ದಲಿತ ಚಳವಳಿ ಹೋಳಾಗಿರುವುದು ಸಾಮಾಜಿಕ ಬದಲಾವಣೆಗೆ ದೊಡ್ಡ ಹಿನ್ನಡೆ: ಶ್ರೀಮತಿ ಕೆಸ್ತಾರ

Update: 2019-05-12 17:16 GMT

ಕೋಲಾರ, ಮೇ 12: ಮನೆ ಮನೆಗೂ ಅಂಬೇಡ್ಕರ್ ಅವರನ್ನು ತಲುಪಿಸುವ ಮೊದಲು ಮನ-ಮನಗೂ ಅಂಬೇಡ್ಕರ್ ತಲುಪಿಸಬೇಕು ಎಂದು ಬೆಂಗಳೂರಿನ ಡಾ.ಬಿ.ಅರ್.ಅಂಬೇಡ್ಕರ್ ತಾಂತ್ರಿಕ ಮಹಾವಿದ್ಯಾಲಯದ ಉಪನ್ಯಾಸಕಿ ಶ್ರೀಮತಿ ಕೆಸ್ತಾರ ಅಭಿಪ್ರಾಯ ವ್ಯಕ್ತಪಡಿಸಿದರು. 

ನಗರದ ಪತ್ರಕರ್ತರ ಭವನದಲ್ಲಿ ಬುಡ್ಡಿದೀಪ ಪ್ರಕಾಶನ ಆಯೋಜಿಸಿದ್ದ ಮನೆ ಮನೆಗೆ ಅಂಬೇಡ್ಕರ್, ಒಂದು ದುಂಡುಮೇಜಿನ ಸಂವಾದ ಹಾಗೂ ಮಹಾನದಿಯ ಉಗಮ (ಭೀವಾ ಅಂಬೇಡ್ಕರ್ ಡಾ.ಬಿ.ಆರ್.ಅಂಬೇಡ್ಕರ್ ಆದದ್ದು) ಪುಸ್ತಕ ಬಿಡುಗಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.  

ಪ್ರಚಂಡ ಶಕ್ತಿಯಾಗಿದ್ದ ದಲಿತ ಚಳವಳಿ ತನ್ನ ಆಂತರಿಕ ಬಿಕ್ಕಟ್ಟಿನ ಪರಿಣಾಮವಾಗಿ ಇಂದು ಹಲವು ಗುಂಪುಗಳಾಗಿ ಹೋಳಾಗಿರುವುದು ಸಾಮಾಜಿಕ ಬದಲಾವಣೆಗೆ ದೊಡ್ಡ ಹಿನ್ನಡೆಯಾಗಿದೆ. ಇಂದಿಗೂ ಶಿಕ್ಷಣ ಮತ್ತು ಮಾಧ್ಯಮ ಕ್ಷೇತ್ರದಲ್ಲಿ ಅಸ್ಪೃಶ್ಯ ಸಮುದಾಯಗಳು ನೆಲೆಕಂಡುಕೊಳ್ಳಲು ಸಾಧ್ಯವಾಗಿಲ್ಲ ಎಂದು ವಿಷಾದಿಸಿದರು. 

ಸಾಹಿತಿ ಕೋಟಿಗಾನಹಳ್ಳಿ ರಾಮಯ್ಯ ಮಾತನಾಡಿ, ನಾಲ್ಕು ದಶಕಗಳ ಹಿಂದೆ ಕೋಲಾರದ ನೆಲದಲ್ಲಿ ದಲಿತ ಸಮುದಾಯದ ಮೊದಲ ಹೆಜ್ಜೆ ನಚಿಕೇತ ನಿಲಯದಲ್ಲಿತ್ತು. ನನ್ನಂಥ ನೂರಾರು ಮಂದಿ ಇಲ್ಲಿಯೇ ಪ್ರಜ್ಞೆ ಮಾಡಿಕೊಂಡೆವು. ಅಂದು ಬಲಹೀನ ಪಾದಗಳಿಗೆ ಬಲಕೊಟ್ಟಿದ್ದು ಆಗಿನ ಪ್ರಾಮಾಣಿಕ ದಲಿತ ಪ್ರಜ್ಞೆ. ಇಂದು ಬಲಹೀನ ಪಾದಗಳಿಗೆ ಬಲ ಬಂದಿದೆ. ಆದರೆ ಬಲ ತಂದುಕೊಟ್ಟ ಆ ಸಮುದಾಯವನ್ನೇ ತುಳಿಯುತ್ತಿರುವ ಆತ್ಮಘಾತುಕ ಪ್ರವೃತ್ತಿ ಆವರಿಸಿದೆ ಆತಂಕ ವ್ಯಕ್ತಪಡಿಸಿದರು. 

ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಹೈಕೋರ್ಟ್ ನ್ಯಾಯವಾದಿ ಮೋಹನ್ ಕುಮಾರ್, ಇಂದು ಸಮಾಜದಲ್ಲಿ ಸಾಮುದಾಯಿಕ ಗುರುತಿಸಿಕೊಳ್ಳುವಿಕೆ ಒಂದು ಸವಾಲಾಗಿದೆ. ಸಮಾಜದ ಬದಲಾವಣೆಗೆ ಸಂವಿಧಾನ ಹಾಗೂ ಬುದ್ಧ ಮತ್ತು ದಮ್ಮ ಎಂಬ ಎರಡು ಪಠ್ಯಗಳನ್ನು ಮೈಗೂಡಿಸಿಕೊಂಡು ಸಮಾಜದ ಹಾರೈಕೆ ಮತ್ತು ಹಂಚಿಕೆ ಪರಿಪೂರ್ಣಗೊಳಿಸಿದರೆ ಗುರುತಿಸುವಿಕೆಗೆ ಮದ್ದು ಸಿಕ್ಕಿದಂತೆ ಎಂದರು. 

ಅಧ್ಯಕ್ಷತೆ ವಹಿಸಿದ್ದ ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ಕೋಲಾರ ಕೇಂದ್ರದ ನಿರ್ದೇಶಕ ಡಾ.ಡೊಮಿನಿಕ್ ಮಾತನಾಡಿ, ಅಂಬೇಡ್ಕರ್ ತಮ್ಮ ಕೊನೆಯ ದಿನಗಳಲ್ಲಿ ಬರೆದ ಕೆಲವು ಬರಹಗಳಲ್ಲಿ ಅವರು, ತನಗೆ ಬುದ್ಧ, ಕಬೀರ್ ಮತ್ತು ಪುಲೆ ನನ್ನ ಗುರುಗಳಾಗಿ, ವಿದ್ಯೆ, ಸ್ವಾಭಿಮಾನ ಮತ್ತು ಶೀಲ ಎಂಬ ಮೂರು ದೇವತಗಳನ್ನು ತೋರಿಸಿಕೊಟ್ಟರು, ಅದನ್ನೇ ಇಂದು ನಾವು ಅನುಸರಿಸಬೇಕಾದ ಅನಿವಾರ್ಯವಾಗಿದೆ ಎಂದರು.

ಈ ಸಂದರ್ಭದಲ್ಲಿ ಚಿಂತಕ  ಸಿ.ಜಿ.ಲಕ್ಷ್ಮೀಪತಿ, ಲೇಖಕ ಪ್ರೊ.ಎಂ.ನಾರಾಯಣಸ್ವಾಮಿ, ಜಿಲ್ಲಾ ಕ.ಸಾ.ಪ ಅಧ್ಯಕ್ಷ ನಾಗಾನಂದ ಕೆಂಪರಾಜು, ಆರ್.ಪಿ.ಐ. ರಾಜ್ಯಾಧ್ಯಕ್ಷ ಎಂ. ವೆಂಕಟಸ್ವಾಮಿ, ಅಂಬೇಡ್ಕರ್ ಸೇವಾ ಸಮಿತಿ ರಾಜ್ಯಾಧ್ಯಕ್ಷ  ಕೆ.ಎಂ.ಸಂದೇಶ, ಉಪನ್ಯಾಸಕ ಜೆ.ಜಿ.ನಾಗರಾಜ್, ಹೆಬ್ಬಾಳ ವೆಂಕಟೇಶ್. ಸಿ.ವಿ.ನಾಗರಾಜ್, ಗೋವಿಂದಪ್ಪ, ಪ್ರವೀಣ್, ಮಾಲೂರು ಆನಂದ್, ಬುಡ್ಡಿದೀಪ ಶಾಲೆಯ ಕಲಾವಿದ ನಾರಾಯಣಸ್ವಾಮಿ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News