲೆ ಹಾಕುತ್ತಿದ್ದಾರೆ. ಈಗಾಗಲೇ ಪೊಲೀಸರಿಗೆ ಮಹತ್ವದ ಮಾಹಿತಿ ಕೂಡ ಲಭ್ಯವಾಗಿದೆ ಎಂದು ಪೊಲೀಸ್ ಇಲಾಖೆ ಹೇಳುತ್ತಿದೆ.
ಪೊಲೀಸರು ಈಗಾಗಲೇ ಲಿಂಗಾಂಬುಧಿ ಪಾಳ್ಯದ ಮುಖ್ಯ ರಸ್ತೆಯಲ್ಲಿ ಸಂಚರಿಸುವ ವಾಹನಗಳ ಮಾದರಿ ಪರಿಶೀಲನೆ ನಡೆಸುತ್ತಿದ್ದು, ವಾಹನಗಳ ಸಂಖ್ಯೆಯನ್ನು ಕೂಡ ಪತ್ತೆ ಮಾಡುತ್ತಿದ್ದಾರೆ. ಇದಕ್ಕೆ ನೆರವಾಗುವಂತೆ ಕೆಲಸ ನಿವಾಸಿಗಳ ಮನೆಗೆ ಅಳವಡಿಸಲಾಗಿರುವ ಸಿಸಿಟಿವಿ ಫೂಟೇಜ್ ಅನ್ನೂ ಸಹ ಪರಿಶೀಲನೆಗೊಳಪಡಿಸಿದ್ದಾರೆ.
ಗ್ಯಾಂಗ್ ರೇಪ್ ಪ್ರಕರಣ ನಡೆದ ಹಿನ್ನಲೆ ಸುತ್ತಮುತ್ತಲಿನ ಗ್ರಾಮಗಳ ರೌಡಿ ಶೀಟರ್ ಗಳು ಹಾಗೂ ಮದ್ಯ ವ್ಯಸನಿಗಳನ್ನು ಪೊಲೀಸರು ಸಂಪೂರ್ಣ ವಿಚಾರಣೆಗೆ ಒಳಪಡಿಸಿದ್ದು, ನಗರದ ರಿಂಗ್ ರಸ್ತೆಯಲ್ಲಿ ಕುಡುಕರ ಹಾವಳಿ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವ ಉದ್ದೇಶದಿಂದ ಪೊಲೀಸ್ ಇಲಾಖೆ ಗಸ್ತು ಹೆಚ್ಚಿಸಿದೆ. ಸಂಜೆಯ ನಂತರ ಅರ್ಧಗಂಟೆಗೆ ಒಮ್ಮೆ ಗಸ್ತು ವಾಹನಗಳು ಸಂಚಾರ ಮಾಡಲಿದ್ದು, ಸಾರ್ವಜನಿಕವಾಗಿ ಮಧ್ಯ ಸೇವಿಸುವವರ ವಿರುದ್ಧ ಕಠಿಣ ಕ್ರಮಕ್ಕೆ ಡಿಸಿಪಿ ಮುತ್ತುರಾಜ್ ಮುಂದಾಗಿದ್ದಾರೆ. ರಸ್ತೆ ಬದಿ ಮಧ್ಯ ಸೇವಿಸುವವರನ್ನು ವಶಕ್ಕೆ ತೆಗೆದುಕೊಂಡು ಪೊಲೀಸ್ ಇಲಾಖೆ ಎಚ್ಚರಿಕೆ ನೀಡುತ್ತಿದೆ.