ಮುಧೋಳ್: ಸವರ್ಣಿಯರಿಂದ ದಲಿತ ವ್ಯಕ್ತಿಯ ಮೇಲೆ ಮಾರಣಾಂತಿಕ ಹಲ್ಲೆ

Update: 2019-05-13 14:44 GMT

ಬಾಗಲಕೋಟೆ, ಮೇ 13: ಕ್ಷುಲ್ಲಕ ಕಾರಣಕ್ಕೆ ದಲಿತ ಕುಟುಂಬವೊಂದರ ಮೇಲೆ ಸವರ್ಣಿಯರ ಗುಂಪು ಮಾರಕಾಸ್ತ್ರಗಳಿಂದ ದಾಳಿ ನಡೆಸಿದ್ದು ದಲಿತ ಸಮುದಾಯದ ಓರ್ವ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಜಿಲ್ಲೆಯ ಮುಧೋಳ್ ತಾಲೂಕಿನ ಶಿರೋಳ್ ಗ್ರಾಮದಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

ಮೇ 8ರ ರಾತ್ರಿ ಘಟನೆ ನಡೆದಿದ್ದು, ದಲಿತ ಸಮುದಾಯದ ಯಲ್ಲಪ್ಪ ತಳಗೇರಿ (50) ಎಂಬವರ ತಲೆ-ಎದೆಗೆ ತೀವ್ರ ಪೆಟ್ಟು ತಗುಲಿದೆ. ಜಿಲ್ಲಾಸ್ಪತ್ರೆಯಲ್ಲಿ ಸಾವು- ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದು, ಅವರಿಗೆ 19ಕ್ಕೂ ಹೆಚ್ಚು ಹೊಲಿಗೆ ಹಾಕಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆಂದು ಗೊತ್ತಾಗಿದೆ.

ಘಟನೆ ವಿವರ: ಬೈಕ್‌ನ ವಿಚಾರಕ್ಕೆ ಸಂಬಂಧಿಸಿದಂತೆ ಮೇ 7ರಂದು ದಲಿತ ಯುವಕರು ಮತ್ತು ಸವರ್ಣಿಯರ ನಡುವೆ ಜಗಳ ನಡೆದಿತ್ತು. ಅದೇ ದ್ವೇಷದಿಂದ ಮೇ 8ರ ರಾತ್ರಿ ನೂರಕ್ಕೂ ಹೆಚ್ಚು ಜನರಿದ್ದ ಸವರ್ಣಿಯರ ಗುಂಪು ಯಲ್ಲಪ್ಪ ತಳಗೇರಿ ನಿವಾಸದ ಮೇಲೆ ಮಾರಕಾಸ್ತ್ರಗಳಿಂದ ಏಕಾಏಕಿ ದಾಳಿ ನಡೆಸಿದ್ದಾರೆ. ದಲಿತರ ಮನೆಯ ಕಿಟಕಿ ಗಾಜುಗಳನ್ನು ಪುಡಿಗೈದಿದ್ದು, ಬೈಕ್, ಕಾರುಗಳನ್ನು ಜಖಂಗೊಳಿಸಿದ್ದಾರೆ.

ಇದೇ ವೇಳೆ ಕೈಗೆ ಸಿಕ್ಕ ದಲಿತ ಸಮುದಾಯದ ಮಕ್ಕಳು, ವೃದ್ಧರು, ಮಹಿಳೆಯರ ಮೇಲೆ ಮನಸೋ ಇಚ್ಛೆ ಹಲ್ಲೆ ನಡೆಸಿದ್ದು, ಯಲ್ಲಪ್ಪ ತಳಗೇರಿ ಅವರ ಮೇಲೆ ಮಾರಕಾಸ್ತ್ರದಿಂದ ದಾಳಿ ಮಾಡಿದ್ದು ಅವರ ಎದೆ-ತಲೆಗೆ ತೀವ್ರ ಪೆಟ್ಟುಬಿದ್ದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಪ್ರಕರಣ ಸಂಬಂಧ ಸವರ್ಣಿಯ ಸಮುದಾಯಕ್ಕೆ ಸೇರಿದ ಮಹೇಶ್‌ಗೌಡ ಸೇರಿದಂತೆ ಏಳು ಮಂದಿಯನ್ನು ಬಂಧಿಸಲಾಗಿದೆ. ಗ್ರಾಮದಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದ್ದು, ಕರ್ಫ್ಯೂ ಹೇರಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸ್ ವರಿಷ್ಠಾಧಿಕಾರಿ ನೇತೃತ್ವದಲ್ಲಿ ಗ್ರಾಮದಲ್ಲಿ ಶಾಂತಿ ಸಭೆ ನಡೆಸಿದ್ದಾರೆ. ಈ ಪ್ರಕರಣ ಸಂಬಂಧ ಇಲ್ಲಿನ ಮುಧೋಳ್ ಠಾಣಾ ಪೊಲೀಸರು ಮೊಕದ್ದಮೆ ದಾಖಲಿಸಿಕೊಂಡಿದ್ದು, ಗಲಾಟೆ ಕೃತ್ಯದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿರುವ ಆರೋಪಿಗಳ ಬಂಧನಕ್ಕೆ ಶೋಧ ಕಾರ್ಯ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News