×
Ad

ಮೇ 25 ರೊಳಗೆ ಬಿಎಸ್‌ವೈ ಮುಖ್ಯಮಂತ್ರಿಯಾದರೆ ರಾಜಕೀಯ ನಿವೃತ್ತಿ: ಸಚಿವ ಝಮೀರ್

Update: 2019-05-13 19:45 IST

ಹುಬ್ಬಳ್ಳಿ, ಮೇ 13: ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಇನ್ನು ಮುಂದೆ ಯಾವುದೇ ಕಾರಣಕ್ಕೂ ಮುಖ್ಯಮಂತ್ರಿಯಾಗುವುದಿಲ್ಲ. ಒಂದು ವೇಳೆ ಅವರು ಲೋಕಸಭಾ ಚುನಾವಣೆ ಫಲಿತಾಂಶ ಪ್ರಕಟವಾದ ನಂತರ ಮುಖ್ಯಮಂತ್ರಿಯಾದರೆ ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಬಿ.ಝೆಡ್.ಝಮೀರ್ ಅಹ್ಮದ್ ಖಾನ್ ಸವಾಲು ಹಾಕಿದ್ದಾರೆ.

ಸೋಮವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೇ 25ರವರೆಗೆ ಅವರಿಗೆ ಕಾಲಾವಕಾಶ ನೀಡುತ್ತೇನೆ. ಅಷ್ಟರೊಳಗೆ ಯಡಿಯೂರಪ್ಪ ಸರಕಾರ ರಚನೆ ಮಾಡಿದರೆ ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ. ಇಲ್ಲದಿದ್ದರೆ ಅವರು ರಾಜಕೀಯ ನಿವೃತ್ತಿ ಪಡೆಯುತ್ತಾರೆಯೇ ಎಂದು ಪ್ರಶ್ನಿಸಿದರು.

ರಾಜ್ಯದ ಜನ ಯಡಿಯೂರಪ್ಪರನ್ನು ಯಾಕೆ ಮುಖ್ಯಮಂತ್ರಿ ಮಾಡಬೇಕು? ಒಂದು ವೇಳೆ ಯಡಿಯೂರಪ್ಪ ಈಗ ಮುಖ್ಯಮಂತ್ರಿ ಆದರೆ, ಅವರ ಮನೆ ಎದುರು ಒಂದು ದಿನ ಸಮವಸ್ತ್ರ ಧರಿಸಿ ಕಾವಲುಗಾರನಾಗಿ ಕೆಲಸ ಮಾಡುತ್ತೇನೆ ಎಂದು ಝಮೀರ್ ಅಹ್ಮದ್ ಖಾನ್ ಹೇಳಿದರು.

ಸಿದ್ದರಾಮಯ್ಯ ಬಗ್ಗೆ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ನೀಡಿರುವ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ನಾವು ಯಾರೂ ಸಿದ್ದರಾಮಯ್ಯ ಅವರ ಚಮಚಾಗಳಲ್ಲ, ಅವರ ಕಟ್ಟಾ ಅಭಿಮಾನಿಗಳು. ಚಮಚಾಗಿರಿ ಮಾಡುವ ಅಭ್ಯಾಸ ನಮಗಿಲ್ಲ ಎಂದು ತಿರುಗೇಟು ನೀಡಿದರು.

ಎಸ್.ಎಂ.ಕೃಷ್ಣ ಅಧಿಕಾರಾವಧಿಯಲ್ಲಿ ವಿಶ್ವನಾಥ್ ಚಮಚಾಗಿರಿ ಮಾಡಿರಬೇಕು. ಅದಕ್ಕಾಗಿ ಈಗ ಚಮಚಾಗಿರಿಯ ಬಗ್ಗೆ ಮಾತನಾಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷ ಹಾಗೂ ಸಿದ್ದರಾಮಯ್ಯ ಬಗ್ಗೆ ಮಾತನಾಡುವ ಹಕ್ಕು ವಿಶ್ವನಾಥ್‌ಗೆ ಇಲ್ಲ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಬೇಕು ಎಂಬುದು ಜನರ ಬಯಕೆಯಾಗಿದೆ ಎಂದು ಝಮೀರ್ ಅಹ್ಮದ್ ಖಾನ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News