ರೆಸಾರ್ಟ್‍ನಿಂದ ನಿರ್ಗಮಿಸಿದ ಕುಮಾರಸ್ವಾಮಿ: ಮಾಧ್ಯಮಗಳ ವಿರುದ್ಧ ಸಾ.ರಾ.ಮಹೇಶ್ ಅಸಮಾಧಾನ

Update: 2019-05-12 17:21 GMT

ಮಡಿಕೇರಿ ಮೇ 12 : ವಿಶ್ರಾಂತಿಗಾಗಿ ರೆಸಾರ್ಟ್‍ನಲ್ಲಿ ಎರಡು ದಿನ ತಂಗಿದ್ದ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಮಡಿಕೇರಿಯಿಂದ ತೆರಳಿದ್ದಾರೆ. 

ಪುತ್ರ ನಿಖಿಲ್ ಕುಮಾರಸ್ವಾಮಿ ಅವರು ನಿರ್ಗಮಿಸಿದ ಕೆಲವು ಗಂಟೆಗಳ ನಂತರ ಸಿಎಂ ಹಾಗೂ ಪತ್ನಿ ಅನಿತಾ ಕುಮಾರಸ್ವಾಮಿ ಮಂಡ್ಯ ಕಡೆಗೆ ಪ್ರಯಾಣ ಬೆಳಸಿದರು. ಮುಖ್ಯಮಂತ್ರಿಗಳು ಮದ್ದೂರಿನಲ್ಲಿ ಬೀಗರ ಔತಣ ಮುಗಿಸಿ ಬೆಂಗಳೂರಿಗೆ ತೆರಳಲಿದ್ದಾರೆ ಎಂದು ಸಚಿವ ಸಾ.ರಾ.ಮಹೇಶ್ ತಿಳಿಸಿದರು. ಇಂದು ಕೂಡ ಸಿಎಂ ಹೆಚ್‍ಡಿಕೆ ಮಾಧ್ಯಮಗಳೊಂದಿಗೆ ಮಾತನಾಡಲಿಲ್ಲ.

ಸಾ.ರಾ.ಮಹೇಶ್ ಅಸಮಾಧಾನ
ಬಿಜೆಪಿ ಶಾಸಕ ಗೋವಿಂದ ಖಾರಜೋಳ ಅವರು ಸಿಎಂ ವಾಸ್ತವ್ಯದ ವಿರುದ್ಧ ನೀಡಿದ ಆಕ್ಷೇಪಾರ್ಹ ಹೇಳಿಕೆಗೆ ತಿರುಗೇಟು ನೀಡಿದ ಸಚಿವ ಸಾ.ರಾ.ಮಹೇಶ್ 
ಹಿರಿಯ ರಾಜಕಾರಣಿಯಾಗಿ ಈ ರೀತಿಯ ಹೇಳಿಕೆಗಳನ್ನು ನೀಡಬಾರದಾಗಿತ್ತು. ವಿದ್ಯುನ್ಮಾನ ಮಾಧ್ಯಮಗಳಲ್ಲಿ ಇಂದು ರಾಜಕಾರಣಿಗಳನ್ನು ಯಾವ ರೀತಿ ಪ್ರತಿಬಿಂಬಿಸಲಾಗುತ್ತಿದೆ ಎನ್ನುವುದನ್ನು ಗಮನಿಸಬೇಕಾಗಿತ್ತು. ನಾವು ಬಿಜೆಪಿ ಅಧಿಕಾರದಲ್ಲಿದ್ದಾಗ ನಡೆದುಕೊಂಡ ರೀತಿಗಿಂತ ಉತ್ತಮ ರೀತಿಯಲ್ಲಿ ಅಧಿಕಾರ ನಡೆಸುತ್ತಿದ್ದೇವೆ ಎಂದು ಸಮರ್ಥಿಸಿಕೊಂಡರು. 

ಜೆಡಿಎಸ್ ನಾಯಕರಿಂದಲೇ ಟಿವಿ ಮಾದ್ಯಮಗಳಿಗೆ ಟಿಆರ್‍ಪಿ ಹೆಚ್ಚುತ್ತಿದೆ, ಕೆಲವು ಮಾಧ್ಯಮಗಳಿಗೆ ಜೆಡಿಎಸ್ ನಾಯಕರ ಸುದ್ದಿ ಬಿಟ್ಟರೆ ಬೇರೆ ಇಲ್ಲ, ಪ್ರತಿನಿತ್ಯ ಜೆಡಿಎಸ್‍ನವರ ಸುದ್ದಿ ಬಿಟ್ಟರೆ ಬೇರೆ ಸುದ್ದಿಗಳಿಲ್ಲ. ದೇವೇಗೌಡರ ಕುಟುಂಬ ಹಾಗೂ ಜೆಡಿಎಸ್ ಮುಖಂಡರಿಂದಲೇ ಟಿಆರ್‍ಪಿ ಬರುತ್ತಿದೆ ಎಂದು ಕಾಣುತ್ತಿದೆ. ಅದಕ್ಕಾಗಿಯೇ ಇದೇ ವಿಚಾರವನ್ನು ತೋರಿಸುತ್ತಿದ್ದಾರೆ. ಕೆಲವು ಮಾದ್ಯಮಗಳು ಮನಸ್ಸಿಗೆ ತೋಚಿದಂತೆ ರೆಸಾರ್ಟ್ ಬಿಲ್ ಹಣವನ್ನು ಹಾಕುತ್ತಿವೆ. ಇಲ್ಲಿ ಒಂದು ರೂಂಗೆ ಡಿಸ್ಕೌಂಟ್ ಕಳೆದು ಕೇವಲ 14 ಸಾವಿರ ಇದೆ. ಬೇಕಿದ್ದರೆ ಆನ್ ಲೈನ್ ನಲ್ಲಿ ಟಾರಿಫ್ ತೆಗೆದು ನೋಡಿ. ಸುಮ್ಮನೆ ಮನಸ್ಸಿಗೆ ತೋಚಿದಂತೆ ತೋರಿಸಬೇಡಿ ಎಂದು ಸಾ.ರಾ.ಮಹೇಶ್ ಆಕ್ರೋಶ ವ್ಯಕ್ತಪಡಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News