ಮತ್ತೆ ಚುನಾವಣೆಗೆ ಹೋಗಲು ಬಿಜೆಪಿ ಸಿದ್ಧ: ಶಾಸಕ ಬಿ.ಶ್ರೀರಾಮುಲು

Update: 2019-05-13 13:00 GMT

ಹುಬ್ಬಳ್ಳಿ, ಮೇ 13: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರಕಾರವು ಆಡಳಿತ ಪಕ್ಷದ ಶಾಸಕರಿಗೆ ಬೇಡವಾಗಿದೆ. ಕುಮಾರಸ್ವಾಮಿಯನ್ನು ಮುಖ್ಯಮಂತ್ರಿಯಾಗಿ ಒಪ್ಪಿಕೊಳ್ಳಲು ಮಿತ್ರ ಪಕ್ಷದ ಹಲವು ಶಾಸಕರು ಸಿದ್ಧರಿಲ್ಲ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಹಾಗೂ ಶಾಸಕ ಬಿ.ಶ್ರೀರಾಮುಲು ತಿಳಿಸಿದ್ದಾರೆ.

ಸೋಮವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಮೈತ್ರಿ ಸರಕಾರ ಯಾರಿಗೂ ಬೇಡವಾಗಿದೆ. ಈ ಸರಕಾರವನ್ನು ಕೂಡಲೇ ವಿಸರ್ಜಿಸಬೇಕು. ನಾವೆಲ್ಲ ಮತ್ತೆ ಚುನಾವಣೆಗೆ ಹೋಗಲು ಸಿದ್ಧರಿದ್ದೇವೆ, ರಾಜ್ಯಪಾಲರು ಅವಕಾಶ ಮಾಡಿಕೊಟ್ಟರೆ ಸದನದಲ್ಲಿ ಬಹುಮತ ಸಾಬೀತುಪಡಿಸಲು ಸಿದ್ಧವಿದ್ದೇವೆ ಎಂದರು.

ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಡುವಿನ ಕಚ್ಚಾಟ ನೋಡಿದರೆ, ಈ ಮೈತ್ರಿ ಸರಕಾರದ ಬಹಳ ಉಳಿಯಲು ಸಾಧ್ಯವಿಲ್ಲ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ. ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ ಪರ ಚಮಚಾಗಿರಿ ಮಾಡಲಾಗುತ್ತಿದೆ ಎಂದು ವಿಶ್ವನಾಥ್ ನೀಡಿರುವ ಹೇಳಿಕೆ ನೂರಕ್ಕೆ ನೂರರಷ್ಟು ಸತ್ಯ ಎಂದು ಅವರು ಹೇಳಿದರು.

ಮುಖ್ಯಮಂತ್ರಿ ಮತ್ತು ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ನಿಯಮಗಳನ್ನು ಗಾಳಿಗೆ ತೂರಿ ಗುತ್ತಿಗೆ ಕೊಟ್ಟಿದ್ದಾರೆ ಎಂದು ಎಸ್ಸಿ-ಎಸ್ಟಿ ಗುತ್ತಿಗೆದಾರರ ಸಂಘದ ಮಹದೇವಪ್ಪಎಸಿಬಿಗೆ ದೂರು ನೀಡಿದ್ದಾರೆ. ಇದರಿಂದ ಸುಮಾರು 10 ಸಾವಿರ ಕೋಟಿ ರೂ.ನಷ್ಟ ಮಾಡಿದ್ದಾರೆ ಎಂದು ಮಹದೇವಪ್ಪ ಆರೋಪಿಸಿದ್ದಾರೆ. ಈ ಸಂಬಂಧ ಮುಖ್ಯಮಂತ್ರಿ ಉತ್ತರ ನೀಡಲಿ ಎಂದು ಶ್ರೀರಾಮುಲು ಆಗ್ರಹಿಸಿದರು.

ವಿಧಾನಸಭಾ ಚುನಾವಣೆಗೆ ಮುನ್ನ ಹುಬ್ಬಳ್ಳಿಯಲ್ಲಿ ಬಾಡಿಗೆ ಮನೆ ತೆಗೆದುಕೊಂಡಿದ್ದ ಕುಮಾರಸ್ವಾಮಿ, ಆನಂತರ ಮನೆ ಖಾಲಿ ಮಾಡಿಕೊಂಡು ಹೋಗಿದ್ದಾರೆ. ಚುನಾವಣಾ ಪ್ರಚಾರದ ನೆಪದಲ್ಲಿ ಈಗ ಹುಬ್ಬಳ್ಳಿ ಕಡೆ ಬರುತ್ತಿದ್ದಾರೆ. ಬಜೆಟ್‌ನಲ್ಲಿ ಹಳೆ ಮೈಸೂರು ಭಾಗದ ಕೆಲವು ಜಿಲ್ಲೆಗಳಿಗೆ ಮಾತ್ರ ಅನುದಾನ ಕೊಟ್ಟಿದ್ದ ಮುಖ್ಯಮಂತ್ರಿ, ಉತ್ತರ ಕರ್ನಾಟಕ ಭಾಗದ ಅಭಿವೃದ್ಧಿಗೂ ಅನುದಾನ ನೀಡಲಿ ಎಂದು ಅವರು ಒತ್ತಾಯಿಸಿದರು.

ಕುಂದಗೋಳ ಕ್ಷೇತ್ರದಲ್ಲಿ ಸೋಲಿನ ಭಯದಿಂದಾಗಿ ಸಚಿವ ಡಿ.ಕೆ.ಶಿವಕುಮಾರ್, ನಮ್ಮ ಪಕ್ಷದ ಕಾರ್ಯಕರ್ತರಿಗೆ ಕರೆ ಮಾಡಿ ಬೆದರಿಕೆ ಹಾಕುತ್ತಿದ್ದಾರೆ. ಕನಕಪುರದ ಕಡೆ ಅವರು ಈ ಬೆದರಿಕೆ ರಾಜಕಾರಣ ಮಾಡಿಕೊಳ್ಳಲಿ, ಈ ಭಾಗದಲ್ಲಿ ನಮ್ಮ ಕಾರ್ಯಕರ್ತರಿಗೆ ಬೆದರಿಕೆ ಹಾಕುವ ದುಸ್ಸಾಹಸಕ್ಕೆ ಕೈ ಹಾಕುವುದು ಬೇಡ ಎಂದು ಶ್ರೀರಾಮುಲು ಎಚ್ಚರಿಕೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News