ಮೈತ್ರಿ ಸರಕಾರ ಬಹಳ ದಿನ ಉಳಿಯುವುದಿಲ್ಲ: ಮಾಜಿ ಸಿಎಂ ಯಡಿಯೂರಪ್ಪ

Update: 2019-05-13 13:53 GMT

ಕಲಬುರಗಿ, ಮೇ 13: ಇತ್ತೀಚಿನ ದಿನಗಳಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಮುಖಂಡರ ಹೇಳಿಕೆಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ರಾಜ್ಯದಲ್ಲಿನ ಮೈತ್ರಿ ಸರಕಾರ ಬಹಳ ದಿನ ಉಳಿಯುವುದಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಭವಿಷ್ಯ ನುಡಿದಿದ್ದಾರೆ.

ಸೋಮವಾರ ಇಲ್ಲಿನ ಚಿಂಚೋಳಿ ಕ್ಷೇತ್ರದ ಉಪಚುನಾವಣೆಯ ಅಂಗವಾಗಿ ಚಿಮ್ಮನಚೋಡ್‌ನಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ಮೇ 23ರ ನಂತರ ಮಲ್ಲಿಕಾರ್ಜುನ ಖರ್ಗೆ ಸೋಲಲಿದ್ದಾರೆ. ಚಿಂಚೋಳಿ, ಕುಂದಗೋಳ ಉಪಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದರೆ ರಾಜ್ಯ ರಾಜಕೀಯದಲ್ಲಿ ಬದಲಾವಣೆ ಆಗುವುದು ಖಚಿತ. ಐವತ್ತು ವರ್ಷಗಳಿಂದ ಅಧಿಕಾರದ ಚುಕ್ಕಾಣಿ ಹಿಡಿದಿರುವ ಮಲ್ಲಿಕಾರ್ಜುನ ಖರ್ಗೆ ಅವರು ಈ ಕ್ಷೇತ್ರದ ಅಭಿವೃದ್ದಿಗೆ ಕಾಳಜಿ ತೋರಿಸಿಲ್ಲ. ಕಳೆದ ಬಾರಿ ಚಿಂಚೋಳಿಯಲ್ಲಿ ಸಕ್ಕರೆ ಕಾರ್ಖಾನೆ ಪ್ರಾರಂಭಕ್ಕೆ ಜಾಧವ್ ಸಾಕಷ್ಟು ಪ್ರಯತ್ನಪಟ್ಟರು. ಆದರೆ, ಅದಕ್ಕೆ ಅಡ್ಡಗಾಲು ಹಾಕಿದ್ದು ಖರ್ಗೆ. ಚಿಂಚೋಳಿ ಕ್ಷೇತ್ರದಲ್ಲಿ ಸಕ್ಕರೆ ಕಾರ್ಖಾನೆ ಪ್ರಾರಂಭಿಸುವ ಭರವಸೆಯನ್ನು ನೀಡಿದ ಅವರು, ಕೋಲಿ ಸಮಾಜವನ್ನು ಎಸ್ಟಿಗೆ ಸೇರಿಸುವುದು ನನ್ನ ಜವಾಬ್ದಾರಿ ಎಂದರು.

ಸಾಲಮನ್ನಾ ಮಾಡುತ್ತೇನೆ ಎಂದು ಮೂಗಿಗೆ ತುಪ್ಪ ಹಚ್ಚುವ ಕೆಲಸ ಮಾಡಬೇಡಿ. ಸಾಲಮನ್ನಾ ಮಾಡಿ ಅಧಿಕಾರ ಬಿಟ್ಟು ತೊಲಗಿ ಎಂದು ಹೇಳಿದ ಹಾಕಿದ ಅವರು, ತಮ್ಮ ಅವಧಿಯಲ್ಲಿ ಸಾಕಷ್ಟು ಅಭಿವೃದ್ದಿ ಕಾರ್ಯಗಳನ್ನು ಕೈಗೊಳ್ಳಲಾಗಿತ್ತು. ಹಲವು ಕ್ರಾಂತಿಕಾರಕ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿತ್ತು, ಈ ಸರಕಾರ ನನ್ನ ಯೋಜನೆಗಳನ್ನು ಮುಂದುವರೆಸುತ್ತಿಲ್ಲ ಎಂದು ಆರೋಪಿಸಿದರು.

ಮೇ 23ರಂದು ಬಿಜೆಪಿ ಶಾಸಕರ ಸಭೆ ಕರೆಯುತ್ತೇವೆ. ಸಿದ್ದರಾಮಯ್ಯ ವಿರುದ್ಧ ಜೆಡಿಎಸ್ ನಾಯಕರು ಹೇಳಿಕೆಗಳನ್ನು ನೀಡುತ್ತಿದ್ದಾರೆ. ಈ ಹೇಳಿಕೆಗಳನ್ನು ಗಮನಿಸಿದರೆ ಈ ಸರಕಾರ ಬಹಳಷ್ಟು ದಿನ ಇರುವುದಿಲ್ಲ ಎನ್ನುವುದು ನಿಶ್ಚಿತ. ನಾವು ಸರಕಾರ ಬೀಳಿಸುವುದು ಬೇಡ, ಅವರೆ ಕಚ್ಚಾಡಿಕೊಂಡು ಸರಕಾರವನ್ನು ಕಳೆದುಕೊಳ್ಳುತ್ತಾರೆ ಎಂದು ಅವರು ಹೇಳಿದರು.

ಮೂರಕ್ಕೇ ರೆಸಾರ್ಟ್!

ಉಪ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಕುಂದಗೋಳ ಮತ್ತು ಚಿಂಚೋಳಿಯಲ್ಲಿದೆ. ಅಭಿವೃದ್ದಿ ಮಾಡಬೇಕಾದ ಸಿಎಂ ರೆಸಾರ್ಟ್‌ನಲ್ಲಿದ್ದಾರೆ. ಐತಿಹಾಸಿಕ ವಿಧಾನಸೌಧವನ್ನು ಬಿಟ್ಟು ಎಲ್ಲೆಲ್ಲೋ ಕೂತು ಆಡಳಿತ ನಡೆಸುತ್ತಿದ್ದಾರೆ. ಏಳು ಕ್ಷೇತ್ರಗಳಲ್ಲಿ ಜೆಡಿಎಸ್ ಸ್ಪರ್ಧೆ ಮಾಡಿದರೆ, ಸಿಎಂ ಕುಮಾರಸ್ವಾಮಿ ಪ್ರಕಾರ ಮಾಡಿದ್ದು ಮೂರು ಕ್ಷೇತ್ರಗಳಲ್ಲಿ ಮಾತ್ರ. ಇಷ್ಟಕ್ಕೆ ವಿಶ್ರಾಂತಿ ನೆಪದಲ್ಲಿ ರೆಸಾರ್ಟ್‌ಗೆ ತೆರಳಿದ್ದಾರೆ. ಬರ ಪರಿಹಾರ ಕಾರ್ಯಕ್ಕೆ ಕೇಂದ್ರ ನೀಡಿದ ಹಣವನ್ನೂ ಸರಿಯಾಗಿ ಬಳಸಿಲ್ಲ.

-ಶೋಭಾ ಕರಂದ್ಲಾಜೆ ಸಂಸದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News